ಶನಿವಾರ, ಸೆಪ್ಟೆಂಬರ್ 26, 2020
26 °C

ಭಾರತ ಕ್ರಿಕೆಟ್‌ ತಂಡದ ಕಿಟ್‌ ಪ್ರಾಯೋಜಕತ್ವ: ಪೂಮಾ‌ ಆಸಕ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಕಿಟ್‌ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದುಕೊಳ್ಳಲು ಜರ್ಮನಿಯ‌ ಕ್ರೀಡಾ ಉಡುಪು ಹಾಗೂ ಪಾದರಕ್ಷೆ ತಯಾರಿಕೆ ಕಂಪನಿ ಪೂಮಾ ಹಾಗೂ ಅಡಿಡಾಸ್‌ ಮುಂಚೂಣಿಯಲ್ಲಿವೆ. 

ಸದ್ಯ ಪ್ರಾಯೋಜಕರಾಗಿರುವ ನೈಕಿ ಕಂಪನಿಯ ಒಪ್ಪಂದವು ಸೆಪ್ಟೆಂಬರ್‌ನಲ್ಲಿ ಅಂತ್ಯವಾಗಲಿದೆ. ಆದರೆ ಕಂಪನಿಯು ಮರಳಿ ಬಿಡ್‌ ಸಲ್ಲಿಸುವುದೇ ಎಂಬುದು ಇನ್ನೂ ಖಚಿತಪಟ್ಟಿಲ್ಲ. 2016 ರಿಂದ 2020ರವರೆಗಿನ ಅವಧಿಯಲ್ಲಿ ನೈಕಿ ₹ 370 ಕೋಟಿ  (ಜೊತೆಗೆ  ₹30 ಕೋಟಿ ರಾಜಧನ) ಪಾವತಿಸಿತ್ತು.  

‘ಪೂಮಾ ಕಂಪನಿಯು ಒಂದು ಲಕ್ಷ ರೂಪಾಯಿ ಮೌಲ್ಯದ ಟೆಂಡರ್‌ ಆಹ್ವಾನ (ಐಟಿಟಿ) ದಾಖಲೆಯನ್ನು ಖರೀದಿಸಿದೆ. ಬಿಡ್‌ ದಾಖಲೆಗಳನ್ನು ಖರೀದಿಸಿದ್ದಾರೆ ಎಂದರೆ ಅವರು ಬಿಡ್‌ ಸಲ್ಲಿಸುತ್ತಿದ್ದಾರೆ ಎಂದರ್ಥವಲ್ಲ. ಆದರೆ ಕಂಪನಿಗೆ ಈ ವಿಷಯದಲ್ಲಿ ನಿಜವಾದ ಆಸಕ್ತಿಯಿದೆ ಎನ್ನಬಹುದು‘ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಡಿಡಾಸ್‌ ಕಂಪನಿ ಕೂಡ ಆಸಕ್ತಿ ತೋರಿದೆ. ಆದರೆ ಪ್ರಾಯೋಜಕತ್ವ ಹಕ್ಕುಗಳಿಗಾಗಿ ಅದು ಬಿಡ್‌ ಸಲ್ಲಿಸಲಿದೆಯೇ ಎಂಬುದು ಗೊತ್ತಾಗಿಲ್ಲ. ಜರ್ಮನಿಯ ದೈತ್ಯ ಕಂಪನಿಯು ಪ್ರತ್ಯೇಕ ಟೆಂಡರ್‌ ಆಗಿರುವ ಸರಕು ಉತ್ಪನ್ನಗಳಿಗೆ ಬಿಡ್‌ ಸಲ್ಲಿಸಬಹುದೆಂಬುದು ಕೆಲವರ ಅಂಬೋಣ.

ವಿಶೇಷ ಸರಕು ಉತ್ಪನ್ನಗಳ ಮಾರಾಟವು, ಕಂಪನಿಯು ಎಷ್ಟು ವಿಶೇಷ ಮಳಿಗೆಗಳನ್ನು ಹೊಂದಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪೂಮಾ 350ಕ್ಕೂ ಹೆಚ್ಚು ವಿಶೇಷ ಮಳಿಗೆಗಳನ್ನು ಹೊಂದಿದ್ದರೆ, ಅಡಿಡಾಸ್‌ ಹೊಂದಿರುವ ಮಳಿಗೆಗಳ ಸಂಖ್ಯೆ 450ಕ್ಕೂ ಹೆಚ್ಚು.

‘ಹೊಸ ಹಕ್ಕುದಾರರು ಐದು ವರ್ಷಗಳ ಒಪ್ಪಂದಕ್ಕೆ ಸುಮಾರು ₹ 200 ಕೋಟಿ ಪಾವತಿಸಿದರೂ ಅಚ್ಚರಿಯಿಲ್ಲ. ಇದು ಹಿಂದಿನ ಅವಧಿಯಲ್ಲಿ ನೈಕ್‌ ಪಾವತಿಸಿದ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿರುತ್ತದೆ‘ ಎಂದು ಹಿರಿಯ ಉದ್ಯಮಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು