'ಜಸ್ಪ್ರೀತ್ ಬೂಮ್ರಾ ರಾಷ್ಟ್ರೀಯ ಸಂಪತ್ತು..’ ಭಾರತ ತಂಡವು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ಟಿ20 ವಿಶ್ವಕಪ್ ಜಯಿಸಿದ ನಂತರ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ ಮಾತಿದು. ಈ ಪಂದ್ಯದಲ್ಲಿ 15 ರನ್ಗಳಿಗೆ 4 ವಿಕೆಟ್ ಕಿತ್ತ ಬೂಮ್ರಾ ಇಡೀ ಟೂರ್ನಿಯಲ್ಲಿ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದರು.

ಒಂದು ಕಾಲದಲ್ಲಿ ಭಾರತವೆಂದರೆ ಸ್ಪಿನ್ ಸುಲ್ತಾನರ ನಾಡಾಗಿತ್ತು. ವೇಗದ ಬೌಲರ್ಗಳ ಕೊರತೆ ಇತ್ತು. ಮಧ್ಯಮವೇಗದ ಬೌಲರ್ಗಳಿದ್ದರು. ಕಪಿಲ್ ದೇವ್, ರೋಜರ್ ಬಿನ್ನಿ, ಕರ್ಸನ್ ಗಾವ್ರಿ ಅವರು ಮಧ್ಯಮವೇಗದ ಬೌಲಿಂಗ್ ಮೂಲಕ ಹೆಸರು ಮಾಡಿದವರು. ಆದರೆ ಪಾಕಿಸ್ತಾನದ ಇಮ್ರಾನ್ ಖಾನ್, ವಸೀಂ ಅಕ್ರಂ, ಶೋಯಬ್ ಅಖ್ತರ್, ವೆಸ್ಟ್ ಇಂಡಿಸ್ನ ಆ್ಯಂಡಿ ರಾಬರ್ಟ್ಸ್, ಮೈಕೆಲ್ ಹೋಲ್ಡಿಂಗ್, ಮಾಲ್ಕಂ ಮಾರ್ಷಲ್, ಆಸ್ಟ್ರೇಲಿಯಾದ ಡೆನಿಸ್ ಲಿಲ್ಲಿ, ಗ್ಲೆನ್ ಮೆಕ್ಗ್ರಾ, ಜೆಫ್ ಥಾಮ್ಸನ್ ಅವರಂತಹ ವೇಗಿಗಳು ಭಾರತದಲ್ಲಿ ಇರಲಿಲ್ಲ. ಕನ್ನಡಿಗ ಜಾವಗಲ್ ಶ್ರೀನಾಥ್ ತಮ್ಮ ವೇಗದ ಎಸೆತಗಳ ಮೂಲಕ ಛಾಪು ಮೂಡಿಸಿದರು. ಭಾರತದ ಪಿಚ್ಗಳಲ್ಲಿ ಯೂ ವೇಗದ ಮೂಲಕ ವಿಕೆಟ್ ಗಳಿಸಬಹುದು ಎಂದು ತೋರಿಸಿಕೊಟ್ಟರು. ನಂತರದ ಕಾಲಘಟ್ಟದಲ್ಲಿ ಒಬ್ಬೊಬ್ಬರಾಗಿ ವೇಗಿಗಳು ಬಂದರು.

ಆದರೆ ಜಸ್ಪ್ರೀತ್ ಬೂಮ್ರಾ ಅವರದ್ದು ಭಾರತದ ವೇಗದ ಬೌಲಿಂಗ್ ವಿಭಾಗದ ಹೊಸ ಯುಗವೇ ಸರಿ. ಟಿ20 ವಿಶ್ವಕಪ್ ಟೂರ್ನಿಯಲ್ಲಿ 8 ಪಂದ್ಯಗಳಿಂದ 14 ವಿಕೆಟ್ ಕಬಳಿಸಿದ ಅವರನ್ನು ಬೌಲಿಂಗ್ ವಿಭಾಗದ ‘ಡಾನ್ ಬ್ರಾಡ್ಮನ್’ ಎಂದು ಹಲವಾರು ದಿಗ್ಗಜರು ಕೊಂಡಾಡುತ್ತಿದ್ದಾರೆ. ಅವರ ವಿಶಿಷ್ಟ ರನ್ ಅಪ್, ಬೌಲಿಂಗ್ ಶೈಲಿ, ಮೊನಚಾದ ಸ್ವಿಂಗ್ಗಳು ಮತ್ತು ನಿಖರವಾದ ಯಾರ್ಕರ್ಗಳು ದಿನದಿಂದ ದಿನಕ್ಕೆ ಪರಿಪಕ್ವವಾಗುತ್ತಿವೆ. ಎದುರಾಳಿ ತಂಡದವರ ಜೊತೆಯಾಟಗಳನ್ನು ಮುರಿಯುವಲ್ಲಿ ಅವರು ಪರಿಪಕ್ವಗೊಂಡಿದ್ದಾರೆ. ಆರಂಭದಲ್ಲಿ ಡೆತ್ ಓವರ್ ಪರಿಣತ ಎಂದು ಖ್ಯಾತರಾಗಿದ್ದರು. ಮಾಗಿದಂತೆ ಪವರ್ಪ್ಲೇ, ಮಧ್ಯಮ ಹಂತದ ಓವರ್ ಮತ್ತು ಕೊನೆಯ ಓವರ್ಗಳಲ್ಲಿಯೂ ವಿಕೆಟ್ ಉರುಳಿಸುವ ಗಟ್ಟಿಗನಾಗಿ ಬೆಳೆದಿದ್ದಾರೆ. ವೇಗವೊಂದೇ ಅಲ್ಲ. ಸ್ವಿಂಗ್ ಮತ್ತು ಯಾರ್ಕರ್ಗಳ ವೇಗವನ್ನು ನಿಯಂತ್ರಿಸುವ ಅಪರೂಪದ ಕಲೆ ಕರಗತಗೊಳಿಸಿಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟನರ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದ ಎಸೆತವನ್ನೇ ನೋಡಿ. ನಿಧಾನಗತಿಯ ಎಸೆತ ಡಿಪ್ ಆಗಿ ಸ್ಯಾಂಟನರ್ ಅವರನ್ಹು ಬೀಟ್ ಮಾಡಿತ್ತು. ಸ್ಟಂಪ್ಗೆ ಚೆಂಡು ಅಪ್ಪಳಿಸಿದಾಗ ಸ್ಯಾಂಟನರ್ ಅವಾಕ್ಕಾಗಿದ್ದರು. ಇಂತಹ ಹಲವು ಪ್ರಸಂಗಗಳು ಬೂಮ್ರಾ ಅವರ ವೃತ್ತಿಜೀವನದಲ್ಲಿ ಇವೆ.

2016ರಲ್ಲಿ ಅವರು ಟಿ20 ಮತ್ತು ಏಕದಿನ ಕ್ರಿಕೆಟ್ ಮಾದರಿಗಳಲ್ಲಿ ಪದಾರ್ಪಣೆ ಮಾಡಿದರು. ಎರಡು ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆದರೆ ಮೂರು ಮಾದರಿಗಳಲ್ಲಿಯೂ ಭಾರತ ತಂಡದ ಗೆಲುವಿನ ರೂವಾರಿಯಾಗಿ ಬೆಳೆದರು. ಟೆಸ್ಟ್ ಕ್ರಿಕೆಟ್ನಲ್ಲಿ 52 ಪಂದ್ಯಗಳಿಂದ 234; ಏಕದಿನ ಕ್ರಿಕೆಟ್ನಲ್ಲಿ 89 ಪಂದ್ಯಗಳಿಂದ 149 ಹಾಗೂ ಟಿ20 ಕ್ರಿಕೆಟ್ನಲ್ಲಿ 95 ಪಂದ್ಯಗಳಿಂದ 121 ವಿಕೆಟ್ಗಳನ್ನು ಗಳಿಸಿದ್ದಾರೆ. ಐಪಿಎಲ್ನಲ್ಲಿಯಂತೂ ಅವರದ್ದು ಜೈತ್ರಯಾತ್ರೆಯೇ ಸರಿ. ಇದೆಲ್ಲದರ ನಡುವೆ ಅವರು ಬೆನ್ನುನೋವು, ಸ್ನಾಯುಸೆಳೆತಗಳ ಬಾಧೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಅವರಿಗಾಗಿ ಕಾರ್ಯಬಾಹುಳ್ಯ ನಿರ್ವಹಣೆ ಯೋಜನೆಯನ್ನು ವಿಶೇಷವಾಗಿ ತಯಾರಿಸಲಾಗಿದೆ. ಅಮೂಲ್ಯವಾದ ವಸ್ತುವನ್ನು ಬಳಸುವ ಮಾದರಿಯಲ್ಲಿಯೇ ಅವರ ಪ್ರತಿಭೆ, ಅನುಭವ ಮತ್ತು ಸಾಮರ್ಥ್ಯವನ್ನು ತಂಡವು ಬಳಸಿಕೊಳ್ಳುತ್ತಿದೆ. 32 ವರ್ಷದ ಬೂಮ್ರಾ ಅವರು ಕಳೆದ ಒಂದು ದಶಕದಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಕಾಣಿಕೆ ನೀಡುತ್ತಿದ್ದಾರೆ. ಅವರ ಅಭಿಮಾನಿ ಬಳಗವು ಭಾರತಕ್ಕೆ ಸೀಮಿತವಾಗಿಲ್ಲ. ಬೇರೆ ಬೇರೆ ದೇಶಗಳಲ್ಲಿಯೂ ವ್ಯಾಪಿಸಿದೆ. ಹಾಲಿ, ಮಾಜಿ ಕ್ರಿಕೆಟಿಗರಷ್ಟೇ ಅಲ್ಲ; ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೀಸ್ ಕೂಡ ಬೂಮ್ರಾ ಅವರ ಅಭಿಮಾನಿಯಾಗಿಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಬೂಮ್ರಾ ಜಾದೂ ಆವರಿಸಿದೆ.

‘ಬೂಮ್ರಾ ಅವರ ಶೈಲಿಯನ್ನು ಅನುಕರಿಸುವುದು ಕಷ್ಟಸಾಧ್ಯ. ಜೂನಿಯರ್ ಆಟಗಾರರಿಗೆ ಹೇಳಿಕೊಡುವುದು ಸಾಧ್ಯವಿಲ್ಲ. ಅಂತಹ ಕ್ಲಿಷ್ಟಕರವಾದ ಶೈಲಿಯನ್ನು ಲೀಲಾಜಾಲವಾಗಿ ರೂಢಿಸಿಕೊಂಡಿರುವ ಬೂಮ್ರಾ ಅಸಾಮಾನ್ಯರೇ ಸರಿ’ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾ ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ವೇಗಿಯೊಬ್ಬರು ಇಂತಹ ಸಾಧನೆ ಮಾಡುವುದೆಂದರೆ ಅದು ಅಪರೂಪ.

ಚುಟುಕು ರನ್ ಅಪ್ ಚಮತ್ಕಾರ

ಬೂಮ್ರಾ ಅವರು ಪ್ರಯೋಗಿಸುವ ಎಸೆತಗಳು ಮತ್ತು ಗಳಿಸುವ ವಿಕೆಟ್ಗಳಿಗಿಂತ ಹೆಚ್ಚು ಆಕರ್ಷಕವೆಂದರೆ, ಅವರ ರನ್ ಅಪ್ ಮತ್ತು ಬೌಲಿಂಗ್ ಶೈಲಿ. ಮೇಲ್ನೋಟಕ್ಕೆ ಅತ್ಯಂತ ಕಡಿಮೆ ರನ್ ಅಪ್ ಎಂದೆನಿಸಿದರೂ ಅವರು 150 ಕಿ.ಮೀ ಆಸುಪಾಸಿನಲ್ಲಿ ಪ್ರಯೋಗಿಸುವ ಯಾರ್ಕರ್ಗಳು ಅತ್ಯಂತ ಪರಿಣಾಮಕಾರಿ.

ದಶಕಗಳ ಹಿಂದೆ ಪಾಕಿಸ್ತಾನದ ಶೋಯೆಬ್ ಅಖ್ತರ್ ಅವರ ರನ್ ಅಪ್ ನೋಡಿದವರಿಗೆ ಬೂಮ್ರಾ ಅವರ ರನ್ ಅಪ್ ತೀರಾ ಚಿಕ್ಕದು ಎನಿಸುವುದರಲ್ಲಿ ಸಂಶಯವಿಲ್ಲ. ಶೋಯೆಬ್ ಅವರು ಓಡಿ ಬರುತ್ತಿದ್ದ ರೀತಿಗೆ ಬ್ಯಾಟರ್ಗಳು ಒಂದರೆಕ್ಷಣ ನಡುಗುತ್ತಿದ್ದರು. ಆದರೆ ಬೂಮ್ರಾ ಅವರ ರನ್ ಅಪ್ ಎಲ್ಲ ಸೇರಿ 15 ಹೆಜ್ಜೆಗಳು ಮಾತ್ರ.

‘ಬೂಮ್ರಾ ಅವರ ಬೌಲಿಂಗ್ ಶೈಲಿ ಬಹಳ ಆಸಕ್ತಿಕರವಾಗಿದೆ. ಬಹಳ ಚುಟುಕಾದ ರನ್ ಅಪ್ ಅದು. ಮೊದಲಿಗೆ ಜಾಗಿಂಗ್ ಮಾದರಿಯಲ್ಲಿ ಆರಂಭಿಸುತ್ತಾರೆ. ಉಳಿದ ಸ್ವಲ್ಪ ಅಂತರ ಓಡುತ್ತಾರೆ. ನೇರವಾದ (ಸೆಟೆದ ರೀತಿಯ) ತೋಳುಗಳನ್ನು ತಿರುಗಿಸಿ ಬೌಲಿಂಗ್ ಮಾಡುತ್ತಾರೆ. ಅವರ ಶೈಲಿಯು ಕ್ರಿಕೆಟ್ ಆಟದ ಯಾವುದೇ ಪುಸ್ತಕದಲ್ಲಿಯೂ ಇಲ್ಲ. ಬೇರೆಲ್ಲ ವೇಗಿಗಳಿಗಿಂತಲೂ ಅವರು ಪೂರ್ತಿ ಭಿನ್ನರಾಗಿದ್ದಾರೆ. ನನ್ನ ಕಾಲದಲ್ಲಿದ್ದ ವೇಗಿ ಜೆಫ್ ಥಾಮ್ಸನ್ ಕೂಡ ಎಲ್ಲರಿಗಿಂತ ಭಿನ್ನ ಶೈಲಿಯವರಾಗಿದ್ದರು. ಬೂಮ್ರಾ ಅವರನ್ನು ನೋಡಿದಾಗ ಜೆಫ್ ನೆನಪಾಗುತ್ತಾರೆ‘ ಎಂದು ಆಸ್ಟ್ರೇಲಿಯಾದ ದಿಗ್ಗಜ ಡೆನಿಸ್ ಲಿಲ್ಲಿ ಹೇಳುತ್ತಾರೆ.

ಬೂಮ್ರಾ ಅವರ ಈ ಶೈಲಿಯು ಅಪಾಯಕಾರಿ. ಬೆನ್ನುಹುರಿಯ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಅವರು ಬಹುಬೇಗನೆ ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಎರಡು ವರ್ಷಗಳ ಹಿಂದೆ ಜೆಫ್ ಥಾಮ್ಸನ್ ಅವರು ಹೇಳಿದ್ದರು.

ಅಂತಹದೊಂದು ಗಾಯದಿಂದ ಚೇತರಿಸಿಕೊಂಡು ಕ್ರೀಡಾಂಗಣಕ್ಕೆ ಮರಳಿರುವ ಬೂಮ್ರಾ ಮತ್ತೆ ದೂಳೆಬ್ಬಿಸುತ್ತಿದ್ದಾರೆ. ಅದು ಅವರ ದೈಹಿಕ ಸಾಮರ್ಥ್ಯವಷ್ಟೇ ಅಲ್ಲ, ಗಟ್ಟಿ ಮನೋಬಲವೂ ಹೌದು. ಅವರ ಯಶಸ್ಸಿನ ಹಿಂದಿರುವ ಗುಟ್ಟು ಇನ್ನೊಂದಿದೆ. ಅದೇನೆಂದರೆ, ಅವರು ಎಸೆತಗಳನ್ನು ಪ್ರಯೋಗಿಸುವಾಗ ಕೇವಲ ವೇಗಕ್ಕೆ ಮಹತ್ವ ನೀಡುವುದಿಲ್ಲ. ಲೈನ್, ಲೆಂಗ್ತ್, ಸ್ವಿಂಗ್ ಮತ್ತು ಸೀಮ್ ಬ್ಯಾಲೆನ್ಸ್ಗೂ ಆದ್ಯತೆ ಕೊಡುತ್ತಾರೆ. ಪಿಚ್ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಯಾ ಪಿಚ್ಗೆ ತಕ್ಕಂತೆ ಬೌಲಿಂಗ್ ಮಾಡುತ್ತಾರೆ. ಅವರ ಐಪಿಎಲ್ ಅಂಕಿಸಂಖ್ಯೆಗಳನ್ನು ತೆಗೆದು ನೋಡಿದರೆ ಇದರ ಅರಿವಾಗುತ್ತದೆ.

‘ಸ್ಟಂಪ್ಗಳು ಗಾಳಿಯಲ್ಲಿ ಹಾರಿಹೋಗಿ ಬೀಳುವುದನ್ನು ನೋಡುವುದೆಂದರೆ ನನಗೆ ಅಪಾರ ಸಂತಸ..’ ಎಂದು ಹೇಳುವ ಬೂಮ್ರಾ ಅವರಿಗೆ ವಿಕೆಟ್ ಗಳಿಕೆಯ ಹಸಿವು ನೀಗಿಲ್ಲ.

ಸ್ವಭಾವತಃ ನಿರ್ಲಿಪ್ತರಾಗಿರುವ ಬೂಮ್ರಾ ಬಾಲ್ಯದಿಂದಲೂ ಶ್ರಮಜೀವಿ. ಪಂಜಾಬಿ ಸಿಖ್ ಕುಟುಂಬದ ಬೂಮ್ರಾ ಜನಿಸಿದ್ದು ಅಹಮದಾಬಾದಿನಲ್ಲಿ. ತಂದೆ ರಾಸಾಯನಿಕ ಉತ್ಪನ್ನಗಳ ವ್ಯಾಪಾರಸ್ಥರಾಗಿದ್ದರು. ಅಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಬೂಮ್ರಾ ಅವರು ಐದು ವರ್ಷದವರಾಗಿದ್ದ ಸಂದರ್ಭದಲ್ಲಿ ತಂದೆ ನಿಧನರಾದರು. ಅಜ್ಜ ಮತ್ತು ಅಮ್ಮನ ನೆರಳಿನಲ್ಲಿ ಜಸ್ಪ್ರೀತ್ ಬೆಳೆದರು. ಅವರ ಕ್ರಿಕೆಟ್ ಪ್ರೀತಿ ಮತ್ತು ಪ್ರತಿಭೆಯನ್ನು ಗುರುತಿಸಿದ್ದು ಅವರ ಅಜ್ಜ. ಪ್ರೋತ್ಸಾಹದ ನೀರೆರೆದವರು ಅಮ್ಮ. ಆರಂಭದಲ್ಲಿ ಜಸ್ಪ್ರೀತ್ ಬೌಲಿಂಗ್ ಶೈಲಿಯನ್ನು ನೋಡಿ ವ್ಯಂಗ್ಯವಾಡಿದವರು ಹಲವರು. ಆದರೆ ಅವರ ನಿಖರ ಎಸೆತಗಳ ಪರಿಣಾಮವು ಎಲ್ಲರ ಬಾಯಿ ಮುಚ್ಚಿಸಿತು. ಕಾಲಕ್ರಮೇಣ ಅವರು ಗುಜರಾತ್ ರಾಜ್ಯ ತಂಡಕ್ಕೆ ಸೇರ್ಪಡೆಯಾದರು. 2012–13ರಲ್ಲಿ ಗುಜರಾತ್ ತಂಡದಲ್ಲಿ ಆಡಿದ್ದರು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಂಡವು ಚಾಂಪಿಯನ್ ಆಗಲು ಬೂಮ್ರಾ ಬೌಲಿಂಗ್ ಕಾರಣವಾಗಿತ್ತು.

ಅದೇ ಹೊತ್ತಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾ ಶೋಧದ ತಂಡದ ಕಣ್ಣಿಗೆ ಬಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಬಾಗಿಲು ತೆರೆಯಿತು. ಮಧ್ಯಮವರ್ಗದ ಕುಟುಂಬದ ಎಲ್ಲ ಕಷ್ಟ, ನಷ್ಟಗಳನ್ನು ಅನುಭವಿಸಿದ್ದ ಜಸ್ಪ್ರೀತ್ ಕೋಟ್ಯಧೀಶರೂ ಆದರು. ಕ್ರಿಕೆಟ್ ತಾರೆಯಾಗುವ ಹಾದಿಯಲ್ಲಿ ಹೆಜ್ಜೆ ಹಾಕಿದರು. ಇದೀಗ ‘ದಿಗ್ಗಜ’ರ ಸಾಲಿನಲ್ಲಿ ನಿಂತಿದ್ದಾರೆ. ಅವರ ಕಪಾಟಿನಲ್ಲಿ ಈಗ ಎರಡು ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಐಪಿಎಲ್ ಟ್ರೋಫಿಗಳು ಇವೆ. ಕ್ರಿಕೆಟ್ ಪ್ರೆಸೆಂಟರ್ ಸಂಜನಾ ಗಣೇಶ್ ಅವರನ್ನು ವಿವಾಹವಾಗಿದ್ದಾರೆ. ಎರಡೂವರೆ ವರ್ಷದ ಮಗ ಅಂಗದ್ ಈ ಸಂಸಾರದ ಸಂತಸವನ್ನು ಇಮ್ಮಡಿಗೊಳಿಸಿದ್ದಾನೆ. ಕ್ರಿಕೆಟ್ ಅಂಗಳದಲ್ಲಿ ಬೂಮ್ರಾ ಕುಟುಂಬವೂ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ತವರೂರು ಅಹಮದಾಬಾದಿನಲ್ಲಿ ನಡೆದ ಫೈನಲ್ನಲ್ಲಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ, ವಿಶ್ವಕಪ್ ಹಾಗೂ ಮಗನನ್ನು ಎತ್ತಿಕೊಂಡು ನಿಂತ ಬೂಮ್ರಾ ಅವರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಮನ ಸೆಳೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.