ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌: ವಿಂಡೀಸ್‌ ವಿರುದ್ಧ ಮತ್ತೆ ಮುಗ್ಗರಿಸಿದ ಭಾರತ

ಪೂರನ್‌ ಅಬ್ಬರದ ಆಟ
Published 6 ಆಗಸ್ಟ್ 2023, 18:11 IST
Last Updated 6 ಆಗಸ್ಟ್ 2023, 18:11 IST
ಅಕ್ಷರ ಗಾತ್ರ

ಗಯಾನ: ನಿಕೊಲಸ್‌ ಪೂರನ್ ಅವರ ಅಬ್ಬರದ ಆಟದ ನೆರವಿನಿಂದ ವೆಸ್ಟ್‌ ಇಂಡೀಸ್‌ ತಂಡದವರು ಎರಡನೇ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ವಿರುದ್ಧ ಎರಡು ವಿಕೆಟ್‌ಗಳ ಗೆಲುವು ಸಾಧಿಸಿದರು.

ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ತಿಲಕ್‌ ವರ್ಮಾ (51 ರನ್‌, 41 ಎ., 4X5, 6X1) ಅವರ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 152 ರನ್‌ ಗಳಿಸಿತು.

ನಿಕೊಲಸ್‌ ಪೂರನ್ (67 ರನ್‌, 40 ಎ., 4X6, 6X4) ಅಬ್ಬರದ ಆಟದ ನೆರವಿನಿಂದ ಆತಿಥೇಯ ತಂಡ 18.5 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 155 ರನ್‌ ಗಳಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–0 ಯಿಂದ ಮುನ್ನಡೆ ಗಳಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ವಿಂಡೀಸ್‌ ತಂಡಕ್ಕೆ, ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಪಡೆದ ಹಾರ್ದಿಕ್‌  ಪಾಂಡ್ಯ (35ಕ್ಕೆ 3) ಆರಂಭಿಕ ಆಘಾತ ನೀಡಿದರು. ಆದರೆ ಪೂರನ್‌ ಹೊಡೆಬಡಿಯ ಆಟದಿಂದ ಪಂದ್ಯದ ಗತಿಯನ್ನು ಬದಲಿಸಿದರು. ಅವರಿಗೆ ರೊವ್ಮನ್‌ ಪೊವೆಲ್‌ ಮತ್ತು ಶಿಮ್ರೊನ್‌ ಹೆಟ್ಮಯೆರ್ ತಕ್ಕ ಸಾಥ್‌ ನೀಡಿದರು.

ವಿಂಡೀಸ್‌ ಗೆಲುವಿಗೆ 27 ರನ್‌ಗಳು ಬೇಕಿದ್ದಾಗ ಪೂರನ್‌ ಔಟಾದರು. ಈ ವೇಳೆ ಮೂರು ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ಅಕೀಲ್‌ ಹೊಸೇನ್‌ (ಅಜೇಯ 16) ಮತ್ತು ಅಲ್ಝರಿ ಜೋಸೆಫ್‌ (ಅಜೇಯ 10) ಅವರು ತಂಡವನ್ನು ಜಯದತ್ತ ಮುನ್ನಡೆಸಿದರು.

ತಿಲಕ್‌ ವರ್ಮಾ ಆಸರೆ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಆರಂಭ ಚೆನ್ನಾಗಿರಲಿಲ್ಲ. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಅಲ್ಝರಿ ಜೋಸೆಫ್ ಎಸೆತದಲ್ಲಿ ಶುಭಮನ್ ಗಿಲ್ (7 ರನ್) ಔಟಾದರು. ನಂತರದ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಕೇವಲ ಒಂದು ರನ್‌ ಗಳಿಸಿ ರನ್‌ಔಟ್ ಆದರು.

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಇಶಾನ್ (27ರನ್) ಜೊತೆಗೂಡಿದ ತಿಲಕ್ ವರ್ಮಾ ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 44 ರನ್‌ ಸೇರಿಸಿದರು. ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ ಬಾರಿಸಿದ್ದ ಇಶಾನ್  ಹತ್ತನೇ ಓವರ್‌ನಲ್ಲಿ ಶೆಫರ್ಡ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಇದರಿಂದಾಗಿ ಜೊತೆಯಾಟ ಮುರಿಯಿತು. 

ಕ್ರೀಸ್‌ಗೆ ಬಂದ ಸಂಜು ಸ್ಯಾಮ್ಸನ್ (7 ರನ್) ಹುಸೇನ್ ಬೌಲಿಂಗ್‌ನಲ್ಲಿ ಮುಂದಡಿ ಇಟ್ಟು ಆಡಲು ಯತ್ನಿಸಿ ದಂಡ ತೆತ್ತರು. ವಿಕೆಟ್‌ಕೀಪರ್ ಪೂರನ್ ಸ್ಟಂಪಿಂಗ್ ಮಾಡಿ, ಸಂಜುಗೆ ಪೆವಿಲಿಯನ್ ದಾರಿ ತೋರಿಸಿದರು.

ಆದರೆ ಇನ್ನೊಂದು ಬದಿಯಲ್ಲಿ ತಿಲಕ್ ವಿಚಲಿತರಾಗದೇ ಆಡುತ್ತಿದ್ದರು. ಅವರೊಂದಿಗೆ ಸೇರಿಕೊಂಡ ನಾಯಕ ಹಾರ್ದಿಕ್ (24; 18ಎ, 6X2) ಚೇತರಿಕೆ ನೀಡಿದರು. ಐದನೇ ವಿಕೆಟ್ ಜೊತೆ ಯಾಟದಲ್ಲಿ 38 ರನ್‌ಗಳು ಸೇರಿದವು. 20 ವರ್ಷದ ಎಡಗೈ ಬ್ಯಾಟರ್ ತಿಲಕ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 152 (ಇಶಾನ್ ಕಿಶನ್ 27, ತಿಲಕ್ ವರ್ಮಾ 51, ಹಾರ್ದಿಕ್ ಪಾಂಡ್ಯ 24, ಅಕ್ಷರ್ ಪಟೇಲ್ 14, ಅಕೀಲ್ ಹುಸೇನ್ 29ಕ್ಕೆ2, ಅಲ್ಝರಿ ಜೋಸೆಫ್ 28ಕ್ಕೆ2, ರೊಮೆರಿಯೊ ಶೇಫರ್ಡ್ 28ಕ್ಕೆ2)

ವೆಸ್ಟ್‌ ಇಂಡೀಸ್‌: 18.5 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 155 (ಕೈಲ್‌ ಮೇಯರ್ಸ್‌ 15, ನಿಕೊಲಸ್‌ ಪೂರನ್ 67, ರೊವ್ಮನ್‌ ಪೊವೆಲ್‌ 21, ಶಿಮ್ರೊನ್‌ ಹೆಟ್ಮಯೆರ್ 22, ಹಾರ್ದಿಕ್‌ ಪಾಂಡ್ಯ 35ಕ್ಕೆ 3, ಆರ್ಷದೀಪ್‌ ಸಿಂಗ್ 34ಕ್ಕೆ 1, ಮುಕೇಶ್‌ ಕುಮಾರ್ 35ಕ್ಕೆ 1, ಯಜುವೇಂದ್ರ ಚಾಹಲ್ 19ಕ್ಕೆ 2) ಫಲಿತಾಂಶ: ವೆಸ್ಟ್‌ ಇಂಡೀಸ್‌ಗೆ 2 ವಿಕೆಟ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT