ಶುಕ್ರವಾರ, ಡಿಸೆಂಬರ್ 3, 2021
25 °C

T20 WC: ವಿಂಡೀಸ್ 55 ರನ್ನಿಗೆ ಆಲೌಟ್; ಇಂಗ್ಲೆಂಡ್‌ಗೆ 6 ವಿಕೆಟ್ ಗೆಲುವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಶನಿವಾರ ನಡೆದ 'ಸೂಪರ್ 12' ಹಂತದ 'ಗ್ರೂಪ್ 1'ರ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ ಇಂಗ್ಲೆಂಡ್ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಸ್ಪಿನ್ನರ್ ಆದಿಲ್ ರಶೀದ್ (2 ರನ್ನಿಗೆ 4 ವಿಕೆಟ್) ಸೇರಿದಂತೆ ಇಂಗ್ಲೆಂಡ್ ಬೌಲರ್‌ಗಳ ಮಿಂಚಿನ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ 14.2 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 

ಇದನ್ನೂ ಓದಿ: 

ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್ 8.2 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಜೋಸ್ ಬಟ್ಲರ್ ಔಟಾಗದೆ 24 ರನ್ ಗಳಿಸಿದರು. ವಿಂಡೀಸ್ ಪರ ಅಕೀಲ್ ಹೊಸೈನ್ ಎರಡು ವಿಕೆಟ್ ಕಬಳಿಸಿದರು. 

ಈ ಮೊದಲು 'ಯೂನಿವರ್ಸ್ ಬಾಸ್' ಖ್ಯಾತಿಯ ಕ್ರಿಸ್ ಗೇಲ್ 13 ರನ್ ಗಳಿಸಿರುವುದನ್ನು ಹೊರತುಪಡಿಸಿದರೆ ವಿಂಡೀಸ್‌ನ ಇತರೆ ಯಾವ ಬ್ಯಾಟರ್ ಎರಡಂಕಿಯನ್ನು ದಾಟಲಿಲ್ಲ. 

ವಿಂಡೀಸ್ ಸ್ಕೋರ್ ಪಟ್ಟಿ ಇಂತಿತ್ತು:  3, 6, 13, 9, 5, 1, 6, 0, 6*, 0, 3

ಲೆಂಡ್ಲ್ ಸಿಮನ್ಸ್, ಎವಿನ್ ಲೂಯಿಸ್, ಶಿಮ್ರೊನ್ ಹೆಟ್ಮೆಯರ್, ಡ್ವೇನ್ ಬ್ರಾವೋ, ನಿಕೋಲಸ್ ಪೂರನ್, ಆ್ಯಂಡ್ರೆ ರಸೆಲ್ ಸೇರಿದಂತೆ ಬಲಾಢ್ಯ ಬ್ಯಾಟಿಂಗ್ ಕ್ರಮಾಂಕ ದೊಪ್ಪನೆ ಕುಸಿಯಿತು. ಈ ಮೂಲಕ ಭಾರಿ ಮುಖಭಂಗಕ್ಕೊಳಗಾಗಿದೆ. 

ಇಂಗ್ಲೆಂಡ್ ಪರ ಕೈಚಳಕ ತೋರಿದ ರಶೀದ್, 2.2 ಓವರ್‌ಗಳಲ್ಲಿ ಕೇವಲ 2 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ಮೊಯಿನ್ ಅಲಿ ಹಾಗೂ ಟೈಮಲ್ ಮಿಲ್ಸ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. 

ಐದು ವರ್ಷಗಳ ಹಿಂದೆ 2016ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಫೈನಲ್‌ನಲ್ಲಿ ಗೆಲುವು ದಾಖಲಿಸಿದ ವೆಸ್ಟ್‌ಇಂಡೀಸ್ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 

ಅಂದು ಬೆನ್ ಸ್ಟೋಕ್ಸ್ ಅವರ ಕೊನೆಯ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ ವಿಂಡೀಸ್‌ನ ಕಾರ್ಲೊಸ್ ಬ್ರಾತ್‌ವೇಟ್ ಗೆಲುವಿನ ರೂವಾರಿ ಎನಿಸಿದರು. ಅಂದು ಎದುರಾಗಿದ್ದ ಸೋಲಿಗೆ ಈಗ ಆಂಗ್ಲರ ಪಡೆ ಸೇಡು ತೀರಿಸಿಕೊಂಡಿದೆ. 

ಅಂದ ಹಾಗೆ 2019ರಲ್ಲಿ ಇಂಗ್ಲೆಂಡ್ ವಿರುದ್ಧವೇ ಟ್ವೆಂಟಿ-20 ಪಂದ್ಯದಲ್ಲಿ ವಿಂಡೀಸ್ ಕೇವಲ 45 ರನ್ನಿಗೆ ಆಲೌಟ್ ಆಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು