ಬುಧವಾರ, ಜನವರಿ 20, 2021
16 °C

PV Web Exclusive: ಕೊಹ್ಲಿ ಗೈರು ಹಾಜರಿಯೂ..ಆಸ್ಟ್ರೇಲಿಯನ್ನರ ಸ್ಲೆಜ್ಜಿಂಗೂ...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

‘ಹಾವಿನ ತಲೆಯನ್ನು ತುಳಿದರೆ ಅದು ಬಾಲದಿಂದ ಹೊಡೆಯುತ್ತದೆ...’

ಮೂರು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಎಚ್ಚರಿಕೆಯನ್ನು ಆಸ್ಟ್ರೇಲಿಯಾ ಬಳಗಕ್ಕೆ ರವಾನಿಸಿದ್ದರು. ಅದಕ್ಕೂ ಮುಂಚೆಯೇ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಭಾರತವು 75 ರನ್‌ಗಳಿಂದ ಗೆದ್ದಿತ್ತು.

ಆಗ ಭಾರತಕ್ಕೆ ಸರಣಿ ಆಡಲು ಬರುವ ಮುನ್ನವೇ  ಆಸ್ಟ್ರೇಲಿಯಾ ತಂಡವು ವಿರಾಟ್ ಕೊಹ್ಲಿಯನ್ನು ಕೇಂದ್ರವಾಗಿಟ್ಟುಕೊಂಡು ‘ಹೀಯಾಳಿಕೆ’ ಆಟ ಆರಂಭಿಸಿತ್ತು. ಕಾಂಗರೂ ನಾಡಿನ ಹಳೆಯ ಚಾಳಿಯೆಂದರೆ ಸ್ಲೆಡ್ಜಿಂಗ್. ಅದನ್ನು ಭಾರತದ ಎದುರು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ವಿರಾಟ್ ನಾಯಕರಾದ ನಂತರ ಅವರನ್ನೇ ಗುರಿಯಾಗಿಸುವುದನ್ನು ಮೂರು ವರ್ಷಗಳಿಂದ ಮಾಡುತ್ತಿದ್ದಾರೆ. 2017ರಲ್ಲಿ ವಿರಾಟ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ, ಉಳಿದವರು (ಕೆ.ಎಲ್. ರಾಹುಲ್ ಸೇರಿ) ಚೆನ್ನಾಗಿ ಆಡಿ ಭಾರತ ಸರಣಿ ಜಯಿಸಿತ್ತು. ಸ್ಟೀವನ್ ಸ್ಮಿತ್ ಬಳಗಕ್ಕೆ ಮುಖಭಂಗವಾಗಿತ್ತು.

ಈ ಬಾರಿ ನಡೆಯಲಿರುವ ನಾಲ್ಕು ಟೆಸ್ಟ್‌ಗಳಲ್ಲಿ ಕೊಹ್ಲಿ ಮೊದಲ ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ.  ಅಪ್ಪನಾಗುವ ಖುಷಿಯಲ್ಲಿರುವ ಅವರು ಮುಂದಿನ ಮೂರು ಪಂದ್ಯಗಳಿಗೆ  ’ಪಿತೃತ್ವ ರಜೆ‘ ಪಡೆದಿದ್ದಾರೆ. ಈಗ ಆಸ್ಟ್ರೇಲಿಯಾದ ಕೆಲವು ಮಾಜಿ ಮತ್ತು ಹಾಲಿ ಆಟಗಾರರು ವಿರಾಟ್ ಗೈರು ಹಾಜರಿಯನ್ನೇ ತನ್ನ ‘ಹಿಯಾಳಿಕೆ’ಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಮೃದು ಭಾಷಾ ಬಳಕೆಯ ಮೂಲಕ ವಿರಾಟ್ ಗೈರು ತಂಡವನ್ನು ದುರ್ಬಲಗೊಳಿಸುತ್ತದೆ ಎಂಬ ಸಂದೇಶವನ್ನು ಮೆಲ್ಲಗೆ ಹರಿಯಬಿಡುತ್ತಿದ್ದಾರೆ.

2018ರಲ್ಲಿ ವಿರಾಟ್ ಬಳಗದೆದುರು ಆಸ್ಟ್ರೇಲಿಯಾ ತವರಿನಲ್ಲಿ ಸೋಲನುಭವಿಸಿತ್ತು. ಆ ಸೇಡು ತೀರಿಸಿಕೊಳ್ಳುವತ್ತ ಈಗ ಚಿತ್ತ ನೆಟ್ಟಿದೆ. ಟಿಮ್ ಪೇನ್ ನಾಯಕತ್ವದ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಬಲ ಕೂಡ ಈ ಬಾರಿ ಇದೆ.  ಆದರೆ ಆತಿಥೇಯ ತಂಡಕ್ಕೆ ಚೆನ್ನಾಗಿ ಗೊತ್ತಿದೆ.  ಚೇತೇಶ್ವರ್ ಪೂಜಾರ, ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ ಅವರು ಯಾರದೇ ನಾಯಕತ್ವದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಿ ತಂಡಕ್ಕೆ ನೆರವು ನೀಡುವಂತಹ ಸಮರ್ಥರಾಗಿದ್ದಾರೆ.

ವೇಗದ ಬೌಲಿಂಗ್ ಪಡೆಯೂ ಸಮರ್ಥವಾಗಿದೆ.  ಆದ್ದರಿಂದ ಭಾರತ ತಂಡವನ್ನು ಮಣಿಸಲು ಇರುವ ಏಕೈಕ ಅಸ್ತ್ರವೆಂದರೆ ಮಾನಸಿಕವಾಗಿ ಕುಗ್ಗಿಸುವುದು. 

‘ವಿರಾಟ್ ಅನುಪಸ್ಥಿತಿಯಿಂದಾಗಿ ಭಾರತ ತಂಡದಲ್ಲಿ ದೊಡ್ಡ ನಿರ್ವಾತ ಸೃಷ್ಟಿಯಾಗಲಿದೆ. ಅವರ ಸ್ಥಾನವನ್ನು ಸರಿದೂಗಿಸಲು ಉಳಿದ ಆಟಗಾರರು ಹರಸಾಹಸ ಪಡಬೇಕಿದೆ’ ಎಂದು ಸ್ಟೀವನ್ ಸ್ಮಿತ್ ಹೇಳಿದ್ದಾರೆ.

ಆದರೆ ಸುನೀಲ್ ಗಾವಸ್ಕರ್, ‘ವಿರಾಟ್ ಇಲ್ಲದೇ ಇರುವುದರಿಂದ ತಂಡದ ಉಳಿದ ಆಟಗಾರರಿಗೆ ಉತ್ತಮ ಅವಕಾಶ ಇದಾಗಿದೆ. ಅವರು ತಮ್ಮ ಸಾಮರ್ಥ್ಯವನ್ನು ಮೆರೆದು ಬೆಳೆಯಬೇಕು’ ಎಂದಿದ್ದಾರೆ. 

ಆದರೆ ಆಸ್ಟ್ರೇಲಿಯಾದ ಕೆಲವು ಆಟಗಾರರು ಪ್ರಜ್ಞಾಪೂರ್ವಕವಾಗಿಯೇ ವಿರಾಟ್ ಗೈರು ಹಾಜರಿಯಿಂದ ಭಾರತಕ್ಕೆ ನಷ್ಟ, ಕಠಿಣ ಎಂಬೆಲ್ಲ ಪದಗಳನ್ನು ಹರಿಬಿಡುತ್ತಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ಭಾರತ ತಂಡಕ್ಕೆ ಇದು ಮೊದಲ ಅಂತರರಾಷ್ಟ್ರೀಯ ಸರಣಿಯಾಗಿದೆ. ಆಸ್ಟ್ರೇಲಿಯಾ ಈ ಮುನ್ನ ಇಂಗ್ಲೆಂಡ್‌ನಲ್ಲಿ ಸರಣಿ ಆಡಿದೆ. ಆದರೆ ತವರಿನಲ್ಲಿ ಆತಿಥ್ಯ ಅದಕ್ಕೂ ಮೊದಲನೇಯದ್ದು. ಅಲ್ಲದೇ  ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಆರ್ಥಿಕವಾಗಿ ‘ಮರುಜನ್ಮ’ ನೀಡಬೇಕಿರುವ ಸರಣಿಯೂ ಹೌದು. ಆದ್ದರಿಂದ ‘ಕೊಹ್ಲಿ ಬ್ರ್ಯಾಂಡ್‌’ ಇಲ್ಲದಿದ್ದರೆ ಎಷ್ಟು ಲಾಭ–ನಷ್ಟವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಅಲ್ಲಿಯ ಮಂಡಳಿಯೂ ಇದೆ.

‘ವಿರಾಟ್ ಗೈರಿನಿಂದ ಆರ್ಥಿಕವಾಗಿ ಬಹಳವೇನೂ  ನಷ್ಟವಿಲ್ಲ. ನಮಗೆ ಟೂರ್ನಿ ನಡೆಯುವುದು ಮುಖ್ಯ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಹಂಗಾಮಿ ಸಿಇಒ ನಿಕ್ ಹಾಕ್ಲಿ ಹೇಳಿದ್ದಾರೆ.

ಆದರೆ, ವಿರಾಟ್ ಅನುಪಸ್ಥಿತಿಯಿಂದ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಾಗುವುದು ಅಭಿಮಾನಿಗಳಿಗೆ  ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ಮುರಿಯುವ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದು ಹೇಳಲಾಗುತ್ತಿದೆ. ಅವರು ಈಗಾಗಲೇ ಮಾಡಿರುವ ದಾಖಲೆಗಳು ಕೂಡ ಭಾರತದ ಗೆಲುವಿನ ಓಟಕ್ಕೆ ಕಾಣಿಕೆ ನೀಡಿವೆ. ಅದನ್ನು ಮನಗಂಡೇ ಆಸ್ಟ್ರೇಲಿಯಾದ ಆಟಗಾರರು ಮನಸ್ಸಿನಲ್ಲಿಯೇ ಮಂಡಿಗೆ ಮೇಯುತ್ತಿದ್ದಾರೆ. ಆದರೆ, ಕೊರೊನಾ ಕಾಲಘಟ್ಟದ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯಲು ಭಾರತದ ಉಳಿದ ಆಟಗಾರರು ಸಿದ್ಧರಾಗಿದ್ದಾರೆ. ಆದ್ದರಿಂದಲೇ ಈ ಸರಣಿ ಕುತೂಹಲಕಾರಿಯಾಗಿರುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು