ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಚಾಲೆಂಜ್: ಟ್ರೇಲ್‌ಬ್ಲೇಜರ್ಸ್‌ಗೆ ಚೊಚ್ಚಲ ಪ್ರಶಸ್ತಿ

ಸ್ಮೃತಿ ಮಂದಾನ ಅರ್ಧಶತಕ; ಸೂಪರ್‌ನೋವಾಸ್ ಕನಸು ಭಗ್ನ: ರಾಧಾ ಯಾದವ್‌ಗೆ ದಾಖಲೆಯ ಐದು ವಿಕೆಟ್‌
Last Updated 9 ನವೆಂಬರ್ 2020, 21:59 IST
ಅಕ್ಷರ ಗಾತ್ರ

ಶಾರ್ಜಾ: ಸ್ಮೃತಿ ಮಂದಾನ ಮತ್ತು ಸಲ್ಮಾ ಖಾತೂನ್ ಅವರ ಆಟಕ್ಕೆ ಸೂಪರ್‌ನೋವಾಸ್‌ ತಂಡದ ಹ್ಯಾಟ್ರಿಕ್ ಪ್ರಶಸ್ತಿಯ ಕನಸು ಕಮರಿ ಹೋಯಿತು. ಐಪಿಎಲ್ ಅಂಗವಾಗಿ ನಡೆದ ಮಹಿಳಾ ಚಾಲೆಂಜ್‌ ಟಿ20 ಟೂರ್ನಿಯ ಫೈನಲ್‌ನಲ್ಲಿ 16 ರನ್‌ಗಳ ಜಯ ಗಳಿಸಿದ ಟ್ರೇಲ್‌ಬ್ಲೇಜರ್ಸ್ ಚೊಚ್ಚಲ ಪ್ರಶಸ್ತಿ ಗಳಿಸಿ ಸಂಭ್ರಮಿಸಿತು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೇವಲ 119 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಹಿಂದಿನ ಎರಡು ಬಾರಿಯ ಚಾಂಪಿಯನ್‌ ಸೂಪರ್‌ನೋವಾಸ್ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 102 ರನ್‌ ಗಳಿಸಿತು. 18 ರನ್ ನೀಡಿ ಮೂರು ವಿಕೆಟ್ ಕಬಳಿಸಿದ ಸಲ್ಮಾ ಖಾತೂನ್ ಮತ್ತು ಎರಡು ವಿಕೆಟ್ ಉರುಳಿಸಿದ ದೀಪ್ತಿ ಶರ್ಮಾ ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸಿದರು.

ಕಳೆದ ಪಂದ್ಯದಲ್ಲಿ ಅಮೋಘ ಅರ್ಧಶತಕ ಗಳಿಸಿದ ಚಾಮರಿ ಅಟಪಟ್ಟು ಅವರನ್ನು ಬೇಗನೇ ಔಟ್ ಮಾಡಿದ ಸೋಫಿ ಎಕ್ಲೆಸ್ಟೋನ್ ಆರಂಭದಲ್ಲೇ ಟ್ರೇಲ್‌ಬ್ಲೇಜರ್ಸ್‌ ತಂಡಕ್ಕೆ ಮೇಲುಗೈ ಗಳಿಸಿಕೊಟ್ಟರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕ್ರೀಸ್‌ನಲ್ಲಿ ಇರುವ ವರೆಗೂ ಸೂಪರ್‌ನೋವಾಸ್‌ ಗೆಲುವಿನ ಆಸೆ ಜೀವಂತವಾಗಿತ್ತು. 19ನೇ ಓವರ್‌ನಲ್ಲಿ ಕೌರ್‌ ವಿಕೆಟ್ ಉರುಳಿಸಿದ ಖಾತೂನ್ ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು.

ಸ್ಮೃತಿ ಅರ್ಧಶತಕ

ಟಾಸ್ ಗೆದ್ದ ಸೂಪರ್‌ನೋವಾಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟ್ರೇಲ್‌ಬ್ಲೇಜರ್ಸ್‌ನ ಅಗ್ರ ಕ್ರಮಾಂಕದ ಮೂವರು ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಡಿಯಾಂಡ್ರ ದೊತಿನ್ ಜೊತೆ ಇನಿಂಗ್ಸ್‌ ಆರಂಭಿಸಿದ ಸ್ಮೃತಿ ಮಂದಾನ (68; 49 ಎಸೆತ, 5 ಬೌಂಡರಿ, 3 ಸಿಕ್ಸರ್‌) ಮೊದಲ ವಿಕೆಟ್‌ಗೆ 67 ಎಸೆತಗಳಲ್ಲಿ 71 ರನ್ ಸೇರಿಸಿ ಭಾರಿ ಮೊತ್ತ ಗಳಿಸುವ ಸೂಚನೆ ನೀಡಿದರು. 20 ರನ್ ಗಳಿಸಿದ ದೊತಿನ್ ವಿಕೆಟ್ ಉರುಳಿಸಿ ಪೂನಂ ಯಾದವ್ ಅವರು ಇನಿಂಗ್ಸ್‌ಗೆ ಮಹತ್ವದ ತಿರುವು ನೀಡಿದರು. ನಾಯಕಿಯ ಜೊತೆಗೂಡಿದ ರಿಚಾ ಘೋಷ್ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಆದರೆ ಭರ್ಜರಿ ಆಟವಾಡುತ್ತಿದ್ದ ಮಂದಾನ ಅವರನ್ನು ಔಟ್‌ ಸಿರಿವರ್ಧನೆ 15ನೇ ಓವರ್‌ನಲ್ಲಿ ಔಟ್ ಮಾಡಿದರು.

ಈ ಜೊತೆಯಾಟ ಮುರಿದು ಬಿದ್ದ ನಂತರ ನಿರಂತರವಾಗಿ ವಿಕೆಟ್‌ಗಳು ಉರುಳಿದವು. ಕೊನೆಯ ಐದು ಮಂದಿಯ ವಿಕೆಟ್‌ ಉರುಳಿಸಿದ ರಾಧಾ ಯಾದವ್ ಐದರ ಗೊಂಚಲಿನೊಂದಿಗೆ ಸಂಭ್ರಮಿಸಿದರು. ಟೂರ್ನಿಯಲ್ಲಿ ಎಂಟು ವಿಕೆಟ್ ಉರುಳಿಸಿದ ಸಾಧನೆಯೂ ಅವರದಾಯಿತು. ಮಹಿಳಾ ಚಾಲೆಂಜ್‌ನಲ್ಲಿ ಐದು ವಿಕೆಟ್‌ ಗಳಿಸಿದ ಮೊದಲ ಆಟಗಾರ್ತಿಯಾದರು ಅವರು. ನಟ್ಟಕನ್ ಚಂದಂ ಅವರನ್ನು ರನ್‌ ಔಟ್ ಮಾಡುವಲ್ಲೂ ರಾಧಾ ಯಾದವ್ ನೆರವಾದರು. ಟ್ರೇಲ್‌ಬ್ಲೇಜರ್ಸ್‌ನ ಕೊನೆಯ ಆರು ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಾಪಸಾದರು. ಈ ಪೈಕಿ ಇಬ್ಬರು ಸೊನ್ನೆ ಸುತ್ತಿದರು.

ಪ್ರಶಸ್ತಿ ಸುತ್ತಿನ ಹಣಾಹಣಿಗೆ ಉಭಯ ತಂಡಗಳು ತಲಾ ಒಂದೊಂದು ಬದಲಾವಣೆ ಮಾಡಿಕೊಂಡಿವೆ. ಟ್ರೇಲ್‌ಬ್ಲೇಜರ್ಸ್‌ ತಂಡ ಹೇಮಲತಾ ಬದಲಿಗೆ ನುಶತ್ ಪರ್ವೀನ್‌ಗೆ ಅವಕಾಶ ನೀಡಿದ್ದರೆ ಸೂಪರ್‌ನೋವಾಸ್ ತಂಡ ಪ್ರಿಯಾ ಪೂನಿಯಾ ಬದಲಿಗೆ ಪೂಜಾ ವಸ್ತ್ರಕಾರ್ ಅವರನ್ನು ಕರೆಸಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರು: ಟ್ರೇಲ್‌ಬ್ಲೇಜರ್ಸ್‌: 20 ಓವರ್‌ಗಳಲ್ಲಿ 8ಕ್ಕೆ 118 (ಡಿಯಾಂಡ್ರ ದೊತಿನ್ 20, ಸ್ಮೃತಿ ಮಂದಾನ 68, ರಿಚಾ ಘೋಷ್ 10, ದೀಪ್ತಿ ಶರ್ಮಾ 9; ರಾಧಾ ಯಾದವ್ 16ಕ್ಕೆ5, ಪೂನಂ ಯಾದವ್ 23ಕ್ಕೆ1, ಸಿರಿವರ್ಧನೆ 22ಕ್ಕೆ1)

ಸೂಪರ್‌ನೋವಾಸ್: 20 ಓವರ್‌ಗಳಲ್ಲಿ 7ಕ್ಕೆ 102 (ಚಾ‍ಮರಿ ಅಟಪಟ್ಟು 6, ಜೆಮಿಮಾ ರಾಡ್ರಿಗಸ್ 13, ತಾನಿಯ ಭಾಟಿಯಾ 14, ಹರ್ಮನ್‌ಪ್ರೀತ್ ಕೌರ್ 30, ಶಶಿಕಲಾ ಸಿರಿವರ್ಧನೆ 19, ಅನುಜಾ ಪಾಟೀಲ್ 8, ರಾಧಾ ಯಾದವ್ ಔಟಾಗದೆ 5, ಶಕೇರ ಸೆಲ್ಮಾನ್ ಔಟಾಗದೆ 4; ಸೋಫಿ ಎಕ್ಲೆಸ್ಟೋನ್ 26ಕ್ಕೆ1, ದೀಪ್ತಿ ಶರ್ಮಾ 9ಕ್ಕೆ2, ಸಲ್ಮಾ ಖಾತೂನ್ 18ಕ್ಕೆ3).

ಫಲಿತಾಂಶ: ಟ್ರೇಲ್‌ಬ್ಲೇಜರ್ಸ್‌ಗೆ 16 ರನ್‌ಗಳ ಜಯ; ಪ್ರಶಸ್ತಿ. ಪಂದ್ಯದ ಶ್ರೇಷ್ಠ ಆಟಗಾರ್ತಿ: ಸ್ಮೃತಿ ಮಂದಾನ; ಟೂರ್ನಿಯ ಉತ್ತಮ ಆಟಗಾರ್ತಿ: ರಾಧಾ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT