ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಡಾರ್‌ ತಂತ್ರಜ್ಞಾನ ಬಳಕೆ: ಸಿಸ್ಟೆಪ್‌ ಮೊದಲ ಹೆಜ್ಜೆ

Last Updated 14 ಮಾರ್ಚ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಟ್ಟಡಗಳ ಚಾವಣಿಗಳಲ್ಲಿ ಸೌರ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವನ್ನು ನಿಖರವಾಗಿ ಅಂದಾಜಿಸಲು ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರವು (ಸಿಸ್ಟೆಪ್‌) ಮೊದಲ ಬಾರಿ ವಾತಾವರಣದ ಬೆಳಕಿನ ಪ್ರಮಾಣ ಪತ್ತೆ ಮತ್ತು ಶ್ರೇಣೀಕರಣ (ಲಿಡಾರ್‌) ಸಾಧನವನ್ನು ಬಳಸುತ್ತಿದೆ.

2022ರೊಳಗೆ ನಗರದಲ್ಲಿ 1 ಗಿಗಾ ವಾಟ್‌ ಸೌರ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಬೆಸ್ಕಾಂ ಹೊಂದಿದೆ. ನಗರದಲ್ಲಿ ಸೌರ ವಿದ್ಯುತ್‌ ಉತ್ಪಾದಿಸುವ ಕುರಿತು ಬೆಸ್ಕಾಂ, ಸಿಸ್ಟೆಪ್, ಕರ್ನಾಟಕ ನವೀಕರಿಸಬಲ್ಲ ಇಂಧನ ಅಭಿವೃದ್ದಿ ನಿಗಮಗಳು (ಕ್ರೆಡೆಲ್‌) 2016ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಇದರ ಆಧಾರದಲ್ಲಿ ಸೌರ ವಿದ್ಯುತ್‌ ಉತ್ಪಾದಿಸಲು ಅತ್ಯಂತ ಸೂಕ್ತವಾದ ಚಾವಣಿಗಳು ಯಾವವು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಕುರಿತು ಯೋಜನೆ ರೂಪಿಸಲು ಈ ಮಾಹಿತಿಯನ್ನು ಬೆಸ್ಕಾಂ ಬಳಸಿಕೊಳ್ಳಲಿದೆ.

ಈ ಲೇಸರ್‌ ಮ್ಯಾಪಿಂಗ್‌ ತಂತ್ರಜ್ಞಾನ ಬಳಸಿ ಮೂರು ಆಯಾಮಗಳ ನಕ್ಷೆಗಳನ್ನು (3ಡಿ ಮ್ಯಾಪ್‌) ರಚಿಸಲಾಗುತ್ತದೆ. ಕಟ್ಟಡದ ಎತ್ತರ, ಆಸುಪಾಸಿನಲ್ಲಿ ಎದುರಾಗುವ ಅಡೆತಡೆ
ಗಳನ್ನು (ಮರ, ಇತರ ಕಟ್ಟಡ, ಕಂಬಗಳು, ಹೋರ್ಡಿಂಗ್‌ ಇತ್ಯಾದಿ) ಆಧರಿಸಿ, ನಿರ್ದಿಷ್ಟ ಕಟ್ಟಡದಲ್ಲಿ ಎಷ್ಟು ಪ್ರಮಾಣದ ಸೌರ ವಿದ್ಯುತ್‌ ಉತ್ಪಾದನೆ ಮಾಡಬಹುದು ಎಂಬುದನ್ನು ನಿಖರವಾಗಿ ಅಂದಾಜು ಮಾಡಲು ಲಿಡಾರ್‌ ಸಾಧನ ನೆರವಾಗಲಿದೆ. ಜಿಯೋಕ್ನೊ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ದತ್ತಾಂಶ ಕಲೆ ಹಾಕುವ ಕೆಲಸ ನಿರ್ವಹಿಸುತ್ತಿದೆ. ಲಿಡಾರ್‌ ಸಾಧನವನ್ನು ಅಳವಡಿಸಿರುವ ಹೆಲಿಕಾಪ್ಟರ್‌ ಬಳಸಿ ಕಳೆದ ಫೆಬ್ರುವರಿ 19ರಿಂದ ವಾತಾವರಣದ ದತ್ತಾಂಶ ಕಲೆ ಹಾಕಲಾಗುತ್ತಿದೆ ಎಂದು ಎಂದು ಸಿಸ್ಟೆಪ್‌ ಹಿರಿಯ ಸಂಪರ್ಕಾಧಿಕಾರಿ ಆರುಷಿ ಸೇನ್‌ ತಿಳಿಸಿದ್ದಾರೆ.

‘ಈ ಸಾಧನ ಕಲೆಹಾಕುವ ದತ್ತಾಂಶವನ್ನು ಕ್ರೋಡೀಕರಿಸಿ, ಪ್ರತಿ ಚಾವಣಿಯ ನೆರಳು–ಬೆಳಕಿನ ಪ್ರಮಾಣದ ಡಿಜಿಟಲ್‌ ಮಾಹಿತಿಯನ್ನು ಸಿಸ್ಟೆಪ್‌ ಸಿದ್ಧಪಡಿಸಲಿದೆ. ಚಾವಣಿಯಲ್ಲಿ ನೆರಳು ಬೀಳದ ಪ್ರದೇಶ ಎಷ್ಟಿದೆ ಎಂಬ ಆಧಾರದಲ್ಲಿ ಸೌರ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಅಂದಾಜಿಸಲಾಗುತ್ತದೆ. ಬೆಸ್ಕಾಂ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಮಾಹಿತಿಯನ್ನು ವಿಶ್ಲೇಷಿಸಿ, ನಿರ್ದಿಷ್ಟ ಚಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆಯಿಂದ ಆಗುವ ಆರ್ಥಿಕ ಲಾಭ–ನಷ್ಟಗಳನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಇನ್ನು ಆರೇಳು ತಿಂಗಳುಗಳಲ್ಲಿ ಈ ಮಾಹಿತಿಯನ್ನು ಗ್ರಾಹಕರೊಂದಿಗೆ ಉಚಿತವಾಗಿ ಹಂಚಿಕೊಳ್ಳಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ‘ಜನಸಂಖ್ಯೆ ದಟ್ಟಣೆ ಹೆಚ್ಚು ಇರುವ ನಗರಗಳಲ್ಲಿ ಚಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯ ಅಂದಾಜಿಸುವ ಅತ್ಯಂತ ವಿನೂತನ ಯೋಜನೆ ಇದು. ಇದರ ಫಲಿತಾಂಶವನ್ನು ಆಧರಿಸಿ ರಾಜ್ಯದ ಇತರ ನಗರಗಳಲ್ಲೂ ಇಂತಹ ಯೋಜನೆ ರೂಪಿಸಲಿದ್ದೇವೆ. ಅನ್ಯ ರಾಜ್ಯಗಳ ನಗರಗಳಲ್ಲೂ ಈ ಯೋಜನೆಯನ್ನು ಜಾರಿಗೊಳಿಸಬಹುದು’ ಎಂದರು.

ಇತರ ತಂತ್ರಜ್ಞಾನಗಳಿಗೆ ಹೋಲಿಸಿದರೆ, ಲಿಡಾರ್‌ ಸಾಧನ ಬಳಸಿ ಕಡಿಮೆ ಅವಧಿಯಲ್ಲಿ ಅತ್ಯಂತ ನಿಖರವಾದ ಮಾಹಿತಿ ಕಲೆಹಾಕಲು ಸಾಧ್ಯ. ಇದರಲ್ಲಿ ಸಂಗ್ರಹಿಸುವ ಕಚ್ಚಾ  ಮಾಹಿತಿಯನ್ನು ಅನ್ಯ ಉದ್ದೇಶಗಳಿಗೂ ಉಪಯೋಗಿಸಬಹುದು. ನಗರದಲ್ಲಿ ಹಸಿರು ಕವಚ ಎಷ್ಟಿದೆ, ಮೇಲ್ಮೈ ಕಾಲುವೆ ವ್ಯವಸ್ಥೆ ಹೇಗಿದೆ, ರಸ್ತೆ ಜಾಲದ ಸ್ಥಿತಿ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಇದು ಸಹಾಯಕ. ಈ ಮಾಹಿತಿಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಎಂದರು.

ಮ್ಯಾಕ್‌ ಅರ್ಥರ್‌ ಪ್ರತಿಷ್ಠಾನವು ಈ ಯೋಜನೆಗೆ ಹಣಕಾಸಿನ ನೆರವು ಒದಗಿಸಿದೆ ಎಂದು ಸಿಸ್ಟೆಪ್‌ ತಿಳಿಸಿದೆ.

5 ಸಾವಿರ ಮೆ.ವಾ. ದಾಟಿದ ಬೇಡಿಕೆ
ಬೆಂಗಳೂರು: ಬೇಸಿಗೆ ಧಗೆ ಏರುತ್ತಿರುವಂತೆಯೇ ಇಂಧನ ಇಲಾಖೆಯ ನಿರೀಕ್ಷೆಗೂ ಮೀರಿ ನಗರದಲ್ಲಿ ವಿದ್ಯುತ್‌ ಬಳಕೆ ಮತ್ತು ಬೇಡಿಕೆ ಏರುಗತಿಯಲ್ಲಿ ಸಾಗಿದೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ಪ್ರಕಾರ ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ವಿದ್ಯುತ್‌ ಬಳಕೆ ಆಗುತ್ತಿದೆ. ಕಡು ಬೇಸಿಗೆಗೆ ಇನ್ನಷ್ಟು ದಿನಗಳು ಇರುವಾಗಲೇ ಮಾರ್ಚ್‌ 9ರಂದು ಬೆಳಿಗ್ಗೆ 9.14ರ ಸಮಯದಲ್ಲಿ 5,123 ಮೆಗಾ ವಾಟ್‌ ಬಳಕೆಯಾಗಿದೆ. ಮಾರ್ಚ್‌ 2ರಂದು ಬೆಳಿಗ್ಗೆ 9.15ರ ಸಮಯದಲ್ಲಿ 5002 ಮೆ.ವಾ ಬಳಕೆಯಾಗಿತ್ತು.

ಕಳೆದ ವರ್ಷ ಮಾರ್ಚ್‌ನಲ್ಲಿ 4,999 ವಿದ್ಯುತ್‌ ಬೇಡಿಕೆ ಮೆಗಾ ವಾಟ್‌ಗೆ ತಲುಪಿತ್ತು. ಆದರೆ, ಈ ಬಾರಿ ಇದೇ ಅವಧಿಗೆ ಬೇಡಿಕೆ 5,000 ಮೆ.ವಾ. ಗಡಿ ದಾಟಿದೆ. ಇದು 5,300 ಮೆ.ವಾ.ಗೆ ತಲುಪಬಹುದು. ಸದ್ಯ ಹೊಂದಿರುವ ಮೂಲಸೌಕರ್ಯದಲ್ಲಿ 5,500 ಮೆ.ವಾ. ಪೂರೈಕೆ ನಿರ್ವಹಿಸಬಹುದು ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು.

‘ದಿನೇ ದಿನೇ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಇನ್ನು ಹೆಚ್ಚುವರಿಯಾಗಿ 1,000 ಮೆ.ವಾ ಪೂರೈಸಲು ಸಾಧ್ಯವಾಗುವಂತೆ ಬೆಸ್ಕಾಂ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದೇವೆ’ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇಡೀ ರಾಜ್ಯದಲ್ಲೇ ಬೇಡಿಕೆ ಪ್ರಮಾಣ ಗರಿಷ್ಠ ಮಿತಿ ತಲುಪಿದೆ. ಬೇಸಿಗೆ ಅವಧಿಯಲ್ಲಿ ಗ್ರಾಹಕರು ಹೆಚ್ಚು ವಿದ್ಯುತ್‌ ಬಳಸುವುದರಿಂದ ಬೇಡಿಕೆಯೂ ಹೆಚ್ಚುತ್ತಿದೆ. ಮಾರ್ಚ್‌ನಲ್ಲಿ ಇದು 10,700 ಮೆ.ವಾ.ಗೆ ದಾಟಿದೆ. ಮುಂದಿನ ದಿನಗಳಲ್ಲಿ 11,000 ಮೆ.ವಾ.ಗೂ ತಲುಪಬಹುದು’ ಎಂದರು.

‘ಮತ್ತೆ ವಿದ್ಯುತ್‌ ಖರೀದಿಸಲು ಇಲಾಖೆ ಯಾವುದೇ ನಿರ್ಧಾರ ಮಾಡಿಲ್ಲ. ವಿವಿಧ ಕಂಪನಿಗಳಿಂದ ಈಗಾಗಲೇ 900 ಮೆ.ವಾ ಖರೀದಿಸಿದ್ದೇವೆ. ನಮ್ಮಲ್ಲಿ ಹೆಚ್ಚುವರಿ ಲಭ್ಯವಿರುವ ವಿದ್ಯುತ್‌ನಲ್ಲೇ ಪರಿಸ್ಥಿತಿ ನಿಭಾಯಿಸಬಹುದು. ಸದ್ಯ ಪೂರೈಕೆ ಮತ್ತು ಬೇಡಿಕೆ ನಡುವೆಯೂ ಹೆಚ್ಚಿನ ಅಂತರವೇನೂ ಇಲ್ಲ’ ಎಂದರು.

‘ಸದ್ಯ ಕಲ್ಲಿದ್ದಲು ದಾಸ್ತಾನು ಮೂರು ದಿನಗಳಿಗೆ ಸಾಕಾಗುವಷ್ಟು ಮಾತ್ರ ಇದೆ. ಯರಮರಸ್‌ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಸುಮಾರು 1.10 ಲಕ್ಷ ಟನ್‌, ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಸುಮಾರು 60,000 ಟನ್‌, ರಾಯಚೂರು ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಸುಮಾರು 30,000 ಟನ್‌ ಕಲ್ಲಿದ್ದಲು ದಾಸ್ತಾನು ಇದೆ. ಇದೇ 16ರಂದು ಕಲ್ಲಿದ್ದಲು ಗಣಿ ಕಾರ್ಮಿಕರು ಮುಷ್ಕರ ಆರಂಭಿಸುವ ಯೋಜನೆಯಲ್ಲಿದ್ದಾರೆ. ಕಾರ್ಮಿಕರು ಮುಷ್ಕರ ಆರಂಭಿಸಿದರೆ ಕಲ್ಲಿದ್ದಲು ಪೂರೈಕೆ ಮೇಲೆ ಪರಿಣಾಮ ಬೀರಲಿದೆ. ಜನತೆ ವಿದ್ಯುತ್‌ ಅಪವ್ಯಯ ಮಾಡದೆ, ಮಿತ ಬಳಕೆ ಮಾಡಬೇಕಿದೆ’ ಎನ್ನುತ್ತಾರೆ ಇಂಧನ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT