ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ನೇ ಟೆಸ್ಟ್‌ನಲ್ಲಿ ಬಟ್ಲರ್ ಅರ್ಧಶತಕ: ಭಾರತಕ್ಕೆ ಇಂಗ್ಲೆಂಡ್ ತಿರುಗೇಟು

Last Updated 1 ಸೆಪ್ಟೆಂಬರ್ 2018, 19:58 IST
ಅಕ್ಷರ ಗಾತ್ರ

ಸೌಥಾಂಪ್ಟನ್, ಇಂಗ್ಲೆಂಡ್: ಜೋಸ್ ಬಟ್ಲರ್ ಮತ್ತು ಸ್ಯಾಮ್ ಕರನ್ ಅವರ ಜೊತೆಯಾಟದ ಬಲದಿಂದ ಇಂಗ್ಲೆಂಡ್ ತಂಡವು ಭಾರತಎದ ಎದುರಿನ ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಹೋರಾಟದ ಮೊತ್ತ ಪೇರಿಸಿದೆ.

ಪಂದ್ಯದ ಮೂರನೇ ದಿನವಾದ ಶನಿವಾರ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 91.5 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 260 ರನ್‌ ಗಳಿಸಿತು. ಇದರೊಂದಿಗೆ ಒಟ್ಟು 233 ರನ್‌ಗಳ ಮುನ್ನಡೆ ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್ ಆಗಿತ್ತು. ಅದಕ್ಕುತ್ತರವಾಗಿ ಭಾರತ ತಂಡವು 273 ರನ್‌ ಗಳಿಸಿತ್ತು. ಆದರೆ, ನಾಲ್ಕನೇ ಇನಿಂಗ್ಸ್‌ನಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಮುಟ್ಟುವುದು ಕಷ್ಟಕರ. 2014ರಲ್ಲಿ ಇಲ್ಲಿ ಭಾರತವು ನಾಲ್ಕನೇ ಇನಿಂಗ್ಸ್‌ನಲ್ಲಿ ಗಳಿಸಿದ್ದ 178 ರನ್‌ಗಳ ಮೊತ್ತವೇ ಸರ್ವಾಧಿಕ ದಾಖಲೆಯಾಗಿದೆ.

ಸ್ಪಿನ್ನರ್‌ಗಳಿಗೆ ನೆರವಾಗುತ್ತಿರುವ ಪಿಚ್‌ನಲ್ಲಿ ಇಂಗ್ಲೆಂಡ್‌ನ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರ ದಾಳಿಯನ್ನು ಹಿಮ್ಮೆಟ್ಟಿಸಿ ಗೆಲ್ಲುವ ಸವಾಲನ್ನು ಭಾರತವು ಎದುರಿಸಬೇಕಾಗಬಹುದು.

ಬಟ್ಲರ್ ದಿಟ್ಟ ಆಟ: ಏಳನೇ ಕ್ರಮಾಂದಲ್ಲಿ ಬ್ಯಾಟಿಂಗ್‌ಗೆ ಬಂದ ಜೋಸ್ ಬಟ್ಲರ್ (69; 122ಎಸೆತ, 7ಬೌಂಡರಿ)ಅವರು, ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದರು. ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ಆರಂಭಿಕ ಹಂತದಲ್ಲಿ ಆಘಾತ ಅನುಭವಿಸಿತ್ತು. 33 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತು. ನಂತರ ಜೊತೆಗೂಡಿದ ಆರಂಭಿಕ ಬ್ಯಾಟ್ಸ್‌ಮನ್ ಕೀಟನ್ ಜೆನಿಂಗ್ಸ್‌ (36 ರನ್) ಮತ್ತು ಜೋ ರೂಟ್ (48) ಅವರು ಮೂರನೇ ವಿಕೆಟ್‌ಗೆ 53 ರನ್‌ಗಳನ್ನು ಸೇರಿಸಿದರು. 32ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಅವರ ಎಸೆತದಲ್ಲಿ ಜಿನಿಂಗ್ಸ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ನಂತರ ಬಂದ ಜಾನಿ ಬೆಸ್ಟೋ ಅವರನ್ನೂ ಅದೇ ಓವರ್‌ನಲ್ಲಿ ಶಮಿ ಕ್ಲೀನ್‌ಬೌಲ್ಡ್‌ ಮಾಡಿದರು. ರೂಟ್ ಜೊತೆಗೂಡಿದ ಬೆನ್ ಸ್ಟೋಕ್ಸ್‌ ಐದನೇ ವಿಕೆಟ್‌ಗೆ 30 ರನ್‌ ಸೇರಿಸಿದರು. 46ನೇ ಓವರ್‌ನಲ್ಲಿ ರೂಟ್ ಔಟಾದ ನಂತರ ಬಂದ ಬಟ್ಲರ್‌ ತಂಡಕ್ಕೆ ಬಲ ತುಂಬಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಸ್ಯಾಮ್ ಕರನ್ ಜೊತೆಗೆ 55 ರನ್‌ ಗಳಿಸಿದರು. ಇದರಿಂದಾಗಿ ತಂಡವು 200 ರನ್‌ಗಳ ಗಡಿ ದಾಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT