ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಚನಾಲಹರಿ ಬದಲಿಸಿದ ’ಕಾಫಿ ಕಹಿ; ಕನ್ನಡಿಗ ರಾಹುಲ್ ಮನದ ಮಾತು

Last Updated 14 ಜೂನ್ 2020, 5:38 IST
ಅಕ್ಷರ ಗಾತ್ರ

ನವದೆಹಲಿ: ’ಕಾಫಿ ವಿತ್ ಕರಣ್‘ ಟಿವಿ ಕಾರ್ಯಕ್ರಮದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದಾಗಿ ತಾವು ಅನುಭವಿಸಿದ್ದ ಅಮಾನತು ಶಿಕ್ಷೆಯು ತಮ್ಮ ಯೋಚನಾಲಹರಿಯನ್ನು ಬದಲಾಯಿಸಿತು ಎಂದು ಕ್ರಿಕೆಟಿಗ ಕೆ.ಎಲ್. ರಾಹುಲ್ ಹೇಳಿದ್ದಾರೆ.

’ಕ್ರಿಕೆಟ್‌ನಲ್ಲಿ ಇತ್ತೀಚಿನ ನನ್ನ ಉತ್ತಮ ಪ್ರದರ್ಶನಕ್ಕೆ ಅಂದಿನ ಘಟನೆಯಿಂದ ಕಲಿತ ಪಾಠವೇ ಕಾರಣ. ಅಮಾನತಿನಿಂದ ಆದ ಅವಮಾನ, ನಿರಾಶೆ ಮತ್ತು ಪಶ್ಚಾತ್ತಾಪಗಳಿಂದ ಮೇಲೆದ್ದು ಬರುವ ಛಲದಿಂದಾಗಿ ಹೆಚ್ಚು ಶ್ರಮಿಸಿದೆ. ಮತ್ತೆ ಉತ್ತಮ ಲಯ ಮತ್ತು ಹೆಸರು ಗಳಿಸಲು ನನಗಾಗಿ ನಾನು ಆಡಲು ನಿರ್ಧರಿಸಿದೆ. ಅದೇ ರೀತಿ ಗಮನ ಕೇಂದ್ರಿಕರಿಸಿದೆ‘ ಎಂದು ’ಇಂಡಿಯಾ ಟುಡೆ‘ ಸಂದರ್ಶನದಲ್ಲಿ ಹೇಳಿದ್ದಾರೆ.

ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ನಿರೂಪಣೆಯ ಟಿವಿ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ರಾಹುಲ್ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅದರಿಂದಾಗಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಆಗಿನ ಸಿಒಎ (ಕ್ರಿಕೆಟ್ ಆಡಳಿತ ಸಮಿತಿ) ಕೆಲವು ಪಂದ್ಯಗಳಿಂದ ಇಬ್ಬರನ್ನೂ ಅಮಾನತುಗೊಳಿಸಿದ್ದರು. ಅದರ ನಂತರ ಕಣಕ್ಕೆ ಮರಳಿದ ರಾಹುಲ್ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿದರು.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಸಿಕ್ಕ ಅವಕಾಶದಲ್ಲಿ ಕನ್ನಡಿಗ ರಾಹುಲ್ ಗಮನ ಸೆಳೆದರು. ರಿಷಭ್ ಪಂತ್ ಗಾಯಗೊಂಡಿದ್ದರಿಂದ ವಿಕೆಟ್ ಕೀಪಿಂಗ್‌ ಕೂಡ ಮಾಡಿ ಸೈ ಎನಿಸಿಕೊಂಡರು. ಐದು ಪಂದ್ಯಗಳಲ್ಲಿ 303 ರನ್‌ ಗಳಿಸಿದರು. ಟಿ20 ಪಂದ್ಯಗಳಲ್ಲಿಯೂ ಆರಂಭಿಕ ಬ್ಯಾಟ್ಸ್‌ಮನ್ ಆಗಿ 56ರ ಸರಾಸರಿಯಲ್ಲಿ 224 ರನ್‌ ಗಳನ್ನು ಕಲೆಹಾಕಿದರು.

’ನಮ್ಮ ವೃತ್ತಿಜೀವನವು ಎಷ್ಟು ಕಡಿಮೆ ಸಮಯದ್ದು ಎಂಬ ಅರಿವು ನನಗಾಯಿತು. ಹೆಚ್ಚೆಂದರೆ ಇನ್ನು 11–12 ವರ್ಷ ಮಾತ್ರ ಆಡುವ ಅವಕಾಶ ಇರುತ್ತದೆ ಎಂದೂ ಅನಿಸಿತು. ಆದ್ದರಿಂದ ನನ್ನೆಲ್ಲ ಸಾಮರ್ಥ್ಯವನ್ನೂ ವಿನಿಯೋಗಿಸಿ ಸಮರ್ಪಣಾ ಭಾವದಿಂದ ಆಡುತ್ತಿದ್ದೇನೆ‘ ಎಂದು 28 ವರ್ಷದ ರಾಹುಲ್ ಹೇಳಿದ್ದಾರೆ.

’ಟಿ20 ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಜಾಗಕ್ಕೆ ನನಗೂ ಮತ್ತು ಶಿಖರ್ ಧವನ್‌ಗೂ ಪೈಪೋಟಿ ಇತ್ತು. ಆದರೆ ನನಗೆ ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸಲು ಅವಕಾಶ ಸಿಕ್ಕಿತು. ರೋಹಿತ್ ಬ್ಯಾಟಿಂಗ್‌ ಶೈಲಿಗೆ ನಾನು ಮೊದಲಿನಿಂದಲೂ ಮಾರು ಹೋಗಿರುವ ಅಭಿಮಾನಿ. ಕ್ರೀಸ್‌ನಲ್ಲಿ ತಮ್ಮ ಜೊತೆ ಬ್ಯಾಟ್ಸ್‌ಮನ್‌ನ್ನು ಹುರಿದುಂಬಿಸುವ ರೋಹಿತ್, ಕ್ರೀಡಾಂಗಣದ ಹೊರಗೂ ಅತ್ಯಂತ ಆತ್ಮೀಯ ಗೆಳೆಯ. ಅವರ ವ್ಯಕ್ತಿತ್ವವನ್ನು ಕೊಂಡಾಡಲು ಪದಗಳು ಸಾಲುವುದಿಲ್ಲ‘ ಎಂದಿದ್ದಾರೆ.

’ನನ್ನೊಳಗಿನ ಆತ್ಮವಿಶ್ವಾಸವು ಗಟ್ಟಿಯಾಗಿರುವಂತೆ ನೋಡಿಕೊಂಡವರು ರೋಹಿತ್. ಅನುಭವಿ ಆಟಗಾರನಾಗಿ ನನ್ನ ಮೇಲಿಟ್ಟ ವಿಶ್ವಾಸ ದೊಡ್ಡದು. ದೇಶದ ತಂಡದ ಯಶಸ್ಸಿನ ಭಾರವನ್ನು ತನ್ನ ಮೇಲೆ ಸದಾ ಹೊತ್ತುಕೊಳ್ಳುವ ಛಾತಿ ಇರುವ ಆಟಗಾರ ರೋಹಿತ್‘ ಎಂದು ರಾಹುಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT