ಕರ್ನಾಟಕಕ್ಕೆ ಸತತ 10ನೇ ಜಯ

ಬುಧವಾರ, ಮಾರ್ಚ್ 27, 2019
26 °C
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್: ದೆಹಲಿ ವಿರುದ್ಧ ಕೌಶಿಕ್‌ ಮಿಂಚು

ಕರ್ನಾಟಕಕ್ಕೆ ಸತತ 10ನೇ ಜಯ

Published:
Updated:
Prajavani

ಇಂದೋರ್: ಪ್ರಭಾವಿ ಆಟ ಮುಂದುವರಿಸಿದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಸತತ 10ನೇ ಜಯ ಸಾಧಿಸಿತು. ಲೀಗ್‌ ಹಂತದ ಎಲ್ಲ ಏಳು ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ ಸೂಪರ್ ಲೀಗ್ ಹಂತದ ಮೂರನೇ ಪಂದ್ಯದಲ್ಲೂ ಗೆಲುವು ದಾಖಲಿಸಿತು.

ಇಲ್ಲಿ ಭಾನುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ದೆಹಲಿ ತಂಡವನ್ನು ಮನೀಷ್ ಪಾಂಡೆ ಬಳಗ ಎಂಟು ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಫೈನಲ್ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ದೆಹಲಿ ತಂಡ ಮಧ್ಯಮ ವೇಗಿ ವಿ.ಕೌಶಿಕ್ ಮತ್ತು ಸ್ಪಿನ್ನರ್ ಕೆ.ಸಿ.ಕಾರ್ಯಪ್ಪ ಅವರ ದಾಳಿಗೆ ನಲುಗಿ ಕೇವಲ 109 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಕರ್ನಾಟಕ ಆರಂಭದಲ್ಲಿ ಆಘಾತ ಅನುಭವಿಸಿದರೂ ನಂತರ ಚೇತರಿಸಿಕೊಂಡಿತು. ಬಿ.ಆರ್.ಶರತ್‌, ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್ ಸುಲಭ ಜಯ ಗಳಿಸಿಕೊಟ್ಟರು.

ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ರೋಹನ್ ಕದಂ ಎರಡನೇ ಓವರ್‌ನಲ್ಲೇ ಶೂನ್ಯಕ್ಕೆ ಮರಳಿದರು. ನವದೀಪ್ ಸೈನಿ ಎಸೆತದಲ್ಲಿ ನಾಯಕ ಇಶಾಂತ್ ಶರ್ಮಾ ಅವರು ಕದಂ ಅವರ ಕ್ಯಾಚ್ ಪಡೆದರು. ನಂತರ ವಿಕೆಟ್ ಕೀಪರ್ ಬಿ.ಆರ್.ಶರತ್‌ ಮತ್ತು ಮಯಂಕ್ ಅಗರವಾಲ್‌ 32 ರನ್ ಸೇರಿಸಿದರು.

ಶರತ್ ರನ್‌ ಔಟಾದ ನಂತರ ಅಗರವಾಲ್‌ ಮತ್ತು ಕರುಣ್ ನಾಯರ್ ಮುರಿಯದ ಮೂರನೇ ವಿಕೆಟ್‌ಗೆ 75 ರನ್‌ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ದೆಹಲಿ ತಂಡದ ಪರ ಮನಜೋತ್ ಕಾರ್ಲಾ ಮತ್ತು ಉನ್ಮುಕ್ತ್ ಚಾಂದ್‌ ಮೊದಲ ವಿಕೆಟ್‌ಗೆ 23 ರನ್ ಜೋಡಿಸಿದರು. ನಂತರ ಮೇಲುಗೈ ಸಾಧಿಸಿದ ಕರ್ನಾಟಕದ ಬೌಲರ್‌ಗಳು ನಿರಂತರವಾಗಿ ವಿಕೆಟ್‌ಗಳನ್ನು ಕಬಳಿಸಿದರು. ನಿತೀಶ್ ರಾಣಾ ಮತ್ತು ಲಲಿತ್ ಯಾದವ್‌ ಅವರನ್ನು ಬಿಟ್ಟರೆ ಉಳಿದ ಯಾರಿಗೂ ಮಿಂಚಲು ಆಗಲಿಲ್ಲ.

ಸಂಕ್ಷಿಪ್ತ ಸ್ಕೋರು: ದೆಹಲಿ: 20 ಓವರ್‌ಗಳಲ್ಲಿ 9ಕ್ಕೆ 109 (ನಿತೀಶ್ ರಾಣಾ 37, ಲಲಿತ್ ಯಾದವ್‌ 33; ವಿ.ಕೌಶಿಕ್‌ 19ಕ್ಕೆ4, ಕೆ.ಸಿ.ಕಾರ್ಯಪ್ಪ 15ಕ್ಕೆ3, ಆರ್‌.ವಿನಯಕುಮಾರ್‌ 15ಕ್ಕೆ1); ಕರ್ನಾಟಕ: 15.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 112 (ಬಿ.ಆರ್.ಶರತ್‌ 26, ಮಯಂಕ್‌ ಅಗರವಾಲ್‌ ಅಜೇಯ 43, ಕರುಣ್ ನಾಯರ್ ಅಜೇಯ 42). ಫಲಿತಾಂಶ: ಕರ್ನಾಟಕಕ್ಕೆ 8 ವಿಕೆಟ್‌ಗಳ ಜಯ. ಮುಂದಿನ ಪಂದ್ಯ: ವಿದರ್ಭ ಎದುರು, ಮಾರ್ಚ್‌ 12ರಂದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !