ಟೆಸ್ಟ್‌ ಕ್ರಿಕೆಟ್‌: ರಾಜ್‌ಕೋಟ್‌ನಲ್ಲಿ ಭಾರತ ಸಾಮ್ರಾಟ್

7
ಕುಲದೀಪ್ ಮೋಡಿ; ವಿಂಡೀಸ್ ದೂಳಿಪಟ

ಟೆಸ್ಟ್‌ ಕ್ರಿಕೆಟ್‌: ರಾಜ್‌ಕೋಟ್‌ನಲ್ಲಿ ಭಾರತ ಸಾಮ್ರಾಟ್

Published:
Updated:
Deccan Herald

ರಾಜ್‌ಕೋಟ್: ಒಂದೇ ದಿನ 14 ವಿಕೆಟ್‌ಗಳನ್ನು ಕಬಳಿಸಿದ ಭಾರತ ತಂಡದ ಬೌಲರ್‌ಗಳು ಭಾರತ ತಂಡಕ್ಕೆ   ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ದೊಡ್ಡ ಅಂತರದ ಜಯ ಸಾಧಿಸಿತು.

ಮೂರೇ ದಿನಗಳಲ್ಲಿ ಮುಗಿದ ಪಂದ್ಯದಲ್ಲಿ ಭಾರತ ತಂಡವು  ಇನಿಂಗ್ಸ್‌ ಮತ್ತು 272 ರನ್‌ಗಳಿಂದ ಗೆದ್ದಿತು. ಇದು ಭಾರತದ ಸರ್ವಶ್ರೇಷ್ಠ ಸಾಧನೆಯಾಗಿದೆ. ಹೋದ ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಭಾರತವು 262 ರನ್‌ಗಳ ಅಂತರದಿಂದ ಗೆದ್ದಿತು. ಅದು ಇದುವರೆಗಿನ ಸಾಧನೆಯಾಗಿತ್ತು.

ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡವು ಗಳಿಸಿದ್ದ  649 ರನ್‌ಗಳ ಮೊತ್ತವನ್ನು ಬೆನ್ನತ್ತಿದ್ದ ವಿಂಡೀಸ್ ಬಳಗವು ಮೊದಲ ಇನಿಂಗ್ಸ್‌ನಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಆರ್. ಅಶ್ವಿನ್ (37ಕ್ಕೆ4) ಮತ್ತು ಮೊಹಮ್ಮದ್ ಶಮಿ (22ಕ್ಕೆ2) ಪೆಟ್ಟು ನೀಡಿದರು. ವಿಂಡೀಸ್ ಮೇಲೆ ಫಾಲೋ ಆನ್ ಹೇರಲಾಯಿತು. 

ಆದರೆ ಎರಡನೇ ಇನಿಂಗ್ಸ್‌ನಲ್ಲಿ ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಮೋಡಿಗೆ ಪ್ರವಾಸಿ ಬಳಗವು ತಲೆಬಾಗಿತು.  ಆರಂಭಿಕ ಬ್ಯಾಟ್ಸ್‌ಮನ್ ಕೀರನ್ ಪೊವೆಲ್ (83; 93ಎಸೆತ, 8ಬೌಂಡರಿ, 4ಸಿಕ್ಸರ್) ಬಿಟ್ಟರೆ ಉಳಿದವರು ದಿಟ್ಟ ಆಟವಾಡಲಿಲ್ಲ. ಕುಲದೀಪ್ (57ಕ್ಕೆ5) ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದರು.

ಇದರೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್‌ಗಳ ಗೊಂಚಲು ಗಳಿಸಿದ ಸಾಧನೆ ಮಾಡಿದರು. ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಐದು ವಿಕೆಟ್‌ ಗೊಂಚಲು ಗಳಿಸಿದ ಪ್ರಥಮ ಬೌಲರ್‌ ಎಂಬ ಶ್ರೇಯ ಅವರದ್ದಾಯಿತು.

 ವಿಂಡೀಸ್ ತಂಡವು 50.5 ಓವರ್‌ಗಳಲ್ಲಿ 196 ರನ್‌ ಗಳಿಸಿ ಸರ್ವಪತನವಾಯಿತು. ಕೇಮರ್ ರೂಚ್ ಸೇರಿದಂತೆ ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯಿಂದಾಗಿ ತಂಡದ ಹೋರಾಟ ಕಳೆಗುಂದಿತು.

 ಪದಾರ್ಪಣೆಯ ಪಂದ್ಯದಲ್ಲ ಶತಕ ಬಾರಿಸಿದ ಪೃಥ್ವಿ ಶಾ ಅವರಿಗೆ ಪಂದ್ಯಶ್ರೇಷ್ಠ ಗೌರವ ನೀಡಲಾಯಿತು. ಅ.12 ರಿಂದ 16ರವರೆಗೆ ಎರಡನೇ ಪಂದ್ಯವು ಹೈದರಾಬಾದ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !