ಗುರುವಾರ , ಆಗಸ್ಟ್ 18, 2022
26 °C
ಕಾರ್ತಿಕ್‌ ನಮಗೆ ಹೆಚ್ಚಿನ ಆಯ್ಕೆಗಳನ್ನು ನೀಡಿದ್ದಾರೆ: ರಾಹುಲ್‌ ದ್ರಾವಿಡ್ ಅಭಿಮತ

ಟಿ20 ವಿಶ್ವಕಪ್‌| ಸಮರ್ಥರ ಆಯ್ಕೆ ಮುಖ್ಯ: ರಾಹುಲ್‌ ದ್ರಾವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ’ಟಿ20 ವಿಶ್ವಕಪ್‌ ಟೂರ್ನಿಗೆ ಸಮರ್ಥ ಆಟಗಾರರನ್ನು ಕಂಡುಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಇಂಗ್ಲೆಂಡ್‌ ಪ್ರವಾಸದ ಕೊನೆಯ ವೇಳೆಗೆ 18 ರಿಂದ 20 ಆಟಗಾರರನ್ನು ಗುರುತಿಸುವುದು ನಮ್ಮ ಉದ್ದೇಶ‘ ಎಂದು ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್ ಹೇಳಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಟಿ20 ಪಂದ್ಯದ ಬಳಿಕ ಮಾಧ್ಯಮದವರ ಜತೆ ಮಾತನಾಡಿ, ‘ವಿಶ್ವಕಪ್‌ ಟೂರ್ನಿ ಸಮೀಪಿಸುತ್ತಿರುವುದರಿಂದ ತಂಡವನ್ನು ಸಿದ್ಧಗೊಳಿಸಲು ಈಗಿನಿಂದಲೇ ತಯಾರಿ ಆಗಬೇಕು. ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಬಳಿಕ ಸ್ಪಷ್ಟ ಚಿತ್ರಣ ಲಭಿಸುವ ವಿಶ್ವಾಸ ನನ್ನದು. ವಿಶ್ವಕಪ್‌ ಟೂರ್ನಿಗೆ 15 ಮಂದಿಯ ತಂಡವನ್ನು ಮಾತ್ರ ಕರೆದೊಯ್ಯಲು ಸಾಧ್ಯ. ಆದರೂ 18 ರಿಂದ 20 ಆಟಗಾರರನ್ನು ಗುರುತಿಸುವುದು ಅಗತ್ಯ’ ಎಂದರು. 

ಹೆಚ್ಚಿನ ಆಯ್ಕೆಗಳು ಲಭಿಸಿವೆ

ದಿನೇಶ್‌ ಕಾರ್ತಿಕ್ ಅವರ ಪ್ರದರ್ಶನವನ್ನು ಶ್ಲಾಘಿಸಿರುವ ದ್ರಾವಿಡ್, ‘ಯಾವ ಉದ್ದೇಶ ಇಟ್ಟುಕೊಂಡು ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತೋ, ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಿಂದಾಗಿ ನಮಗೆ ಹೆಚ್ಚಿನ ಆಯ್ಕೆಗಳು ಲಭಿಸಿದೆ’ ಎಂದು ತಿಳಿಸಿದರು. ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕಾರ್ತಿಕ್‌ 27 ಎಸೆತಗಳಲ್ಲಿ 55 ರನ್‌ ಗಳಿಸಿದ್ದರು. ಆ ಪಂದ್ಯದ ಬಗ್ಗೆ ಮಾತನಾಡಿದ ದ್ರಾವಿಡ್, ‘ಕೊನೆಯ ಐದು ಓವರ್‌ಗಳಲ್ಲಿ ಹೆಚ್ಚಿನ ರನ್‌ಗಳು ಬೇಕಿದ್ದವು. ಕಾರ್ತಿಕ್‌ ಮತ್ತು ಹಾರ್ದಿಕ್‌ ಪಾಂಡ್ಯ ಬಿರುಸಿನ ಆಟವಾಡಿದರು. ನಮ್ಮ ಯೋಜನೆಗಳನ್ನು ಇವರಿಬ್ಬರು ಚೆನ್ನಾಗಿ ಕಾರ್ಯರೂಪಕ್ಕಿಳಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಿಷಭ್‌ಗೆ ಬೆಂಬಲ

ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಅವರಿಗೆ ದ್ರಾವಿಡ್‌ ಬೆಂಬಲ ಸೂಚಿಸಿದ್ದು, ಮುಂಬರುವ ವಿಶ್ವಕಪ್‌ ಟೂರ್ನಿಯಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸುವರು ಎಂದಿದ್ದಾರೆ. ರಿಷಭ್‌ ಈ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದು ಕೇವಲ 58 ರನ್‌ ಮಾತ್ರ ಕಲೆಹಾಕಿದ್ದಾರೆ.

‘ಇನ್ನೂ ಹೆಚ್ಚಿನ ರನ್‌ ಗಳಿಸ ಬೇಕೆಂದು ಅವರು ಬಯಸಿದ್ದರು. ದೊಡ್ಡ ಮೊತ್ತ ಪೇರಿಸಲು ಆಗದ್ದು ಅವರಿಗೆ ಚಿಂತೆ ಉಂಟುಮಾಡಿಲ್ಲ. ಮುಂದಿನ ಕೆಲವು ತಿಂಗಳುಗಳಿಗೆ ನಾವು ಸಿದ್ಧಪಡಿಸಿರುವ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ’ ಎಂದರು.

ಭುವನೇಶ್ವರ್‌ ಆಟ: ಬೌಷರ್‌ ಮೆಚ್ಚುಗೆ

ಟಿ20 ಸರಣಿಯಲ್ಲಿ ಭಾರತದ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರ ಪ್ರದರ್ಶನ ’ವಿಶೇಷ‘ವಾಗಿತ್ತು ಎಂದು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಮಾರ್ಕ್‌ ಬೌಷರ್‌ ಬಣ್ಣಿಸಿದ್ದಾರೆ.

ಭುನವೇಶ್ವರ್‌ ಈ ಸರಣಿಯಲ್ಲಿ 14 ಓವರ್‌ ಬೌಲ್‌ ಮಾಡಿದ್ದು, 85 ರನ್‌ ಬಿಟ್ಟುಕೊಟ್ಟು ಆರು ವಿಕೆಟ್‌ಗಳನ್ನು ಪಡೆದಿದ್ದಾರೆ.

’ಭುವನೇಶ್ವರ್‌ ಸರಣಿಯುದ್ದಕ್ಕೂ ಉತ್ತಮವಾಗಿ ಬೌಲ್‌ ಮಾಡಿದ್ದಾರೆ. ಪವರ್‌ ಪ್ಲೇ ಓವರ್‌ಗಳಲ್ಲಿ ಅವರು ನಮ್ಮ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಲು ಯಶಸ್ವಿಯಾದರು‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು