ಬುಧವಾರ, ನವೆಂಬರ್ 13, 2019
23 °C
ಪ್ರವಾಸಿ ಬೌಲರ್‌ಗಳ ಶಿಸ್ತುಬದ್ಧ ದಾಳಿ: ಶಫಿಯುಲ್‌ ಇಸ್ಲಾಂಗೆ ಎರಡು ವಿಕೆಟ್‌

ಐತಿಹಾಸಿಕ ಪಂದ್ಯದಲ್ಲಿ ಭಾರತಕ್ಕೆ ಸೋಲು: ಬಾಂಗ್ಲಾಗೆ ಮೊದಲ ಜಯದ ಸಿಂಚನ

Published:
Updated:

ನವದೆಹಲಿ: ಲೆಗ್‌ ಸ್ಪಿನ್ನರ್‌ ಅಮಿನುಲ್‌ ಇಸ್ಲಾಂ ನೇತೃತ್ವದಲ್ಲಿ ಬಾಂಗ್ಲಾದೇಶ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿದ ನಂತರ ಬ್ಯಾಟ್ಸಮನ್‌ಗಳು ಉತ್ತಮ ಪ್ರದರ್ಶನ ನೀಡಿದರು. ಭಾನುವಾರ ನಡೆದ ಮೊದಲ ಟಿ–20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾ ತಂಡ 7 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸಿತು.

ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000ನೇ ಪಂದ್ಯ. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತು ಮಾತ್ರವಲ್ಲದೆ, ಟ್ವೆಂಟಿ–ಟ್ವೆಂಟಿ ಪಂದ್ಯಗಳಲ್ಲಿ ಭಾರತ ವಿರುದ್ಧ ಬಾಂಗ್ಲಾ ಮೊದಲ ಜಯ ಗಳಿಸಿತು.

ಗೆಲ್ಲಲು 149 ರನ್‌ ಗಳಿಸಬೇಕಾಗಿದ್ದ ಬಾಂಗ್ಲಾದೇಶ ಇನ್ನೂ ಮೂರು ಎಸೆತಗಳಿರುವಂತೆ ಗುರಿ ತಲುಪಿತು (3 ವಿಕೆಟ್‌ಗೆ 154). ನಾಯಕ ಮಹಮದುಲ್ಲಾ ಡೀಪ್‌ ಮಿಡ್‌ ವಿಕೆಟ್‌ಗೆ ಭರ್ಜರಿ ಸಿಕ್ಸರ್‌ ಎತ್ತಿ ಗೆಲುವನ್ನು ಪೂರೈಸಿರು.

ಇದಕ್ಕೆ ಮೊದಲು ಪ್ರವಾಸಿ ಬೌಲರ್‌ಗಳು ಭಾರತ ತಂಡವನ್ನು 20 ಓವರುಗಳಲ್ಲಿ 6 ವಿಕೆಟ್‌ಗೆ 148 ರನ್‌ಗಳಿಗೆ ನಿಯಂತ್ರಿಸಿದರು.

ದೇಶದ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದರೂ ಕ್ರಿಕೆಟ್‌ ಪಂದ್ಯ ನಿರೀಕ್ಷೆಯಂತೆ ನಡೆಯಿತು.

ಭಾರತ ಇನಿಂಗ್ಸ್‌ನ ಕೊನೆಯಲ್ಲಿ ಕೃಣಾಲ್‌ ಪಾಂಡ್ಯ (8 ಎಸೆತ, ಔಟಾಗದೇ 15) ಮತ್ತು ವಾಷಿಂಗ್ಟನ್‌ ಸುಂದರ್ (5 ಎಸೆತ, ಔಟಾಗದೇ 14), ತಮ್ಮ ತಂಡ ಹೋರಾಟದ ಮೊತ್ತ ಗಳಿಸಲು ನೆರವಾದರು. ಇವರಿಬ್ಬರು ಕೊನೆಯ 12 ಎಸೆತಗಳಲ್ಲಿ 30 ರನ್‌ ಬಾಚಿದರು.

ಟಾಸ್ ಸೋತಿದ್ದ ಭಾರತ, ಮೊದಲ ಓವರ್‌ನಲ್ಲೇ ರೋಹಿತ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡಿತು. ಗ್ಲ್ಯಾನ್ಸ್‌, ನಂತರ ಕವರ್‌ ಡ್ರೈವ್ ಮೂಲಕ ಎರಡು ಬೌಂಡರಿ ಬಾರಿಸಿ ಉತ್ತಮ ಆರಂಭ ಮಾಡಿದ್ದ ಅವರು, ಶಫಿಯುಲ್‌ ಇಸ್ಲಾಂ ಓವರ್‌ನ ಕೊನೆಯ ಎಸೆತದಲ್ಲಿ ಎಲ್‌ಬಿಡಬ್ಲ್ಯುಆಗಿ ನಿರ್ಗಮಿಸಿದರು. ನಂತರ ಅಮಿನುಲ್‌ ಇಸ್ಲಾಂ ಎರಡು ವಿಕೆಟ್‌ ಪಡೆದು ಪ್ರಬಲ ಎದುರಾಳಿ ತಂಡವನ್ನು ನಿಯಂತ್ರಿಸಿದರು.‌

ಕೆ.ಎಲ್‌.ರಾಹುಲ್‌ (15) ಮತ್ತು ಶ್ರೇಯಸ್‌ ಅಯ್ಯರ್‌ (22), ಉತ್ತಮ ಆರಂಭದ ನಂತರ ವಿಕೆಟ್‌ ತೆತ್ತರು. ರಾಹುಲ್‌ ಷಾರ್ಟ್‌ ಕವರ್ಸ್‌ನಲ್ಲಿ ಮಹಮದುಲ್ಲಾ ಅವರಿಗೆ ಸುಲಭ ಕ್ಯಾಚ್‌ ಕೊಟ್ಟರು. ಶ್ರೇಯಸ್‌ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಬಳಿ ಮೊಹಮ್ಮದ್‌ ನಯೀಮ್ ಅವರಿಗೆ ಕ್ಯಾಚಿತ್ತರು. ಚೊಚ್ಚಲ ಪಂದ್ಯ ಆಡಿದ ನಯೀಮ್‌ ಎರಡು ಕ್ಯಾಚ್‌ ಹಿಡಿದರು.

ಆರಂಭ ಆಟಗಾರ ಶಿಖರ್ ಧವನ್‌ ಮೂರು ಸಿಕ್ಸರ್‌ಗಳಿದ್ದ 41 ರನ್ ಗಳಿಸಿ ರನ್‌ಔಟ್‌ ಆಗುವುದರೊಂದಿಗೆ ಭಾರತ ಕುಸಿತ ಕಂಡಿತು. 

ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆಲ್‌ರೌಂಡರ್ ಶಿವಂ ದುಬೆ ಕೇವಲ ಒಂದು ರನ್‌ ಗಳಿಸಿ, ಅಫಿಫ್‌ ಹುಸೇನ್‌ ತಮ್ಮದೇ ಬೌಲಿಂಗ್‌ನಲ್ಲಿ ಹಿಡಿದ ಉತ್ತಮ ಕ್ಯಾಚಿಗೆ ನಿರ್ಗಮಿಸಿದರು. ನಂತರ ಪಾಂಡ್ಯ ಮತ್ತು ವಾಷಿಂಗ್ಟನ್‌ ಸುಂದರ್‌ ಮತ್ತಷ್ಟು ಕುಸಿತ ತಡೆದರು. ವೇಗಿ ಶಫಿಯುಲ್‌ ಇಸ್ಲಾಂ ಮತ್ತು ಸ್ಪಿನ್ನರ್‌ ಅಮಿನುಲ್‌ ಇಸ್ಲಾಂ ತಲಾ ಎರಡು ವಿಕೆಟ್‌ ಪಡೆದರು. ಬಾಂಗ್ಲಾ 17 ಓವರ್‌ಗಳ ನಂತರ 3 ವಿಕೆಟ್‌ಗೆ 114 ರನ್‌ ಗಳಿಸಿತ್ತು.

ತಲೆಕೆಡಿಸಿಕೊಳ್ಳದ ಕ್ರಿಕೆಟ್‌ಪ್ರಿಯರು
ವಾಯುಮಾಲಿನ್ಯ ಮಟ್ಟ ಮಿತಿಮೀರಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಣೆ ಮಾಡಲಾಗಿತ್ತು. ಆದರೂ ಸುಮಾರು 25 ಸಾವಿರಕ್ಕೂ ಹೆಚ್ಚು ಕ್ರಿಕೆಟ್‌ ಅಭಿಮಾನಿಗಳು ಟ್ವೆಂಟಿ–ಟ್ವೆಂಟಿ ಪಂದ್ಯ ವೀಕ್ಷಿಸಲು ಫಿರೋಜ್‌ ಷಾ ಕೋಟ್ಲಾದ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದರು.

ಮಾಲಿನ್ಯ ಮಟ್ಟಮಿತಿಮೀರಿದರೂ, ಪಂದ್ಯ ನಡೆಸುವ ಕ್ರಿಕೆಟ್‌ ನಿಯಂತ್ರಣ ಮಂಡಳಿ ನಿರ್ಧಾರವನ್ನು ಪೂರ್ವ ದೆಹಲಿ ಕ್ಷೇತ್ರದ ಸಂಸದರೂ ಆಗಿರುವ ಭಾರತದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಕಟುವಾಗಿ ಟೀಕಿಸಿದರು. ಇದೇ ಭಾವನೆಯನ್ನು ಟೆಸ್ಟ್‌ ಆಟಗಾರ ರವಿಚಂದ್ರನ್‌ ಅಶ್ವಿನ್‌ ಅವರೂ ಧ್ವನಿಸಿದರು.

ಪ್ರತಿಕ್ರಿಯಿಸಿ (+)