ಮುಂಬೈ ಮಣಿಸಲು ಮನೀಷ್‌ ಪಡೆ ಸಜ್ಜು

ಶನಿವಾರ, ಮಾರ್ಚ್ 23, 2019
24 °C
ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌: ಇಂದಿನಿಂದ ಸೂಪರ್‌ ಲೀಗ್‌ ಪಂದ್ಯಗಳು

ಮುಂಬೈ ಮಣಿಸಲು ಮನೀಷ್‌ ಪಡೆ ಸಜ್ಜು

Published:
Updated:
Prajavani

ಇಂದೋರ್‌ : ಗುಂಪು ಹಂತದಲ್ಲಿ ಸತತ ಏಳು ಪಂದ್ಯಗಳಲ್ಲಿ ಗೆದ್ದು  ಅಜೇಯವಾಗಿ ಸೂಪರ್‌ ಲೀಗ್‌ಗೆ ಲಗ್ಗೆ ಇಟ್ಟಿರುವ ಕರ್ನಾಟಕ ತಂಡ ಹೊಸ ಸವಾಲು ಎದುರಿಸಲು ಸನ್ನದ್ಧವಾಗಿದೆ.

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ತನ್ನ ಮೊದಲ ಸೂಪರ್‌ ಲೀಗ್‌ ಹೋರಾಟದಲ್ಲಿ ಮನೀಷ್‌ ಪಾಂಡೆ ಬಳಗ ಬಲಿಷ್ಠ ಮುಂಬೈ ಎದುರು ಸೆಣಸಲಿದೆ.

ಭಾರತ ತಂಡದಲ್ಲಿ ಆಡಿರುವ ಮನೀಷ್‌, ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌ ಅವರಂತಹ ಪ್ರತಿಭಾನ್ವಿತರು ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ಹೋಳ್ಕರ್‌ ಅಂಗಳದತ್ತ ಕ್ರಿಕೆಟ್‌ ಪ್ರಿಯರ ಚಿತ್ತ ನೆಟ್ಟಿದೆ.

ಮನೀಷ್‌ ಬಳಗವು ಲೀಗ್‌ ಹಂತದಲ್ಲಿ ಅಮೋಘ ಸಾಮರ್ಥ್ಯ ತೋರಿತ್ತು. ಎಲ್ಲಾ ಪಂದ್ಯಗಳಲ್ಲೂ ಗೆದ್ದು ‘ಡಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು.

‘ಸಿ’ ಗುಂಪಿನಲ್ಲಿ ಸ್ಥಾನ ಹೊಂದಿದ್ದ ಮುಂಬೈ, ಆರು ಪಂದ್ಯಗಳ ಪೈಕಿ ಐದರಲ್ಲಿ ವಿಜಯಿಯಾಗಿತ್ತು. 20 ಪಾಯಿಂಟ್ಸ್‌ ಗಳಿಸಿದ್ದ ತಂಡ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು.

ಲೀಗ್‌ ಹಂತದಲ್ಲಿ ಮನೀಷ್‌ ಪಡೆ ಅಪೂರ್ವ ಆಟ ಆಡಿತ್ತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಜೊತೆಗೆ ಫೀಲ್ಡಿಂಗ್‌ನಲ್ಲೂ ಮಿಂಚಿತ್ತು.

ಮಯಂಕ್‌ ಅಗರವಾಲ್ ಮತ್ತು ರೋಹನ್‌ ಕದಂ ಹಾಕಿಕೊಟ್ಟಿದ್ದ ಬುನಾದಿಯ ಮೇಲೆ ಮನೀಷ್‌, ಕರುಣ್‌, ಜೆ.ಸುಚಿತ್‌ ಮತ್ತು ಶ್ರೇಯಸ್‌ ಗೋಪಾಲ್‌ ಅವರು ರನ್‌ ಗೋಪುರ ಕಟ್ಟಿದ್ದರು.

ಏಳು ಪಂದ್ಯಗಳಿಂದ 340ರನ್‌ ಗಳಿಸಿರುವ ರೋಹನ್‌, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕ ಮನೀಷ್‌ ಖಾತೆಯಲ್ಲಿ 260ರನ್‌ಗಳಿವೆ. ಇದರಲ್ಲಿ ಒಂದು ಶತಕವೂ ಸೇರಿದೆ. ಉತ್ತಮ ಲಯದಲ್ಲಿರುವ ಇವರು ಮುಂಬೈ ಬೌಲರ್‌ಗಳನ್ನು ಕಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಶ್ರೇಯಸ್‌ ಗೋಪಾಲ್‌ ಮತ್ತು ವಿ.ಕೌಶಿಕ್‌ ಬೌಲಿಂಗ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ಸ್ಪಿನ್ನರ್‌ ಶ್ರೇಯಸ್‌, ಏಳು ಪಂದ್ಯಗಳಿಂದ 13 ವಿಕೆಟ್‌ ಉರುಳಿಸಿದ್ದು, ಕೌಶಿಕ್‌ ಎಂಟು ವಿಕೆಟ್‌ ಪಡೆದಿದ್ದಾರೆ.

ವೇಗಿಗಳಾದ ಅಭಿಮನ್ಯು ಮಿಥುನ್‌, ಆರ್‌.ವಿನಯ್‌ ಕುಮಾರ್‌ ಮತ್ತು ಪ್ರಸಿದ್ಧ ಕೃಷ್ಣ ಅವರ ಬಲವೂ ಮನೀಷ್‌ ಪಡೆಗಿದೆ. ಶ್ರೇಯಸ್‌ ಅಯ್ಯರ್‌ ಸಾರಥ್ಯದ ಮುಂಬೈ ಕೂಡಾ ಗೆಲುವಿನ ತವಕದಲ್ಲಿದೆ. ಈ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ.

ಕರ್ನಾಟಕ ತಂಡ ಈ ಹಿಂದೆ ಮುಂಬೈ ಎದುರು ಆಡಿರುವ ಎರಡು ಪಂದ್ಯಗಳಲ್ಲೂ ಗೆದ್ದಿದೆ. ಇದು ಮನೀಷ್‌ ಪಡೆಯ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !