ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರುದ್ಧನ ಆರ್ಭಟಕ್ಕೆ ಹಳಿ ತಪ್ಪಿದ ರೈಲ್ವೆ

ಸೈಯದ್ ಮುಸ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ: ಕರ್ನಾಟಕ ತಂಡಕ್ಕೆ ರೋಚಕ ಜಯ
Last Updated 16 ಜನವರಿ 2021, 10:45 IST
ಅಕ್ಷರ ಗಾತ್ರ

ಬೆಂಗಳೂರು: ಆಲೂರು ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ಕರ್ನಾಟಕ ಬಳಗದಲ್ಲಿ ಕವಿದಿದ್ದ ಆತಂಕದ ಮೋಡಗಳನ್ನು ಅನಿರುದ್ಧ ಜೋಶಿಯ ಸಿಡಿಲಬ್ಬರದ ಬ್ಯಾಟಿಂಗ್ ಚದುರಿಸಿತು.

40 ಎಸೆತಗಳಲ್ಲಿ ಅಜೇಯ 64 ರನ್‌ಗಳನ್ನು ಗಳಿಸಿದ ಗದುಗಿನ ಹುಡುಗ ಜೋಶಿಯ ಆಟದಿಂದಾಗಿ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಎಲೀಟ್ ಎ ಗುಂಪಿನಲ್ಲಿ ರೈಲ್ವೆಸ್ ವಿರುದ್ಧ 2 ವಿಕೆಟ್‌ಗಳಿಂದ ಜಯಿಸಿತು. ಇದರೊಂದಿಗೆ ಒಟ್ಟು 12 ಅಂಕ ಗಳಿಸಿದ ಕರುಣ್ ನಾಯರ್ ನಾಯಕತ್ವದ ಬಳಗವು ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. 16 ಅಂಕಗಳಿಸಿರುವ ಪಂಜಾಬ್ ಮೊದಲ ಸ್ಥಾನದಲ್ಲಿದೆ. ಈ ಗುಂಪಿನಲ್ಲಿ ಇನ್ನೊಂದು ಪಂದ್ಯ ಉಳಿದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೈಲ್ವೆ ತಂಡವನ್ನು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 152 ರನ್‌ ಗಳಿಸಿತು. ಈ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಹಾಲಿ ಚಾಂಪಿಯನ್ ಕರ್ನಾಟಕವು 19.4 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 158 ರನ್ ಗಳಿಸಿ ಗೆದ್ದಿತು. ಕರ್ನಾಟಕ ತಂಡಕ್ಕೆ ರೋಹನ್ ಕದಂ (14 ರನ್) ಮತ್ತು ದೇವದತ್ತ ಪಡಿಕ್ಕಲ್ (37; 32ಎ) ಉತ್ತಮ ಆರಂಭ ಕೊಟ್ಟರು. ಆದರೆ, ರೈಲ್ವೆ ತಂಡದ ಪ್ರದೀಪ್ ಪೂಜಾರ್ ಮತ್ತು ದುಷ್ಯಂತ್ ಸೋನಿ ಅವರ ಬೌಲಿಂಗ್ ಮುಂದೆ ಮಧ್ಯಮಕ್ರಮಾಂಕದ ಬ್ಯಾಟಿಂಗ್ ಪಡೆ ಕುಸಿಯಿತು. ಕರುಣ್ ನಾಯರ್ (15) ಮತ್ತು ಕೆ.ಎಲ್. ಶ್ರೀಜಿತ್ ಖಾತೆ ತೆರೆಯದೇ ಗೂಡಿಗೆ ಮರಳಿದರು. ಪ್ರವೀಣ್ ದುಬೆ ಕೂಡ ಸೊನ್ನೆ ಸುತ್ತಿದರು. ತಂಡವು ಹತ್ತು ಓವರ್‌ಗಳಲ್ಲಿ 75 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಮೆಲ್ಲಗೆ ಸೋಲಿನತ್ತ ವಾಲಿತ್ತು.

ಆದರೆ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜೋಶಿ ರೈಲ್ವೆಸ್ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾದರು. ಇನ್ನೊಂದು ಬದಿಯಲ್ಲಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಶ್ರೇಯಸ್ (10) ಮತ್ತು ಕೆ. ಗೌತಮ್ (12) ಬೇಗನೆ ನಿರ್ಗಮಿಸಿದರು. ಆದರೆ ಜೋಶಿ ಮಾತ್ರ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು. ಕೊನೆಯ ಎರಡು ಓವರ್‌ಗಳಲ್ಲಿ ತಂಡಕ್ಕೆ 18 ರನ್‌ಗಳು ಬೇಕಾಗಿದ್ದವು. ಒಂದೇ ಓವರ್‌ನಲ್ಲಿ ಒಂಬತ್ತು ರನ್‌ಗಳು ಖಾತೆಗೆ ಸೇರುವಂತೆ ಜೋಶಿ ನೋಡಿಕೊಂಡರು. ಅದರಲ್ಲಿ ಒಂದು ರನ್ ಮಾತ್ರ ವಿ. ಕೌಶಿಕ್ ಅವರದ್ದು. ಜೋಶಿ ಅರ್ಧಶತಕವನ್ನೂದಾಟಿದರು.

ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ಗೆಲುವಿನ ಗುರಿ ದಾಟಿಸುವಲ್ಲಿ ಯಶಸ್ವಿಯಾದ ಜೋಶಿ ಕರ್ನಾಟಕ ಬಳಗದಲ್ಲಿ ಸಂತಸದ ಹೊನಲು ಹರಿಸಿದರು. ಇದರೊಂದಿಗೆ ರೈಲ್ವೆ ತಂಡದ ಬ್ಯಾಟ್ಸ್‌ಮನ್‌ಗಳಾದ ಪ್ರಥಮ್ ಸಿಂಗ್ (41 ರನ್) ಮತ್ತು ಶಿವಂ ಚೌಧರಿ (48 ರನ್) ಅವರ ಕಾಣಿಕೆಯು ವ್ಯರ್ಥವಾಯಿತು. ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಮತ್ತು ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ರೈಲ್ವೆಸ್: 20 ಓವರ್‌ಗಳಲ್ಲಿ 5ಕ್ಕೆ152 (ಪ್ರಥಮ್ ಸಿಂಗ್ 41, ಶಿವಂ ಚೌಧರಿ 48, ಹರ್ಷ ತ್ಯಾಗಿ ಔಟಾಗದೆ 33, ಪ್ರಸಿದ್ಧ ಕೃಷ್ಣ 25ಕ್ಕೆ2, ಶ್ರೇಯಸ್ ಗೋಪಾಲ್ 27ಕ್ಕೆ2) ಕರ್ನಾಟಕ: 19.4 ಓವರ್‌ಗಳಲ್ಲಿ 8ಕ್ಕೆ 158 (ದೇವದತ್ತ ಪಡಿಕ್ಕಲ್ 37, ಅನಿರುದ್ಧ ಜೋಶಿ ಔಟಾಗದೆ 64, ಪ್ರದೀಪ್ ಪೂಜಾರ್ 19ಕ್ಕೆ3, ಶಿವೇಂದ್ರ ಸಿಂಗ್ 33ಕ್ಕೆ2, ದೃಶ್ಯಂತ ಸೋನಿ 28ಕ್ಕೆ3) ಫಲಿತಾಂಶ: ಕರ್ನಾಟಕ ತಂಡಕ್ಕೆ 2 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT