ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೀಷ್ ಪಾಂಡೆ ಅಬ್ಬರ: ಕರ್ನಾಟಕ ಶುಭಾರಂಭ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್
Last Updated 21 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಕಟಕ್: ನಾಯಕ ಮನೀಷ್ ಪಾಂಡೆ ಅಬ್ಬರದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ಗುರುವಾರ ಇಲ್ಲಿ ಆರಂಭವಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಡ್ರೀಮ್ಸ್‌ ಮೈದಾನದಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು 15 ರನ್‌ಗಳಿಂದ ಅಸ್ಸಾಂ ಎದುರು ಗೆದ್ದಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಅಸ್ಸಾಂ ತಂಡವು ಪಂದ್ಯದ ಆರಂಭಿಕ ಹಂತದಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿತು. ಆದರೆ, ಮಧ್ಯಮ ಕ್ರಮಾಂಕದ ‘ಮಿಂಚು’ ಮನೀಷ್ (74; 39ಎಸೆತ, 6ಬೌಂಡರಿ, 4ಸಿಕ್ಸರ್) ಅವರ ಏಕಾಂಗಿ ಹೋರಾಟದಿಂದ ಕರ್ನಾಟಕವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 169 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಅಸ್ಸಾಂ ತಂಡಕ್ಕೆ ಅನುಭವಿ ಮಧ್ಯಮವೇಗಿ ಆರ್. ವಿನಯಕುಮಾರ್ ಪೆಟ್ಟು ನೀಡಿದರು. 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 154 ರನ್‌ ಗಳಿಸಿದ ಅಸ್ಸಾಂ ಸೋತಿತು. ತಂಡದ ಮಧ್ಯಮಕ್ರಮಾಂಕದ ಜೋಡಿ ವಾಸಿಕ್ ಉರ್ ರೆಹಮಾನ್ (62 ರನ್ ) ಮತ್ತು ರಜಾಕುದ್ದೀನ್ ಅಹಮದ್ (53 ರನ್) ಅವರು ಅರ್ಧಶತಕ ಗಳಿಸಿದರು.

ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ರೋಹನ್ ಕದಂ (26; 30ಎಸೆತ) ಮತ್ತು ಬಿ.ಆರ್. ಶರತ್ (15 ರನ್) ಮೊದಲ ವಿಕೆಟ್‌ಗೆ 33 ರನ್ ಸೇರಿಸಿ ಉತ್ತಮ ಆರಂಭವನ್ನೇ ನೀಡಿದರು. ಆದರೆ ಐದನೇ ಓವರ್‌ನಲ್ಲಿ ಶರತ್ ಔಟಾದರು. ಅನುಭವಿ ಬ್ಯಾಟ್ಸ್‌ಮನ್ ಕರುಣ್ ನಾಯರ್ ಕೇವಲ ಮೂರು ರನ್ ಗಳಿಸಿ ಔಟಾದರು. ಹತ್ತನೇ ಓವರ್‌ನಲ್ಲಿ ರೋಹನ್ ಕದಂ ಅವರೂ ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ತಂಡವು ಕೇವಲ 58 ರನ್ ಗಳಿಸಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶತಕ ಹೊಡೆದ ಭಾರತದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಯಿರುವ ಮನೀಷ್ ಇಲ್ಲಿಯೂ ಆಪದ್ಭಾಂದವನಾದರು. ಈಚೆಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ರನ್‌ಗಳ ಹೊಳೆ ಹರಿಸಿದ್ದ ಕೆ.ವಿ. ಸಿದ್ಧಾರ್ಥ್ ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದರು. ಇದರಿಂದಾಗಿ ತಂಡವು 150 ರನ್‌ಗಳ ಗಡಿಯನ್ನು ತಲುಪಿತು. 19ನೇ ಓವರ್‌ನಲ್ಲಿ ಮನೀಷ್ ದೊಡ್ಡ ಹೊಡೆತಕ್ಕೆ ಕೈಹಾಕಿ ಕ್ಯಾಚಿತ್ತರು. ನಂತರದ ಓವರ್‌ನಲ್ಲಿ ಸಿದ್ಧಾರ್ಥ್ ಕೂಡ ಔಟಾದರು. ಮನೋಜ್ ಬಾಂಢಗೆ ಮಾತ್ರ 11 ರನ್ ಗಳಿಸುವಲ್ಲಿ ಸಫಲರಾದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ತಲುಪಲಿಲ್ಲ.

ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡವು ಬಂಗಾಳ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT