ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup: ಭಾರತ–ನೆದರ್ಲೆಂಡ್ಸ್‌ ಹಣಾಹಣಿ- ಪ್ರಯೋಗದತ್ತ ರೋಹಿತ್ ಚಿತ್ತ

Last Updated 25 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಸಿಡ್ನಿ: ಪಾಕಿಸ್ತಾನ ತಂಡದ ಎದುರು ರೋಚಕ ಜಯಿಸುವ ಮೂಲಕ ಈ ಬಾರಿಯ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿರುವ ಭಾರತ ತಂಡವು ಗುರುವಾರ ನಡೆಯಲಿರುವ ಪಂದ್ಯದಲ್ಲಿ ಪ್ರಯೋಗಕ್ಕೆ ಸಿದ್ಧವಾಗಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ರೋಹಿತ್ ಶರ್ಮಾ ಬಳಗವು ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಿ ದೀಪಕ್ ಹೂಡಾಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸ್ಫೋಟಕ ಶೈಲಿಯ ಬ್ಯಾಟರ್ ಹೂಡಾ, ಆಫ್‌ಬ್ರೇಕ್ ಬೌಲರ್ ಕೂಡ ಆಗಿದ್ದಾರೆ.

ಪಾಂಡ್ಯ ಜೊತೆಗೆ ಇನ್ನುಳಿದ ಬೌಲರ್‌ಗಳಿಗೂ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅನುಭವದ ಕೊರತೆಯಿರುವ ನೆದರ್ಲೆಂಡ್ಸ್‌ ವಿರುದ್ಧ ಸುಲಭ ಜಯದ ನಿರೀಕ್ಷೆಯಲ್ಲಿರುವ ಭಾರತ ತಂಡವು ಬೆಂಚ್‌ ಶಕ್ತಿಯ ಸಾಮರ್ಥ್ಯ ಪರೀಕ್ಷೆ ಮಾಡಲು ಯೋಚಿಸಿದೆ.

ಭಾನುವಾರದ ಪಂದ್ಯದಲ್ಲಿ ಹಾರ್ದಿಕ್ ಅವರು ವಿರಾಟ್ ಕೊಹ್ಲಿಯೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 113 ರನ್‌ ಸೇರಿಸಿದ್ದರು. ಹಾರ್ದಿಕ್ 40 ರನ್‌ ಹಾಗೂ ಮೂರು ವಿಕೆಟ್ ಗಳಿಸಿದ್ದರು. ಆದರೆ ಒತ್ತಡ ಅಪಾರವಾಗಿದ್ದ ಪಂದ್ಯದಲ್ಲಿ ಅವರು ಸ್ನಾಯುಸೆಳೆತದ ತೊಂದರೆಯನ್ನೂ ಅನುಭವಿಸಿದ್ದರು.

ರಾಹುಲ್ ಮೇಲೆ ಕಣ್ಣು: ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅವರ ಮೇಲೂ ತಂಡದ ಮ್ಯಾನೇಜ್‌ಮೆಂಟ್ ನಿಗಾವಹಿಸಿದೆ. ಹೊಸಚೆಂಡು ಎದುರಿಸುವಾಗ ಪದಚಲನೆಯಲ್ಲಿ ಲೋಪವೆಸಗುತ್ತಿದ್ದಾರೆ. ಇದರಿಂದಾಗಿ ಸುಲಭವಾಗಿ ಔಟಾಗುತ್ತಿದ್ದಾರೆ.

ಆದ್ದರಿಂದ ಅವರು ಮಂಗಳವಾರದ ನೆಟ್ಸ್‌ನಲ್ಲಿ ತಮ್ಮ ಫುಟ್‌ವರ್ಕ್ ಸರಿಪಡಿಸುವತ್ತ ಹೆಚ್ಚು ಗಮನವಿಟ್ಟು ಅಭ್ಯಾಸ ನಡೆಸಿದರು. ಪ್ರಮುಖವಾದ ಪಂದ್ಯಗಳಲ್ಲಿ ಅವರು ಗೆಲುವಿನ ಕಾಣಿಕೆ ನೀಡುವುದಿಲ್ಲವೆಂಬ ಆರೋಪ ಅವರ ಮೇಲಿದೆ.

ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಲು ಬಹಳಷ್ಟು ಎಸೆತಗಳನ್ನು ಎದುರಿಸಿದರು. ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಹರ್ಷಲ್ ಪಟೇಲ್ ಅವರು ನಿರಂತರವಾಗಿ ಆಫ್‌ಸ್ಟಂಪ್ ಹೊರಗೆ ಎಸೆತಗಳನ್ನು ಹೆಚ್ಚು ಹಾಕಿ ರೋಹಿತ್‌ ಅಭ್ಯಾಸಕ್ಕೆ ನೆರವಾದರು.

ಆರಂಭಿಕ ಜೋಡಿಯು ವೈಫಲ್ಯ ಅನುಭವಿಸಿದರೆ ನಂತರ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಆದ್ದರಿಂದ ಇವರಿಬ್ಬರೂ ಲಕ್ಕೆ ಮರಳಿದರೆ ತಂಡಕ್ಕೆ ಉತ್ತಮ ಆರಂಭ ದೊರೆಯುತ್ತದೆ.

ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್, ರಿಷಭ್ ಪಂತ್ ಹಾಗೂ ಹೂಡಾ ಅವರು ಕೂಡ ಹೆಚ್ಚು ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ಎ ಗುಂಪಿನಿಂದ ಅರ್ಹತೆ ಗಳಿಸಿ ಸೂಪರ್ 12ಕ್ಕೆ ಪ್ರವೇಶಿಸಿರುವ ನೆದರ್ಲೆಂಡ್ಸ್‌ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದೆ. ಸ್ಕಾಟ್ ಎಡ್ವರ್ಡ್ಸ್‌ ನಾಯಕತ್ವದ ತಂಡದಲ್ಲಿ ಬೌಲಿಂಗ್ ವಿಭಾಗ ಉತ್ತಮವಾಗಿದೆ. ಬ್ಯಾಟಿಂಗ್‌ನಲ್ಲಿ ಕಾಲಿನ್ ಅಕೆಮನ್ ಬಾಂಗ್ಲಾ ವಿರುದ್ಧ ಅರ್ಧಶತಕವನ್ನು ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT