ಬುಧವಾರ, ಮೇ 12, 2021
18 °C
ಸತತ ಸೋಲಿನಿಂದ ಕಂಗೆಟ್ಟಿರುವ ಡೇವಿಡ್ ವಾರ್ನರ್ ಬಳಗಕ್ಕೆ ರೋಹಿತ್ ಪಡೆ ಸವಾಲು

IPL-2021 SRH vs MI| ಭರವಸೆಯ ಅಲೆಯಲ್ಲಿ ಮುಂಬೈ; ಹೈದರಾಬಾದ್‌ಗೆ ಆಯ್ಕೆ ಗೊಂದಲ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಸಮರ್ಪಕ ತಂಡವನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸುವ ಗೊಂದಲದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ಕಣಕ್ಕೆ ಇಳಿಯಲಿದೆ.

ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್ ಎರಡನೇ ಪಂದ್ಯದಲ್ಲೂ ಸೋಲುವ ಆತಂಕಕ್ಕೆ ಒಳಗಾಗಿತ್ತು. ಆದರೆ ದಿಟ್ಟತನ ಪ್ರದರ್ಶಿಸಿ ಸಂಘಟಿತ ಹೋರಾಟದ ಮೂಲಕ ಗೆಲುವಿನ ತೋರಣ ಕಟ್ಟಲು ತಂಡಕ್ಕೆ ಸಾಧ್ಯವಾಗಿತ್ತು. ಹೀಗಾಗಿ ಅದು ಈಗ ಭರವಸೆಯ ಅಲೆಯಲ್ಲಿ ತೇಲುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ಜಯದ ಹಾದಿಗೆ ಮರಳುವ ನಿರೀಕ್ಷೆಯಲ್ಲಿದೆ.

ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಗೆಲುವಿಗೆ 188 ರನ್‌ಗಳ ಗುರಿ ಬೆನ್ನತ್ತಿದ ಸನ್‌ರೈಸರ್ಸ್ 10 ರನ್‌ಗಳಿಂದ ಸೋತಿತ್ತು. ಆದರೆ ಎರಡನೇ ಪಂದ್ಯದಲ್ಲಿ 150 ರನ್‌ಗಳ ಗುರಿಯನ್ನು ತಲುಪಲು ಸಾಧ್ಯವಾಗದೆ ಆರು ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶರಣಾಗಿತ್ತು. ಅಂತಿಮ 11 ಆಟಗಾರರ ಆಯ್ಕೆಯಲ್ಲಿ ಆಗುತ್ತಿರುವ ಲೋಪವೇ ಇದಕ್ಕೆ ಕಾರಣವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ‘ಆರೆಂಜ್ ಪಡೆ’ ಪ್ರಯತ್ನಿಸುತ್ತಿದೆ. ಆದರೆ ಅದಕ್ಕೆ ಸಾಕಷ್ಟು ‘ಬೆಂಚ್‌ ಬಲ’ ತಂಡದಲ್ಲಿಲ್ಲ.

ಆರ್‌ಸಿಬಿಗೆ ಎರಡು ವಿಕೆಟ್‌ಗಳಿಂದ ಮಣಿದಿದ್ದ ಚಾಂಪಿಯನ್ ಮುಂಬೈ ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್ ಎದುರು ‘ಮ್ಯಾಜಿಕ್‌’ ಮಾಡಿ ಗೆದ್ದಿತ್ತು. ಕೇವಲ 152 ರನ್‌ ಕಲೆ ಹಾಕಿದ್ದರೂ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು.

ಅಂಥ ಬಲಿಷ್ಠ ತಂಡವನ್ನು ಎದುರಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸನ್‌ರೈಸರ್ಸ್‌ಗೆ ಸವಾಲೇ ಸರಿ. ಹಿಂದಿನ ಎರಡೂ ಪಂದ್ಯಗಳಲ್ಲಿ ಇಬ್ಬರು ವಿಕೆಟ್ ಕೀಪರ್‌ ‌ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕೆ ಇಳಿಸಿದ್ದ ಸನ್‌ರೈಸರ್ಸ್ ಅದರಲ್ಲಿ ಯಶಸ್ಸು ಕಂಡಿಲ್ಲ. ಇನಿಂಗ್ಸ್ ಆರಂಭಿಸುತ್ತಿರುವ ವೃದ್ಧಿಮಾನ್ ಸಹಾ ವೈಫಲ್ಯ ಕಾಣುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಏಳು ರನ್ ಗಳಿಸಿದ್ದ ಅವರು ನಂತರ ಒಂದು ರನ್‌ಗೆ ಔಟಾಗಿದ್ದರು. 

ಮೊದಲ ಆವೃತ್ತಿಯಿಂದಲೇ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿರುವ ವೃದ್ಧಿಮಾನ್ ಸಹಾ ಪ್ರತಿ ಬಾರಿಯೂ ರನ್ ಗಳಿಸಲು ಪರದಾಡಿದ್ದಾರೆ. ಅನುಭವಿ ಕೇದಾರ್ ಜಾಧವ್‌, ಯುವ ಆಟಗಾರರಾದ ಪ್ರಿಯಂ ಗರ್ಗ್‌, ಅಭಿಷೇಕ್ ಶರ್ಮಾ ಮುಂತಾದವರನ್ನು ಒಳಗೊಂಡಿರುವ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಸಹಾ ಅವರು ಮುಂದಿನ ಪಂದ್ಯಗಳಲ್ಲಿ ನೈಜ ಸಾಮರ್ಥ್ಯ ಪ್ರದರ್ಶಿಸಬೇಕಾದ ಒತ್ತಡದಲ್ಲಿದ್ದಾರೆ.

ವಿದೇಶಿ ಆಟಗಾರರ ಪೈಕಿ ನಾಯಕ ಡೇವಿಡ್ ವಾರ್ನರ್‌ ಮತ್ತು ರಶೀದ್ ಖಾನ್ ಅವರನ್ನು ಹೊರತುಪಡಿಸಿದರೆ ಇತರ ಯಾರೂ ಮಿಂಚುತ್ತಿಲ್ಲ. ಹೀಗಾಗಿ ಕೇನ್ ವಿಲಿಯಮ್ಸನ್ ಕಣಕ್ಕೆ ಇಳಿಯಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಮನೀಷ್ ಪಾಂಡೆ ಎರಡೂ ಪಂದ್ಯಗಳಲ್ಲಿ ಉತ್ತಮ ಆಟವಾಡಿದ್ದರೂ ಅಬ್ದುಲ್ ಸಮದ್ ಲಯ ಕಂಡುಕೊಳ್ಳಬೇಕಾಗಿದೆ.

ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದ ಗುರುವಾರವಷ್ಟೇ ಮನೀಷ್ ಪಾಂಡೆ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಮತ್ತೆ ರಾಷ್ಟ್ರೀಯ ತಂಡದ ಬಾಗಿಲು ಬಡಿಯಬೇಕಾದರೆ ಅವರು ಐಪಿಎಲ್‌ನಲ್ಲಿ ಇನ್ನಷ್ಟು ಮಿಂಚಿನ ಆಟ ಆಡಬೇಕಾಗಿದೆ.

ಬೌಲಿಂಗ್ ವಿಭಾಗದಲ್ಲೂ ತಂಡ ವೈಫಲ್ಯ ಕಾಣುತ್ತಿದೆ. ಟಿ.ನಟರಾಜನ್ ಅವರಿಗೆ ಕಳೆದ ಬಾರಿಯಷ್ಟು ಸಮರ್ಪಕವಾಗಿ ಬೌಲಿಂಗ್ ಮಾಡಲು ಆಗುತ್ತಿಲ್ಲ. ಭುವನೇಶ್ವರ್ ಕುಮಾರ್ ಕೂಡ ದುಬಾರಿಯಾಗುತ್ತಿದ್ದಾರೆ. ಮುಂಬೈನ ಅಗ್ರ ಕ್ರಮಾಂಕದ ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರನ್ನು ಕಟ್ಟಿಹಾಕಲು ಸಂದೀಪ್ ಶರ್ಮಾ ಹಾಗೂ ಸಿದ್ಧಾರ್ಥ್ ಕೌಲ್ ಭಾರಿ ಬೆವರು ಸುರಿಸಬೇಕಾಗಿದೆ. 

ಹಿಂದಿನ ಪಂದ್ಯದಲ್ಲಿ ರೋಚಕ ಜಯ ಗಳಿಸಿದ ನಂತರ ಮುಂಬೈ ಇಂಡಿಯನ್ಸ್ ನಿರಾಳವಾಗಿದ್ದು ಯಾವುದೇ ಬದಲಾವಣೆಗೆ ಮುಂದಾಗುವ ಸಾಧ್ಯತೆ ಇಲ್ಲ. ಆದರೂ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಸಾಧಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು