ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಮುಗ್ಗರಿಸಿದ ಕರ್ನಾಟಕ, ಸೆಮಿಗೆ ತಮಿಳುನಾಡು

Last Updated 21 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಜೈಪುರ: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶದ ಕನಸು ಭಗ್ನವಾಯಿತು.

ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿಶತಕ ಬಾರಿಸಿದ ಎನ್. ಜಗದೀಶನ್ (102; 101ಎ) ಮತ್ತು ಅರ್ಧ ಡಜನ್ ಸಿಕ್ಸರ್ ಸಿಡಿಸಿದ ಶಾರೂಕ್ ಖಾನ್ (ಅಜೇಯ 79; 39ಎ) ಅಬ್ಬರದ ಬ್ಯಾಟಿಂಗ್‌ನಿಂದಾಗಿ ತಮಿಳುನಾಡು ತಂಡವು 151 ರನ್‌ಗಳಿಂದ ಗೆದ್ದಿತು.

ಕೆ.ಎಲ್. ಸೈನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಮಿಳುನಾಡು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 354 ರನ್ ಗಳಿಸಿತು. ಕರ್ನಾಟಕ ತಂಡವು 39 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟ್ ಆಗಲು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (43ಕ್ಕೆ3) ಮತ್ತು ಆರ್. ಸಿಲಂಬರಸನ್ (36ಕ್ಕೆ4) ಕಾರಣರಾದರು.

ಆರನೇ ಓವರ್‌ನಲ್ಲಿ ಬಾಬಾ ಅಪರಾಜಿತ್ ವಿಕೆಟ್ ಗಳಿಸಿದ ವೈಶಾಖ ವಿಜಯಕುಮಾರ್ ಉತ್ತಮ ಆರಂಭ ಒದಗಿಸಿದರು. ಆದರೆ, ಜಗದೀಶನ್ ಮತ್ತು ಸಾಯಿಕಿಶೋರ್ (61; 71ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 147 ರನ್ ಸೇರಿಸಿ ಇನಿಂಗ್ಸ್‌ಗೆ ಭದ್ರತೆ ಒದಗಿಸಿದರು. 29ನೇ ಓವರ್‌ನವರೆಗೂ ಕರ್ನಾಟಕದ ಬೌಲರ್‌ಗಳು ವಿಕೆಟ್ ಲಭಿಸದೇ ಪರದಾಡಿದರು.

ಸಾಯಿಕಿಶೋರ್ ವಿಕೆಟ್ ಗಳಿಸಿದ ಕೆಸಿ ಕಾರ್ಯಪ್ಪ ಜೊತೆಯಾಟವನ್ನು ಮುರಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ಜಗದೀಶನ್ ಆಟಕ್ಕೆ ತಡೆಯೊಡ್ಡಲು ಬೌಲರ್‌ಗಳು ನಡೆಸಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ದಿನೇಶ್ ಕಾರ್ತಿಕ್ ಮತ್ತು ಇಂದ್ರಜೀತ್ ಕೂಡ ಮಹತ್ವದ ಕಾಣಿಕೆ ನೀಡಿದರು. ಪ್ರಸಿದ್ಧ ಕೃಷ್ಣ, ದುಬೆ ಮತ್ತು ಕಾರ್ಯಪ್ಪ ಮಧ್ಯಮಕ್ರಮಾಂಕದ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು.

ಅವರ ಶ್ರಮಕ್ಕೆ ಶಾರೂಕ್ ಖಾನ್ ತಣ್ಣೀರು ಸುರಿದರು. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಕರ್ನಾಟಕದ ಸೋಲಿಗೆ ಕಾರಣರಾಗಿದ್ದ ಖಾನ್ ಇಲ್ಲಿಯೂ ಅದೇ ರೀತಿಯ ಆಟವಾಡಿದರು. ಆರು ಸಿಕ್ಸರ್, ಏಳು ಬೌಂಡರಿಗಳನ್ನು ಸಿಡಿಸಿದ ಅವರು ತಂಡದ ಮೊತ್ತವು 350 ರನ್‌ ದಾಟಲು ಕಾರಣರಾದರು.

ಬ್ಯಾಟಿಂಗ್ ವೈಫಲ್ಯ: ಬೃಹತ್ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ದೇವದತ್ತ ಪಡಿಕ್ಕಲ್ ಖಾತೆ ತೆರೆಯದೇ ಮರಳಿದರು. ರೋಹನ್ ಕದಂ (24) ಮತ್ತು ಕೆ.ವಿ. ಸಿದ್ಧಾರ್ಥ್ (29) ಎರಡನೇ ವಿಕೆಟ್‌ಗೆ 59 ರನ್‌ ಸೇರಿಸಿದರು. ಸಿಲಂಬರಸನ್ ಬೌಲಿಂಗ್ ನಲ್ಲಿ ರೋಹನ್ ಔಟಾದರೆ, ಸಾಯಿಕಿಶೋರ್ ಎಸೆತದಲ್ಲಿ ಸಿದ್ಧಾರ್ಥ್ ಪೆವಿಲಿಯನ್‌ಗೆ ಮರಳಿದರು. ಆರ್. ಸಮರ್ಥ್ ಇಲ್ಲದ ಕೊರತೆ ತಂಡಕ್ಕೆ ಕಾಡಿತು.

ಮನೀಷ್ ಪಾಂಡೆ (9; 8ಎ) ದೊಡ್ಡ ಇನಿಂಗ್ಸ್‌ ಕಟ್ಟದಂತೆ ಎಂ ಸಿದ್ಧಾರ್ಥ್ ನೋಡಿಕೊಂಡರು. ಇದು ತಂಡಕ್ಕೆ ಬಹಳ ದೊಡ್ಡ ಪೆಟ್ಟಾಯಿತು. ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ ಮತ್ತು ಶ್ರೀನಿವಾಸ್ ಶರತ್ ಅವರು ಹೋರಾಟ ಮಾಡಿದರಾದರೂ, ತಂಡವನ್ನು ಜಯದತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಲಿಲ್ಲ.

ವಿನಯ್ ಅಮೋಘ ಬೌಲಿಂಗ್: ಸೆಮಿಫೈನಲ್‌ಗೆ ಹಿಮಾಚಲ
ಜೈಪುರ:
ಮಧ್ಯಮವೇಗಿ ವಿನಯ್ ಗಲೇತಿಯಾ (19ಕ್ಕೆ3) ಬೌಲಿಂಗ್ ಬಲದಿಂದ ಹಿಮಾಚಲ ಪ್ರದೇಶ ತಂಡವು ವಿಜಯ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದಲ್ಲಿ ಉತ್ತರಪ್ರದೇಶ ವಿರುದ್ಧ 5 ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ಹಿಮಾಚಲ ಪ್ರದೇಶ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿನಯ್ ಬೌಲಿಂಗ್‌ಗೆ ಆರಂಭದಲ್ಲಿಯೇ ತತ್ತರಿಸಿದ ಉತ್ತರಪ್ರದೇಶ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 207 ರನ್‌ ಮಾತ್ರ ಗಳಿಸಿತು. ಆದರೆರೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ (76; 102ಎ, 6ಬೌಂಡರಿ) ಮತ್ತು ಭುವನೇಶ್ವರ್ (46; 52ಎ) ಅವರ ಅಟದಿಂದಾಗಿ 200ರ ಗಡಿ ದಾಟಿತು. ಆದರೆ, ಹಿಮಾಚಲ ಪ್ರದೇಶ ತಂಡದ ಪ್ರಶಾಂತ್ ಚೋಪ್ರಾ (99; 141ಎ) ಮತ್ತು ನಿಖಿಲ್ ಗಾಂಗ್ಟಾ (58 ರನ್) ಅವರ ಬ್ಯಾಟಿಂಗ್‌ ಮುಂದೆ ಈ ಮೊತ್ತವು ಸುಲಭವಾಗಿ ಕರಗಿತು. ಪ್ರಶಾಂತ್ ಕೇವಲ ಒಂದು ರನ್ ಅಂತರದಿಂದ ಶತಕ ತಪ್ಪಿಸಿಕೊಂಡರು. 45.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 208 ರನ್ ಗಳಿಸಿದ ಹಿಮಾಚಲ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ಸಂಕ್ಷಿಪ್ತ ಸ್ಕೋರು: ಉತ್ತರಪ್ರದೇಶ: 50 ಓವರ್‌ಗಳಲ್ಲಿ 9ಕ್ಕೆ 207 (ಅಕ್ಷದೀಪ್ ನಾಥ್ 32, ರಿಂಕು ಸಿಂಗ್ 76, ಭುವನೇಶ್ವರ್ ಕುಮಾರ್ 46, ವಿನಯ್ ಗಲೇತಿಯಾ 19ಕ್ಕೆ3, ಸಿದ್ಧಾರ್ಥ್ ಶರ್ಮಾ 27ಕ್ಕೆ2, ಪಂಕಜ್ ಜೈಸ್ವಾಲ್ 43ಕ್ಕೆ2) ಹಿಮಾಚಲ ಪ್ರದೇಶ: 45.3 ಓವರ್‌ಗಳಲ್ಲಿ 5ಕ್ಕೆ 208 (ಪ್ರಶಾಂತ್ ಚೋಪ್ರಾ 99, ನಿಖಿಲ್ ಗಾಂಗ್ಟಾ 58, ಅಂಕಿತ್ ರಜಪೂತ್ 52ಕ್ಕೆ2, ಶಿವಂ ಮಾವಿ 34ಕ್ಕೆ3) ಫಲಿತಾಂಶ: ಹಿಮಾಚಲ ಪ್ರದೇಶ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT