ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ–ಹರಿಯಾಣ ತಂಡಗಳ ಹಣಾಹಣಿ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಸೆಮಿಫೈನಲ್ ಇಂದು: ತಂಡಕ್ಕೆ ಮರಳಿದ ಮಯಂಕ್‌
Last Updated 28 ನವೆಂಬರ್ 2019, 18:54 IST
ಅಕ್ಷರ ಗಾತ್ರ

ಸೂರತ್: ಸತತ ಎರಡನೇ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಜಯಿಸುವ ಛಲದಲ್ಲಿರುವ ಕರ್ನಾಟಕ ತಂಡವು ಶುಕ್ರವಾರ ನಡೆಲಿರುವ ಸೆಮಿಫೈನಲ್‌ನಲ್ಲಿ ಬಲಿಷ್ಠ ಹರಿಯಾಣ ಎದುರು ಸೆಣಸಲಿದೆ.

ಸೂಪ್ ಲೀಗ್ ಹಂತದಲ್ಲಿ ಉಭಯ ತಂಡಗಳೂ ತಲಾ ಒಂದು ಪಂದ್ಯದಲ್ಲಿ ಸೋತು, ಮೂರರಲ್ಲಿ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿವೆ. ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿದೆ. ಆದರೆ, ಹರಿಯಾಣ ತಂಡದ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ನಾಯಕತ್ವದ ಹರಿಯಾಣ ತಂಡವು ಇದೇ ಮೊದಲ ಬಾರಿ ಪ್ರಶಸ್ತಿ ಜಯಿಸುವತ್ತ ಚಿತ್ತ ನೆಟ್ಟಿದೆ.

ಅಮಿತ್ ಜೊತೆಗೆ ಲೆಗ್‌ ಸ್ಪಿನ್ನರ್ ಯಜುವೇಂದ್ರ ಚಾಹಲ್, ಹರ್ಷಲ್ ಪಟೇಲ್, ಆಶೀಶ್ ಹೂಡಾ ಮತ್ತು ಆಲ್‌ರೌಂಡರ್ ಜಯಂತ್ ಯಾದವ್ ಅವರಿದ್ದಾರೆ. ಈ ಬೌಲಿಂಗ್ ಪಡೆಯ ಮುಂದೆ ಕರ್ನಾಟಕದ ಬ್ಯಾಟಿಂಗ್‌ ಬಲವನ್ನು ಕಟ್ಟಿಹಾಕುವ ಸವಾಲು ಇದೆ

ವೆಸ್ಟ್ ಇಂಡೀಸ್ ಎದುರಿನ ಟಿ–20 ಸರಣಿಯಲ್ಲಿ ಆಡಲು ಭಾರತ ತಂಡಕ್ಕೆ ಆಯ್ಕೆಯಾಗಿರುವ ನಾಯಕ ಮನೀಷ್ ಪಾಂಡೆ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅಮೋಘ ಲಯದಲ್ಲಿದ್ದಾರೆ. ಪಾಂಡೆಯಂತೂ ಈ ಟೂರ್ನಿಯಲ್ಲಿ ಒಂದು ಶತಕವನ್ನೂ ದಾಖಲಿಸಿದ್ದಾರೆ.

ರಾಹುಲ್ ಕೂಡ ಲೀಗ್ ಮತ್ತು ಸೂಪರ್ ಲೀಗ್ ಹಂತದಲ್ಲಿ ಅರ್ಧಶತಕಗಳನ್ನು ಗಳಿಸಿ ತಂಡದ ಜಯಕ್ಕೆ ಕಾರಣರಾಗಿದ್ದರು. ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಕೂಡ ಮೂನ್ನೂರಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ರೋಹನ್ ಕದಂ ಮತ್ತು ಕರುಣ್ ನಾಯರ್ ನಾಕೌಟ್‌ ಹಂತದಲ್ಲಿ ಮಿಂಚುವ ತಮ್ಮ ರೂಢಿಯನ್ನು ಇಲ್ಲಿಯೂ ಮುಂದುವರಿದರೆ ಹರಿಯಾಣದ ಮೇಲೆ ಒತ್ತಡ ಹೆಚ್ಚುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ಪವನ್ ದೇಶಪಾಂಡೆ, ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರು ಕೂಡ ಒಳ್ಳೆಯ ಫಾರ್ಮ್‌ನಲ್ಲಿರುವುದು ತಂಡದ ಬಲ ಹೆಚ್ಚಿಸಿದೆ.

ಪಂದ್ಯ ಆರಂಭ: ಮಧ್ಯಾಹ್ನ 2.30‌

ನೇರಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ನೆಟ್‌ವರ್ಕ್

ತಮಿಳುನಾಡಿಗೆ ರಾಜಸ್ಥಾನ ಸವಾಲು

ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ಮತ್ತು ಆಲ್‌ರೌಂಡರ್ ಮಹಿಪಾಲ್ ಲೊಮ್ರೊರ್‌ ಮುಂದಾಳತ್ವದ ರಾಜಸ್ಥಾನ ತಂಡಗಳು ಇಲ್ಲಿ ಶುಕ್ರವಾರ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ರಾಜಸ್ಥಾನ ತಂಡದ ದೀಪಕ್ ಚಾಹರ್ ಸೂಪರ್ ಲೀಗ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಹೊಡೆದು ಮಿಂಚಿದ್ದರು. ಇದರಿಂದಾಗಿ ರಾಜಸ್ಥಾನ ತಂಡದ ಬ್ಯಾಟಿಂಗ್ ಬಲ ಹೆಚ್ಚಿದಂತಾಗಿದೆ. ತಮಿಳುನಾಡು ತಂಡದಲ್ಲಿರುವ ಅನುಭವಿ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕಲು ರಾಜಸ್ಥಾನ ಬೌಲಿಂಗ್ ಪಡೆ ಸಮರ್ಥವಾಗಿದೆ. ಆದ್ದರಿಂದ ತಮಿಳುನಾಡು ತಂಡವು ಆಲ್‌ರೌಂಡ್ ಆಟವಾಡಿದರೆ ಮಾತ್ರ ಫೈನಲ್ ತಲುಪಲು ಸಾಧ್ಯ. 2006–07ರಲ್ಲಿ ತಮಿಳುನಾಡು ಪ್ರಶಸ್ತಿ ಗೆದ್ದಿತ್ತು. ರಾಜಸ್ಥಾನ ತಂಡವು 2017–18ರಲ್ಲಿ ರನ್ನರ್ಸ್ ಅಪ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT