ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ: ಭರವಸೆಯ ಕ್ರಿಕೆಟಿಗ ಅಜರುದ್ದೀನ್‌

Last Updated 15 ಜನವರಿ 2021, 19:30 IST
ಅಕ್ಷರ ಗಾತ್ರ

ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯಲ್ಲಿ ಬುಧವಾರ (ಜನವರಿ 13) ಒಂದೇ ದಿನ ಎರಡು ಶತಕಗಳು ಮೂಡಿಬಂದವು. ಕೇರಳ ತಂಡದ ಮೊಹಮ್ಮದ್ ಅಜರುದ್ದೀನ್‌ (ಮುಂಬೈ ವಿರುದ್ಧ, 54 ಎಸೆತಗಳಲ್ಲಿ ಔಟಾಗದೆ 137) ಹಾಗೂ ಮೇಘಾಲಯ ತಂಡದ ಪುನೀತ್ ಬಿಷ್ತ್‌ (ಮಿಜೋರಾಂ ವಿರುದ್ಧ, 51 ಎಸೆತಗಳಲ್ಲಿ ಔಟಾಗದೆ 146) ಮಿಂಚು ಹರಿಸಿದ್ದರು. ಅದರಲ್ಲಿ ಮೊಹಮ್ಮದ್ ಅಜರುದ್ಧೀನ್‌ ಸಿಡಿಸಿದ ಶತಕಕ್ಕೆ ಹೆಚ್ಚು ತೂಕವಿತ್ತು. ಅದಕ್ಕೆ ಎಲ್ಲೆಡೆಯಿಂದ ಪ್ರಶಂಸೆಯೂ ವ್ಯಕ್ತವಾಗಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ 11 ಬೌಂಡರಿ, 9 ಸಿಕ್ಸರ್ ಸಿಡಿಸಿದ ಅಜರುದ್ದೀನ್, ಮುಂಬೈ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಜರುದ್ದೀನ್‌ ಅವರ ಶತಕವು (37 ಎಸೆತಗಳಲ್ಲಿ 100) ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ 2ನೇ ಅತಿ ವೇಗದ್ದು. 2017–18ರ ಋತುವಿನಲ್ಲಿ ದೆಹಲಿ ತಂಡದ ರಿಷಭ್ ಪಂತ್ ಹಿಮಾಚಲ ಪ್ರದೇಶ ಎದುರಿನ ಪಂದ್ಯದಲ್ಲಿ 32 ಎಸೆತಗಳಲ್ಲಿ ನೂರರ ಗಡಿ ತಲುಪಿದ್ದರು. ಅಜರುದ್ದೀನ್‌ ಅವರ ಶತಕವು ಟ್ವೆಂಟಿ–20 ಪಂದ್ಯವೊಂದರಲ್ಲಿ ಭಾರತದ ಆಟಗಾರನೊಬ್ಬ ದಾಖಲಿಸಿದ ಜಂಟಿ ಮೂರನೇ ಅತಿ ವೇಗದ ಶತಕ ಎಂಬುದು ಗಮನಾರ್ಹ. ಪಂತ್‌ ಹೊರತುಪಡಿಸಿ, ರೋಹಿತ್ ಶರ್ಮಾ (35 ಎಸೆತ, ಭಾರತ ತಂಡದ ಪರ ಶ್ರೀಲಂಕಾ ವಿರುದ್ಧ, 2017ರಲ್ಲಿ), ಯೂಸುಫ್‌ ಪಠಾಣ್‌ (37 ಎಸೆತ, ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಪರ, 2010) ಕಡಿಮೆ ಎಸೆತಗಳಲ್ಲಿ ಶತಕಗಳ ಒಡೆಯರಾಗಿದ್ದರು.

‘ಬಹಳ ವರ್ಷಗಳ ಹಿಂದೆ ನಾನು ಮೊಹಮ್ಮದ್ ಅಜರುದ್ದೀನ್ ಎಂಬ ಅಸಾಧಾರಣ ಆಟಗಾರನನ್ನು ನೋಡಿದ್ದೆ. ಉತ್ತಮ ಹೊಡೆತಗಳನ್ನು ಪ್ರಯೋಗಿಸುವ ಅದೇ ಹೆಸರಿನ ಮತ್ತೊಬ್ಬರನ್ನು ಈಗ ಕಾಣುತ್ತಿದ್ದೇನೆ‘ ಎಂದು ಕೇರಳದ ಮೊಹಮ್ಮದ್ ಅಜರುದ್ದೀನ್ ಕುರಿತು ಖ್ಯಾತ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದಾರೆ.

ವಿಕೆಟ್ ಕೀಪ‍ರ್ ಬ್ಯಾಟ್ಸ್‌ಮನ್‌ ಆಗಿರುವ 26ರ ಹರೆಯದ ಅಜರುದ್ದೀನ್‌, 2015ರಲ್ಲಿ ಕೇರಳ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

‘ವಾಹ್‌ ಅಜರುದ್ದೀನ್‌, ಅದ್ಭುತ! ಮುಂಬೈ ತಂಡದ ವಿರುದ್ಧ ಇಂತಹ ಸ್ಕೋರ್ ದಾಖಲಿಸಬೇಕೆಂದರೆ ಅದರ ಹಿಂದೆ ಪ್ರಯತ್ನವಿದೆ. ಈ ಇನಿಂಗ್ಸ್ಅನ್ನು ಆನಂದಿಸಿದೆ‘ ಎಂದು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಸ್ಫೋಟಕ ಆಟದ ಮೂಲಕ ಅಜರುದ್ದೀನ್ ಅವರು ಐಪಿಎಲ್ ಫ್ರಾಂಚೈಸ್‌ಗಳ ಗಮನವನ್ನೂ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT