ಭಾನುವಾರ, ಸೆಪ್ಟೆಂಬರ್ 26, 2021
23 °C

IND vs ENG: ಐತಿಹಾಸಿಕ ಲಾರ್ಡ್ಸ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಸೋಲಿನತ್ತ ಸಾಗಿದ್ದ ತಂಡಕ್ಕೆ ಅಮೋಘ ಜೊತೆಯಾಟದ ಮೂಲಕ ಮರುಜೀವ ತುಂಬಿದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ನಂತರ ಬೌಲಿಂಗ್‌ನಲ್ಲೂ ಭರ್ಜರಿ ದಾಳಿ ಮಾಡಿದರು. ವೇಗಿಗಳಾದ ಮೊಹಮ್ಮದ್‌ ಸಿರಾಜ್ ಮತ್ತು ಇಶಾಂತ್ ಶರ್ಮಾ ಕೂಡ ಮಿಂಚಿದರು. ಇದರ ಪರಿಣಾಮ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡ 151 ರನ್‌ಗಳ ಅಮೋಘ ಗೆಲುವು ಸಾಧಿಸಿದೆ.

ಇಂಗ್ಲೆಂಡ್‌ಗೆ ಮೊದಲ ಇನಿಂಗ್ಸ್‌ನಲ್ಲಿ 27 ರನ್‌ಗಳ ಮುನ್ನಡೆ ಬಿಟ್ಟುಕೊಟ್ಟಿದ್ದ ಭಾರತ ನಾಲ್ಕನೇ ದಿನವಾದ ಭಾನುವಾರದ ಅಂತ್ಯಕ್ಕೆ 181 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸೋಮವಾರ ನಾಲ್ಕನೇ ಓವರ್‌ನಲ್ಲಿ ರಿಷಭ್ ಪಂತ್ ವಿಕೆಟ್ ಕಳೆದುಕೊಂಡಾಗ ಸೋಲಿನ ಸುಳಿಯಲ್ಲಿ ಸಿಲುಕಿತ್ತು.

ಆದರೆ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಮೊಹಮ್ಮದ್ ಶಮಿ ಕ್ರೀಸ್‌ಗೆ ಬಂದು ನಿಧಾನವಾಗಿ ರನ್‌ ಗಳಿಸಲು ತೊಡಗಿದರು. ಇಶಾಂತ್ ಶರ್ಮಾ ಮರಳಿದ ನಂತರ ಜಸ್‌ಪ್ರೀತ್ ಅವರು ಶಮಿ ಜೊತೆಗೂಡಿದರು. ಲಯ ಕಂಡುಕೊಂಡ ನಂತರ ಇಬ್ಬರೂ ಎದುರಾಳಿ ಬೌಲರ್‌ಗಳನ್ನು ನಿರಾತಂಕವಾಗಿ ಎದುರಿಸತೊಡಗಿದರು. ಇಬ್ಬರ ಜೊತೆಯಾಟದಿಂದ 50 ರನ್‌ಗಳು ಸೇರಿದ ಬೆನ್ನಲ್ಲೇ ಶಮಿ ಅರ್ಧಶತಕವನ್ನೂ ಪೂರೈಸಿದರು. ಮೋಯಿನ್ ಅಲಿ ಅವರ ಸತತ ಎರಡು ಎಸೆತಗಳಲ್ಲಿ ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸುವ ಮೂಲಕ ಅವರು ಚೊಚ್ಚಲ ಅರ್ಧಶತಕದ ಸಂಭ್ರಮದಲ್ಲಿ ತೇಲಿದರು. ಭೋಜನ ವಿರಾಮದ ವರೆಗೂ ಇವರಿಬ್ಬರು ಆತಿಥೇಯ ಬೌಲರ್‌ಗಳನ್ನು ಕಾಡಿದರು. ‌

ವಿರಾಮದ ನಂತರ, ತಂಡದ ಮೊತ್ತ 298 ರನ್ ಆಗಿದ್ದಾಗ ಇನಿಂಗ್ಸ್ ಡಿಕ್ಲೇರ್ ಮಾಡಲು ವಿರಾಟ್ ಕೊಹ್ಲಿ ನಿರ್ಧರಿಸಿದರು. ಶಮಿ ಮತ್ತು ಬೂಮ್ರಾ ಅಜೇಯರಾಗಿ ನಗೆಸೂಸುತ್ತ ಡ್ರೆಸಿಂಗ್ ಕೊಠಡಿ ಕಡೆಗೆ ಹೆಜ್ಜೆ ಹಾಕಿದರು.

ವೇಗದ ಬೌಲಿಂಗ್ ಪೆಟ್ಟು: 272 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಭಾರತದ ವೇಗಿಗಳು ಆರಂಭದಲ್ಲೇ ಪೆಟ್ಟು ನೀಡಿದರು. ಒಂದು ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋರಿ ಬರ್ನ್ಸ್‌ ಮತ್ತು ಡಾಮ್ ಸಿಬ್ಲಿ ಅವರನ್ನು ಕ್ರಮವಾಗಿ ಬೂಮ್ರಾ ಮತ್ತು ಶಮಿ ವಾಪಸ್ ಕಳುಹಿಸಿದರು. ನಂತರ ಇಶಾಂತ್ ಶರ್ಮಾ ಪರಾಕ್ರಮ ಮೆರೆದರು. ಚಹಾ ವಿರಾಮಕ್ಕೆ ಮೊದಲು ಹಬೀಬ್ ಹಸೀಬ್ ಮತ್ತು ಜಾನಿ ಬೇಸ್ಟೊ ಅವರು ಶರ್ಮಾಗೆ ಬಲಿಯಾದರು. ಜೋ ರೂಟ್ ಅವರು ವಿರಾಮದ ನಂತರ ಮರಳಿದರು. 90 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡ ತಂಡಕ್ಕೆ ಜೋಸ್ ಬಟ್ಲರ್ ಮತ್ತು ಒಲಿ ರಾಬಿನ್ಸನ್ 30 ರನ್‌ಗಳ ಜೊತೆಯಾಟದ ಮೂಲಕ ಭರವಸೆ ತುಂಬಿದರು. ಬಟ್ಲರ್ ವಿಕೆಟ್ ಪಡೆಯುವ ಮೂಲಕ ಸಿರಾಜ್ ಮಹತ್ವದ ತಿರುವು ನೀಡಿದರು. ಜೇಮ್ಸ್ ಆ್ಯಂಡರ್ಸನ್‌ ಅವರನ್ನೂ ಸಿರಾಜ್ ಔಟ್ ಮಾಡುವುದರೊಂದಿಗೆ ತಂಡ ವಿಜಯೋತ್ಸವದಲ್ಲಿ ಮಿಂದಿತು.

ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಕೆ.ಎಲ್‌. ರಾಹುಲ್ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ಲಾರ್ಡ್ಸ್‌ನಲ್ಲಿ ಭಾರತ ತಂಡಕ್ಕೆ ಇದು ಮೂರನೇ ಗೆಲುವು. 1986 ಹಾಗೂ 2014ರ ಸರಣಿಗಳಲ್ಲಿ ತಂಡಕ್ಕೆ ಗೆಲುವು ಒಲಿದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು