ನವದೆಹಲಿ: ಇದೇ 9ರಂದು ಆರಂಭವಾಗಲಿರುವ ಬಾಂಗ್ಲಾದೇಶದ ವಿರುದ್ಧದ ಟಿ20 ಮತ್ತು ಏಕದಿನ ಕ್ರಿಕೆಟ್ ಸರಣಿಗೆ 18 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ವೇಗದ ಬೌಲರ್ ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಅವರನ್ನು ಕೈಬಿಡಲಾಗಿದೆ. ಯುವ ಆಫ್ ಸ್ಪಿನ್ನರ್, ಕನ್ನಡತಿ ಶ್ರೇಯಾಂಕ ಪಾಟೀಲ್ ಅವರಿಗೆ ಅವಕಾಶ ಲಭಿಸಿಲ್ಲ.
ಬಾಂಗ್ಲಾ ವಿರುದ್ಧ ಭಾರತ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಎಲ್ಲಾ ಆರು ಪಂದ್ಯಗಳು ಮೀರ್‌ಪುರದ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿಯಾಗಿ ಸ್ಮೃತಿ ಮಂದಾನ ಮುಂದುವರಿದಿದ್ದಾರೆ.
ಹಾಂಗ್‌ಕಾಂಗ್‌ನಲ್ಲಿ ನಡೆದ ಎಸಿಸಿ ಮಹಿಳಾ ಎಮರ್ಜಿಂಗ್ ಏಷ್ಯಾ ಕಪ್‌ನಲ್ಲಿ ಮಿಂಚಿದ್ದ ಶ್ರೇಯಾಂಕ ಪಾಟೀಲ್ ಅವರು ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ರೇಣುಕಾ ಗಾಯಾಳುವಾಗಿರುವ ಕಾರಣ ಸರಣಿಯಿಂದ ಕೈಬಿಡಲಾಗಿದೆ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಯಸ್ಟಿಕಾ ಭಾಟಿಯಾ, ಹರ್ಲೀನ್ ಡಿಯೊಲ್, ದೇವಿಕಾ ವೈದ್ಯ, ಉಮಾ ಚೆಟ್ರಿ, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಕರ್, ಮೇಘನಾ ಸಿಂಗ್, ಅಂಜಲಿ ಶರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ, ಮಿನ್ನು ಮಣಿ, ಸ್ನೇಹ ರಾಣಾ (ಏಕದಿನ ಸರಣಿಗೆ) ಮತ್ತು ಎಸ್.ಮೇಘನಾ (ಟಿ20 ಸರಣಿಗೆ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.