ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವ ಕಪ್: ಐರ್ಲೆಂಡ್‌ಗೆ ಭರ್ಜರಿ ಗೆಲುವು

ಪಾಲ್‌ ಸ್ಟರ್ಲಿಂಗ್–ಗರೆತ್ ಡೆಲಾನಿ ಜೋಡಿಯ ಅಮೋಘ ಬ್ಯಾಟಿಂಗ್
Last Updated 18 ಅಕ್ಟೋಬರ್ 2021, 15:38 IST
ಅಕ್ಷರ ಗಾತ್ರ

ಅಬುಧಾಬಿ: ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಗಳಿಸಿದ ವೇಗಿ ಕರ್ಟಿಸ್‌ ಕ್ಯಾಂಫರ್ ಅವರ ಆಮೋಘ ಬೌಲಿಂಗ್ ಮತ್ತು ಪಾಲ್‌ ಸ್ಟರ್ಲಿಂಗ್–ಗರೆತ್ ಡೆಲಾನಿ ಜೋಡಿಯ ಉತ್ತಮ ಬ್ಯಾಟಿಂಗ್ ನೆರವಿನಿಂದ ಐರ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಸೋಮವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ಏಳು ವಿಕೆಟ್‌ಗಳಿಂದ ನೆದರ್ಲೆಂಡ್ಸ್ ವಿರುದ್ಧ ಜಯ ಗಳಿಸಿತು. ಕ್ಯಾಂಫರ್ 24ಕ್ಕೆ4 ವಿಕೆಟ್‌ ಗಳಿಸಿದರೆ ಪಾಲ್ ಸ್ಟರ್ಲಿಂಗ್ ಅಜೇಯ 30 ರನ್ (39ಎಸೆತ; 1ಬೌಂಡರಿ, 1 ಸಿಕ್ಸರ್) ಮತ್ತು ಗರೆತ್ ಡೆಲಾನಿ 29 ಎಸೆತಗಳಲ್ಲಿ 44 ರನ್‌ (5 ಬೌಂ, 2 ಸಿ) ಸಿಡಿಸಿದರು.

‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್‌ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಒಂದು ರನ್ ಗಳಿಸುವಷ್ಟರಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತ್ತು. ಬೆನ್ ಕೂಪರ್ ಮತ್ತು ಬಾಸ್ ಟಿ ಲೀಡ್ ಕೂಡ ಬೇಗ ಮರಳಿದರು. ಆದರೆ ಆರಂಭಿಕ ಬ್ಯಾಟರ್ ಮ್ಯಾಕ್ಸ್ ಒಡೌಡ್ (51; 47 ಎ, 7 ಬೌಂ) ಮೋಹಕ ಆಟದ ಮೂಲಕ ತಂಡಕ್ಕೆ ಆಸರೆಯಾದರು.

ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ವಿಕೆಟ್ ಉರುಳಿಸಿದ ನಂತರ ನೆದರ್ಲೆಂಡ್ಸ್‌ ಇನಿಂಗ್ಸ್ ಮತ್ತೆ ಕುಸಿತ ಕಂಡಿತು. ಪೀಟರ್ ಸೀಲರ್ ಮಾತ್ರ ಸ್ವಲ್ಪ ಪ್ರತಿರೋಧಿ ಒಡ್ಡಿದರು. ಹೀಗಾಗಿ ತಂಡ 20 ಓವರ್‌ಗಳಲ್ಲಿ 106 ರನ್ ಗಳಿಸಿತು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಬ್ರೆಂಡನ್ ಗ್ಲೋವರ್ ಔಟಾದರು.

ಗುರಿ ಬೆನ್ನತ್ತಿದ ಐರ್ಲೆಂಡ್ ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ ಸ್ಟರ್ಲಿಂಗ್ ಮತ್ತು ಡೆಲಾನಿ ಮೂರನೇ ವಿಕೆಟ್‌ಗೆ 59 ರನ್ ಸೇರಿಸಿ ಆಸರೆಯಾದರು. 15.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 107 ರನ್ ಗಳಿಸಿದ ಐರ್ಲೆಂಡ್ ಜಯದ ನಗೆ ಸೂಸಿತು.

ಕ್ಯಾಂಫರ್ ಮೂರನೇ ಬೌಲರ್‌

ಕ್ಯಾಂಫರ್‌, ಟಿ20 ಕ್ರಿಕೆಟ್‌ನಲ್ಲಿ ಸತತ ನಾಲ್ಕು ವಿಕೆಟ್ ಗಳಿಸಿದ ಮೂರನೇ ಬೌಲರ್ ಎನಿಸಿಕೊಂಡರು. ಅಫ್ಗಾನಿಸ್ತಾನದ ರಶೀದ್ ಖಾನ್‌ ಮತ್ತು ಶ್ರೀಲಂಕಾದ ಲಸಿತ್ ಮಾಲಿಂಗ 2019ರಲ್ಲಿ ಈ ಸಾಧನೆ ಮಾಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಎರಡನೇ ಬೌಲರ್ ಆಗಿದ್ದಾರೆ ಅವರು. 2007ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ರೆಟ್ ಲೀ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.

ಜೊಹಾನ್ಸ್‌ಬರ್ಗ್‌ನಲ್ಲಿ ಜನಿಸಿದ ಕ್ಯಾಂಫರ್ ಆಗಸ್ಟ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ 19 ರನ್‌ಗಳಿಗೆ ಮೂರು ವಿಕೆಟ್ ಉರುಳಿಸಿದ್ದರು.

ಸಂಕ್ಷಿಪ್ತ ಸ್ಕೋರು: ನೆದರ್ಲೆಂಡ್ಸ್‌: 20 ಓವರ್‌ಗಳಲ್ಲಿ 106 (ಮ್ಯಾಕ್ಸ್ ಒಡೌಡ್ 51, ಪೀಟರ್ ಸೀಲಾರ್ 21; ಜೋಶ್ ಲಿಟಲ್ 14ಕ್ಕೆ1, ಮಾರ್ಕ್ ಅಡೇರ್ 9ಕ್ಕೆ3, ಕರ್ಟಿಸ್ ಕ್ಯಾಂಫರ್ 26ಕ್ಕೆ4); ಐರ್ಲೆಂಡ್‌: 15.1 ಓವರ್‌ಗಳಲ್ಲಿ 3ಕ್ಕೆ 107 (ಪಾಲ್ ಸ್ಟರ್ಲಿಂಗ್ ಔಟಾಗದೆ 30, ಗರೆತ್ ಡೆಲಾನಿ 44; ಫ್ರೆಡ್ ಕ್ಲಾಸೆನ್ 18ಕ್ಕೆ1, ಬ್ರೆಂಡನ್ ಗ್ಲೋವರ್ 21ಕ್ಕೆ1, ಪೀಟರ್ ಸೀಲಾರ್ 14ಕ್ಕೆ1). ಫಲಿತಾಂಶ: ಐರ್ಲೆಂಡ್‌ಗೆ 7 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT