ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್‌ನ ಹೊಸ ಪರ್ವ

Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕ್ರೀಡಾ ಕ್ಷೇತ್ರದ ಅತ್ಯಂತ ಸುದೀರ್ಘ ವಿಶ್ವ ಚಾಂಪಿಯನ್‌ಷಿಪ್ ಯಾವುದೆಂಬ ಪ್ರಶ್ನೆಗೆ ಹೊಸ ಉತ್ತರ ಸಿದ್ಧವಾಗಿದೆ. ಅದು ‘ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಷಿಪ್’.

ಆಗಸ್ಟ್‌ 1 ರಿಂದ ಶುರುವಾಗಿರುವ ಈ ಟೂರ್ನಿಯು 2021ರ ಜೂನ್‌ ವರೆಗೆ ಎರಡು ವರ್ಷಗಳ ಕಾಲ ನಡೆ ಯಲಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಜನಪ್ರಿಯಗೊಳಿಸುವ, ರೋಚಕಗೊಳಿಸುವ ಮತ್ತು ಅದನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯಕ್ಕೆ ಅಡಿಪಾಯವಾಗಲಿದೆ. ಒಂಬತ್ತು ತಂಡಗಳು ಕಣದಲ್ಲಿರುವ ಈ ವಿಶ್ವ ಟೂರ್ನಿಯ ಒಂದು ವಿಶೇಷ ಮತ್ತು ಕ್ರಿಕೆಟ್‌ಪ್ರಿಯರಲ್ಲಿ ಬೇಸರ ತರಿಸುವ ಒಂದು ವಿಷಯವಿದೆ. ಟೂರ್ನಿಯ ಲೀಗ್‌ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿಲ್ಲ! ಅಲ್ಲದೇ ಶ್ರೀಲಂಕಾ ಕೂಡ ಎದುರಾಳಿಯಾಗುತ್ತಿಲ್ಲ. ಅದೇ ರೀತಿ ಪಾಕ್ ತಂಡವು ಭಾರತ ಮತ್ತು ವಿಂಡೀಸ್ ತಂಡಗಳನ್ನು ಎದುರಿಸುತ್ತಿಲ್ಲ.

ದೀರ್ಘ ವೇಳಾಪಟ್ಟಿಯನ್ನು ಕಡಿತಗೊಳಿಸಲು ಐಸಿಸಿಯು ಈ ಕ್ರಮ ಅನುಸರಿಸಿದೆ. ಪ್ರತಿ ತಂಡವೂ ಎರಡು ತಂಡಗಳನ್ನು ಎದುರಿಸುತ್ತಿಲ್ಲ. ಈ ಅವಧಿಯಲ್ಲಿ ಬರುವ ಎಲ್ಲ ಟೆಸ್ಟ್ ಸರಣಿಗಳನ್ನೂ ವಿಶ್ವ ಚಾಂಪಿಯನ್‌ಷಿಪ್‌ ಭಾಗವಾಗಿಯೇ ಸೇರ್ಪಡೆ ಮಾಡಲಾಗಿದೆ. ಅದು ಆ್ಯಷಸ್ ಸರಣಿಯೊಂದಿಗೆ ಆರಂಭವಾಗಿರುವುದು ವಿಶೇಷ.

ಮಹತ್ವ ಏಕೆ?: ಟ್ವೆಂಟಿ–20 ಕ್ರಿಕೆಟ್‌ ಭರಾಟೆಯಲ್ಲಿ ಮೂಲ ಮಾದರಿಯಾಗಿರುವ ಟೆಸ್ಟ್‌ ಕ್ರಿಕೆಟ್‌ಗೆ ಜನಪ್ರಿಯತೆ ಕಡಿಮೆಯಾಗುತ್ತಿರುವ ಕೂಗು ಕೇಳಿಬಂದಿದ್ದೇ ವಿಶ್ವ ಚಾಂಪಿಯನ್‌ಷಿಪ್ ಹುಟ್ಟಲು ಕಾರಣವಾಗಿದೆ. ಈ ಟೂರ್ನಿಯು 2013ರಲ್ಲಿಯೇ ಆಯೋಜನೆಯಾಗಬೇಕಿತ್ತು. ಆದರೆ, ಆಗ ಇದ್ದ ವೇಳಾಪಟ್ಟಿಯು ದಟ್ಟಣೆಯಿಂದ ಕೂಡಿದ್ದರಿಂದ ಕೈಬಿಡಲಾಗಿತ್ತು.

2008–09ರಲ್ಲಿ ನ್ಯೂಜಿಲೆಂಡ್‌ನ ಹಿರಿಯ ಕ್ರಿಕೆಟಿಗ ಮಾರ್ಟಿನ್ ಕ್ರೋವ್ ಮತ್ತು ಐಸಿಸಿಯ ಕೆಲವು ಪದಾಧಿಕಾರಿಗಳು ಈ ಯೋಜನೆಯನ್ನು ರೂಪಿಸಿದ್ದರು. ಅದನ್ನು ಐಸಿಸಿಯ ಸಭೆಯಲ್ಲಿ ಚರ್ಚೆಗೆ ಇಟ್ಟಿದ್ದರು. ಟೆಸ್ಟ್ ಆಡುವ ದೇಶಗಳು ಅನುಮೋದನೆಯನ್ನೂ ನೀಡಿದ್ದವು. ಆದರೆ, ಈಗ ದಶಕದ ನಂತರ ಅದು ಕೈಗೂಡಿದೆ.

ಕ್ರಿಕೆಟ್ ಇವತ್ತು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಜಾಗತಿಕ ಮಟ್ಟದ ಬೃಹತ್ ವಾಣಿಜ್ಯ ಚಟುವಟಿಕೆಯಾಗಿಯೂ ರೂಪುಗೊಂಡಿದೆ. 70–80ರ ದಶಕದಲ್ಲಿ ಏಕದಿನ ಕ್ರಿಕೆಟ್ ರೂಪುಗೊಂಡಾಗಲೇ ಟೆಸ್ಟ್‌ಗೆ ಕಂಟಕ ಎದುರಾಯಿತು ಎಂದು ಕೆಲವರು ಗೊಣಗಿದ್ದರು. ಆದರೆ, ಟಿವಿ ಪ್ರಸಾರದ ಭರಾಟೆ ಅಷ್ಟೊಂದು ಇರದ ಕಾರಣ ಪಂದ್ಯಗಳ ಸಂಖ್ಯೆ ಕಡಿಮೆ ಇತ್ತು. ಏಕದಿನ ಕ್ರಿಕೆಟ್‌ ಮನರಂಜನೆಗಾದರೆ, ಟೆಸ್ಟ್ ಪಂದ್ಯಗಳು ಕ್ರಿಕೆಟ್‌ ಆಸ್ವಾದನೆಗೆ ಎಂಬ ರೂಢಿ ಬೆಳೆಯಿತು.

ಆದರೆ, 1983ರಲ್ಲಿ ಭಾರತವು ಏಕದಿನ ವಿಶ್ವಕಪ್ ಗೆದ್ದ ಮೇಲೆ ಕ್ರಿಕೆಟ್‌ ಕ್ಷೇತ್ರವೇ ಮಗ್ಗಲು ಬದಲಿಸಿತು. ಟಿವಿಗಳು, ವಾಣಿಜ್ಯ ಸಂಸ್ಥೆಗಳಿಗೆ ಪ್ರಚಾರ, ಪ್ರಸಾರದ ಲಾಭದಾಯಕ ಅವಕಾಶಗಳನ್ನು ತೆರೆದಿಟ್ಟಿತು. 2000ನೇ ಇಸವಿ ದಾಟಿದ ನಂತರ ಜನಿಸಿದ ಟ್ವೆಂಟಿ–20 ಮಾದರಿಯಂತೂ ಏಕದಿನ ಕ್ರಿಕೆಟ್‌ ಅಸ್ತಿತ್ವಕ್ಕೂ ಸವಾಲೊಡ್ಡುವ ಲಕ್ಷಣ ತೋರಿತ್ತು!

ಇದೇ ಹಂತದಲ್ಲಿ ಆಟಕ್ಕಿಂತ ಪಂದ್ಯಗಳ ಆಯೋಜನೆಯ ಮತ್ತು ಪ್ರಸಾರದಿಂದ ಆಗುವ ಆರ್ಥಿಕ ಲಾಭ–ನಷ್ಟಗಳ ಲೆಕ್ಕಾಚಾರವೇ ಮುಖ್ಯವಾಗತೊಡಗಿತು. 2007ರಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಗೆದ್ದಿತು. ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ 2008ರಲ್ಲಿ ಆರಂಭವಾಯಿತು. ಈ ಎರಡೂ ಬದಲಾವಣೆಗಳು ಕ್ರಿಕೆಟ್‌ ಸಾಂಪ್ರದಾಯಿಕತೆಯನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಹಣದ ಹುಚ್ಚುಹೊಳೆ ಹರಿಯಿತು. ಈ ಪ್ರವಾಹದಿಂದ ಟೆಸ್ಟ್ ಕ್ರಿಕೆಟ್‌ ಅನ್ನು ರಕ್ಷಿಸುವ ಸವಾಲು ಕೂಡ ಹುಟ್ಟಿಕೊಂಡಿತು.

ಭಾರತ, ಬಾಂಗ್ಲಾ, ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯಗಳನ್ನು ನೋಡಲು ಕ್ರೀಡಾಂಗಣಕ್ಕೆ ಬರುವವರ ಸಂಖ್ಯೆ ಕುಸಿಯಿತು. ಆದರೆ ಆ್ಯಷಸ್‌ನಂತಹ ಸರಣಿಗಳಲ್ಲಿ ವೀಕ್ಷಕರ ಸಂಖ್ಯೆ ಕಡಿತವಾಗಿರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಕ್ರಿಕೆಟ್‌ನ ಮೂಲಬೇರು ಮತ್ತು ಸ್ವಂತಿಕೆ ಇರುವ ಟೆಸ್ಟ್ ಮಾದರಿ ಉಳಿಯಲೇಬೇಕು ಎಂಬ ಐಸಿಸಿಯ ಉತ್ಕಟತೆಯಿಂದಾಗಿ ಯೋಚನೆ, ಯೋಜನೆಗಳು ಆರಂಭವಾದವು. ನಿಯಮಗಳು, ತಂತ್ರಜ್ಞಾನಗಳನ್ನು ಸುಧಾರಣೆ ಮಾಡಲಾಯಿತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ನಿಗದಿಯ ಓವರ್ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಪ್ರತ್ಯೇಕ ತಂಡಗಳನ್ನೇ ಕಟ್ಟಿದವು. ಇದರಿಂದಾಗಿ ಹೆಚ್ಚು ಪ್ರತಿಭಾನ್ವಿತರಿಗೆ ಅವಕಾಶ ಕೊಡಲು ಸಾಧ್ಯವಾಯಿತು. ಆದರೂ ಟೆಸ್ಟ್ ಕ್ರಿಕೆಟ್‌ ಅನ್ನು ಇನ್ನಷ್ಟು ಗಟ್ಟಿಗೊಳಿಸಲು ವಿಶ್ವ ಚಾಂಪಿಯನ್‌ಷಿಪ್ ಆರಂಭಿಸಲಾಗಿದೆ.

ಲೀಗ್ ಮತ್ತು ಫೈನಲ್ ಮಾದರಿಯಲ್ಲಿ ಈ ಟೂರ್ನಿ ನಡೆಯುತ್ತಿದೆ. ಒಂಬತ್ತು ತಂಡಗಳು ಅವಕಾಶ ಪಡೆದುಕೊಂಡಿವೆ. ಲೀಗ್ ಹಂತದ ಸರಣಿಗಳಲ್ಲಿ ವಿನೂತನ ರೀತಿಯ ಪಾಯಿಂಟ್ ಪದ್ಧತಿಯನ್ನೂ ಅಳವಡಿಸಲಾಗಿದೆ. ಪ್ರತಿಯೊಂದು ಸರಣಿಯಲ್ಲಿ ಆಡಲಾಗುವ ಪಂದ್ಯಗಳ ಸಂಖ್ಯೆಯ ಆಧಾರದ ಮೇಲೆ ಅಂಕಗಳ ಹಂಚಿಕೆಯನ್ನು ಸಿದ್ಧಗೊಳಿಸಲಾಗಿದೆ. ಏಕದಿನ ಮತ್ತು ಟ್ವೆಂಟಿ–20 ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಲು ಆತಿಥೇಯ ದೇಶಗಳು ಇವೆ. ಆದರೆ, ಈ ಟೂರ್ನಿಯಲ್ಲಿ ಆಡುವ ಎಲ್ಲ ದೇಶಗಳೂ ಆತಿಥ್ಯ ವಹಿಸುತ್ತಿರುವುದು ವಿಶೇಷ. ಪ್ರತಿ ತಂಡವೂ ತಲಾ ಆರು ಸರಣಿಗಳಲ್ಲಿ ಆಡಲಿವೆ. ಅದರಲ್ಲಿ ಮೂರು ಸ್ವದೇಶದಲ್ಲಿ ಇನ್ನೂ ಮೂರು ಸರಣಿಗಳನ್ನು ಎದುರಾಳಿ ತಂಡದ ಆತಿಥ್ಯದಲ್ಲಿ ಆಡಲಿವೆ.‌

ಈ ಟೂರ್ನಿಯ ಮಧ್ಯದಲ್ಲಿಯೇ ತಂಡಗಳು ಏಕದಿನ, ಟ್ವೆಂಟಿ–20 ದ್ವಿಪಕ್ಷೀಯ ಸರಣಿಗಳಲ್ಲಿಯೂ ಆಡಲಿವೆ. 2020ರ ಟ್ವೆಂಟಿ–20 ವಿಶ್ವಕಪ್ ಕೂಡ ನಡೆಯಲಿದೆ. ಅದರಿಂದಾಗಿ ಆಟಗಾರರು ನಿರಂತರವಾಗಿ ಕ್ರಿಕೆಟ್ ಅಂಗಳದಲ್ಲಿ ತಮ್ಮ ಸಾಮರ್ಥ್ಯ ತೋರಬೇಕಾದ ಸವಾಲು ಇದೆ. ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೋತ ತಂಡಗಳು ಟೆಸ್ಟ್ ಚಾಂಪಿಯನ್‌ ಆಗುವತ್ತ ಕಣ್ಣು ನೆಟ್ಟಿವೆ. ಇಂಗ್ಲೆಂಡ್ ಚೊಚ್ಚಲ ಅವಕಾಶದಲ್ಲಿಯೇ ಕಿರೀಟ ಧರಿಸುವ ಹುಮ್ಮಸ್ಸಿನಲ್ಲಿದೆ. ದಿನಗಳು ಸಾಗಿದಂತೆ ಈ ಟೂರ್ನಿಯು ರೋಚಕವಾಗುವ ಎಲ್ಲ ಲಕ್ಷಣಗಳೂ ಇವೆ.

ಅದರಲ್ಲೂ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸೂಕ್ತ ಅವಕಾಶ ಇದಾಗಿದೆ. ಎಲ್ಲ ತಂಡಗಳ ನಾಯಕರಿಗೂ ಇದೊಂದು ಕಠಿಣ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT