ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಿ: ಸುರೇಶ್‌ ರೈನಾ ಮನವಿ

ಬಿಸಿಸಿಐಗೆ ಮನವಿ ಮಾಡಿದ ಹಿರಿಯ ಕ್ರಿಕೆಟಿಗ ಸುರೇಶ್‌ ರೈನಾ
Last Updated 11 ಮೇ 2020, 19:30 IST
ಅಕ್ಷರ ಗಾತ್ರ

ಮುಂಬೈ: ‘ವಿದೇಶಿ ಟ್ವೆಂಟಿ–20 ಕ್ರಿಕೆಟ್‌ ಲೀಗ್‌ಗಳಲ್ಲಿ ಆಡಲು ಭಾರತದ ಆಟಗಾರರಿಗೂ ಅವಕಾಶ ನೀಡಿ’ ಎಂದು ಹಿರಿಯ ಕ್ರಿಕೆಟಿಗ ಸುರೇಶ್‌ ರೈನಾ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಮಹತ್ವ ಕಡಿಮೆಯಾಗಬಹುದೆಂಬ ಆತಂಕದಿಂದ ಬಿಸಿಸಿಐ, ಭಾರತದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದಕ್ಕೆ ನಿರ್ಬಂಧ ಹೇರಿದೆ.

‘ಹಲವು ಆಟಗಾರರು ಈಗ ಮೂಲೆ ಗುಂಪಾಗಿದ್ದಾರೆ. ಕೇಂದ್ರೀಯ ಗುತ್ತಿಗೆ ಪದ್ಧತಿಯಿಂದಲೂ ಅವನ್ನು ಹೊರಗಿಡಲಾಗಿದೆ. ಅಂತಹವರಿಗೆ ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ಕೊಡಬೇಕು. ಬಿಸಿಸಿಐ, ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಹಾಗೂ ಫ್ರಾಂಚೈಸ್‌ಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಭಾರತದ ಹಿರಿಯ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಅವರೊಂದಿಗೆ ಇನ್‌ಸ್ಟಾಗ್ರಾಮ್‌ ಸಂವಾದದಲ್ಲಿ ರೈನಾ ಹೇಳಿದ್ದಾರೆ.

‘ಯೂಸುಫ್‌ ಪಠಾಣ್‌, ರಾಬಿನ್‌ ಉತ್ತಪ್ಪ ಹಾಗೂ ನನ್ನನ್ನೂ ಸೇರಿದಂತೆ ಅನೇಕ ಪ್ರತಿಭಾವಂತ ಆಟಗಾರರಲ್ಲಿ ಇನ್ನೂ ಕ್ರಿಕೆಟ್‌ ಕಸುವು ಇದೆ. ಕೆಲ ಆಟಗಾರರು ಐಪಿಎಲ್‌ನಲ್ಲಿ ಆಡುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ಸಿಕ್ಕರೆ ಹೊಸ ಹೊಸ ವಿಷಯಗಳನ್ನು ಕಲಿಯಬಹುದು’ ಎಂದು 33 ವರ್ಷ ವಯಸ್ಸಿನ ರೈನಾ ತಿಳಿಸಿದ್ದಾರೆ.

‘ಆಸ್ಟ್ರೇಲಿಯಾದ ಬಿಗ್‌ಬ್ಯಾಷ್‌ ಲೀಗ್‌, ವೆಸ್ಟ್‌ ಇಂಡೀಸ್‌ನ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಅಥವಾ ಇನ್ಯಾವುದೋ ಲೀಗ್‌ನಲ್ಲಿ ಕನಿಷ್ಠ ಮೂರು ತಿಂಗಳು ಆಡುವ ಅವಕಾಶ ಸಿಕ್ಕರೂ ನಮ್ಮ ಆಟದ ಉತ್ಕೃಷ್ಟತೆಯನ್ನು ಹೆಚ್ಚಿಸಿಕೊಳ್ಳಬಹುದು. ಬೇರೆ ದೇಶಗಳ ಕ್ರಿಕೆಟಿಗರು ಈ ಲೀಗ್‌ಗಳಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿ ರಾಷ್ಟ್ರೀಯ ತಂಡಗಳಿಗೆ ಮರಳಿದ ಉದಾಹರಣೆಗಳಿವೆ’ ಎಂದಿದ್ದಾರೆ.

‘ನಾವು ಐಪಿಎಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದರೂ ಆಯ್ಕೆ ಸಮಿತಿ ಸದಸ್ಯರ ಅವಕೃಪೆಗೆ ಒಳಗಾಗಿಬಿಡುತ್ತೇವೆ. ನಾವು ಮತ್ತೆ ಭಾರತದ ಪರ ಆಡಲು ಅಸಮರ್ಥರು ಎಂದೇ ಅವರು ಭಾವಿಸುತ್ತಾರೆ. ನಮ್ಮಲ್ಲಿ ಪ್ಲಾನ್‌ ‘ಬಿ’ ಕೂಡ ಇಲ್ಲ’ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ ರೈನಾ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುತ್ತಾರೆ. 2011ರ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿ ರೈನಾ ಕೂಡ ಇದ್ದರು. 2018ರ ಬಳಿಕ ಅವರಿಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT