ಗುರುವಾರ , ಸೆಪ್ಟೆಂಬರ್ 19, 2019
24 °C
ಮೊದಲ ಟೆಸ್ಟ್‌

ಬೂಮ್ರಾ ದಾಳಿಗೆ ಬೆಚ್ಚಿದ ವಿಂಡೀಸ್‌; ಭಾರತಕ್ಕೆ 318 ರನ್‌ ಭರ್ಜರಿ ಜಯ

Published:
Updated:

ನಾರ್ತ್‌ ಸೌಂಡ್, ವೆಸ್ಟ್ ಇಂಡೀಸ್: ಮೊದಲ ಟೆಸ್ಟ್‌ನಲ್ಲಿ ಭಾರತ ನೀಡಿದ 419 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ ನೂರು ರನ್‌ ಪೂರೈಸುವಷ್ಟರಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು ಬಹುಬೇಗ ಶರಣಾಯಿತು. 

ಭಾನುವಾರ ಭಾರತ ನೀಡಿದ ಕಠಿಣ ಸವಾಲಿನ ಮುಂದೆ ವಿಂಡೀಸ್‌ ಪಡೆಯ ಆತ್ಮವಿಶ್ವಾಸ ಕುಗ್ಗಿತು. ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ನಡೆಸಿದ ಮಾರಕ ದಾಳಿಗೆ ಆತಿಥೇಯ ತಂಡ ಬೆಚ್ಚಿತು. ಕೇವಲ ಏಳು ರನ್‌ ನೀಡಿ ಪ್ರಮುಖ 5 ವಿಕೆಟ್‌ ಕಬಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿನ ಹಾದಿ ಸುಗಮಗೊಳಿಸಿದರು. 

318 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ, ವೆಸ್ಟ್ ಇಂಡೀಸ್‌ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1–0 ಮುನ್ನಡೆ ಕಂಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಭಾರತದ ನಾಲ್ಕನೇ ಅತಿ ಹೆಚ್ಚು ಅಂತರದ ಗೆಲುವಾಗಿದೆ. 2015–16ರಲ್ಲಿ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ಎದುರು 336 ರನ್‌ ಗೆಲುವು ಭಾರತದ ಈವರೆಗಿನ ದಾಖಲೆಯಾಗಿದೆ. 

10ನೇ ಟೆಸ್ಟ್ ಪಂದ್ಯ ಆಡಿರುವ ಬೂಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್‌ ಪಡೆದಿರುವ ಬೌಲರ್‌ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಇಶಾಂತ್‌ ಶರ್ಮಾ ಮತ್ತೆ ತನ್ನ ಮೋಡಿ ಮುಂದುವರಿಸುವ ಮೂಲಕ ಮೂರು ವಿಕೆಟ್‌ ಪಡೆದರು. ಮೊಹಮ್ಮದ್‌ ಶಮಿ ಸಹ ಎರಡು ವಿಕೆಟ್‌(13ಕ್ಕೆ 2) ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 

ಕೇಮರ್‌ ರೋಚ್‌(38), ಮಿಗುಯೆಲ್‌ ಕಮ್ಮಿನ್ಸ್(19) ಹಾಗೂ ರಾಸ್ಟನ್‌ ಚೇಸ್‌ (12) ಹೊರತು ಪಡಿಸಿ ಯಾರೊಬ್ಬ ಆಟಗಾರನ ರನ್‌ ಗಳಿಕೆ ಎರಡು ಅಂಕಿ ದಾಟಲಿಲ್ಲ. 

ಈ ಗೆಲುವಿನೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ಕಂಡ ಭಾರತ ತಂಡದ ನಾಯಕನಾಗಿ ವಿರಾಟ್‌ ಕೊಹ್ಲಿ, ಮಹೇಂದ್ರ ಸಿಂಗ್‌ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಧೋನಿ ನಾಯಕನಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 27 ಗೆಲುವು ಗೆಲುವು ಕಂಡಿದ್ದರು. ದೇಶದ ಹೊರಗಿನ ಟೆಸ್ಟ್‌ಗಳ ಪೈಕಿ ಸೌರವ್‌ ಗಂಗೂಲಿ ನಾಯಕನಾಗಿ ದಾಖಲಿಸಿದ್ದ 11 ಗೆಲುವುಗಳನ್ನು ಕೊಹ್ಲಿ ದಾಟಿದ್ದಾರೆ. 

ಎರಡನೇ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಶತಕದ ಬಲದಿಂದ (102; 242ಎಸೆತ,5ಬೌಂಡರಿ) ಭಾರತ ತಂಡವು 112.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 343 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಎರಡು ವರ್ಷಗಳ ಬಳಿಕ ರಹಾನೆ ಶತಕ ದಾಖಲಿಸಿದರು. ಹನುಮವಿಹಾರಿ 93 ರನ್‌ ಗಳಿಸಿದರು.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತವು 75 ರನ್ ಮುನ್ನಡೆ ಸಾಧಿಸಿತ್ತು. ಪಂದ್ಯದಲ್ಲಿ ಇನ್ನು ಒಂದು ದಿನ ಬಾಕಿಯಿದ್ದಂತೆ ಭಾರತ ಗೆಲುವು ಪಡೆದಿದೆ. 

ಸಂಕ್ಷಿಪ್ತ ಸ್ಕೋರ್:

ಮೊದಲ ಇನಿಂಗ್ಸ್: ಭಾರತ:297, ವೆಸ್ಟ್ ಇಂಡೀಸ್ 222

ಎರಡನೇ ಇನಿಂಗ್ಸ್‌:112.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 343 (ವಿರಾಟ್ ಕೊಹ್ಲಿ 51, ಅಜಿಂಕ್ಯ ರಹಾನೆ 102,  ಹನುಮವಿಹಾರಿ 93), ವೆಸ್ಟ್‌ ಇಂಡೀಸ್: 26.5 ಓವರ್‌ಗಳಲ್ಲಿ 100 ರನ್ (ಇಶಾಂತ್ ಶರ್ಮಾ 31ಕ್ಕೆ3,  ಜಸ್‌ಪ್ರೀತ್ ಬೂಮ್ರಾ 7ಕ್ಕೆ5)

Post Comments (+)