ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯ: ಪೂಜಾರ ನೂರು, ಭಾರತ ಮುನ್ನೂರು

ಮತ್ತೊಮ್ಮೆ ಮಿಂಚಿದ ಮಯಂಕ್‌ ಅಗರವಾಲ್‌: ಮುಂದುವರಿದ ರಾಹುಲ್‌ ವೈಫಲ್ಯ
Last Updated 3 ಜನವರಿ 2019, 18:34 IST
ಅಕ್ಷರ ಗಾತ್ರ

ಸಿಡ್ನಿ: ಆತಿಥೇಯ ಬೌಲರ್‌ಗಳ ಶಾರ್ಟ್‌ ಆಫ್‌ ಲೆಂಗ್ತ್‌, ಬ್ಯಾಕ್‌ ಆಫ್‌ ಲೆಂಗ್ತ್‌, ಬೌನ್ಸರ್‌, ಹಾಫ್‌ ಟ್ರ್ಯಾಕರ್‌, ಲೆಗ್‌ ಬ್ರೇಕ್‌ ಮತ್ತು ಗೂಗ್ಲಿ ಎಸೆತಗಳನ್ನು ಮಿಡ್‌ ವಿಕೆಟ್‌, ಡೀಪ್‌ ಮಿಡ್‌ವಿಕೆಟ್‌, ಸ್ಕ್ವೇರ್‌ ಲೆಗ್‌, ಕವರ್ಸ್‌, ಕವರ್‌ ಪಾಯಿಂಟ್‌ ಹೀಗೆ ಅಂಗಳದ ಮೂಲೆ ಮೂಲೆಗೂ ಅಟ್ಟಿದ ಭಾರತದ ಚೇತೇಶ್ವರ ಪೂಜಾರ ಗುರುವಾರ ಸಿಡ್ನಿ ಕ್ರೀಡಾಂಗಣದಲ್ಲಿ ಸೇರಿದ್ದ ಕ್ರಿಕೆಟ್‌ ಪ್ರಿಯರು ಖುಷಿಯ ಕಡಲಲ್ಲಿ ತೇಲುವಂತೆ ಮಾಡಿದರು.

ಪೂಜಾರ ಅವರ ಕಲಾತ್ಮಕ ಆಟದ ಬಲದಿಂದ ಭಾರತ ತಂಡ ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಮುನ್ನೂರು ರನ್‌ ಪೇರಿಸಿತು.

ಸೌರಾಷ್ಟ್ರದ ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ, 250 ಎಸೆತಗಳಲ್ಲಿ 16 ಬೌಂಡರಿ ಸಹಿತ 130ರನ್‌ ಗಳಿಸಿ ಸಂಭ್ರಮಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯೊಂದರ ನಾಲ್ಕು ಇನಿಂಗ್ಸ್‌ಗಳಲ್ಲಿ 200ಕ್ಕೂ ಅಧಿಕ ಎಸೆತ ಎದುರಿಸಿದ ವಿಶ್ವದ ಆರನೇ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಭಾಜನರಾದರು.

ಕರ್ನಾಟಕದ ಮಯಂಕ್‌ ಅಗರವಾಲ್‌ ಕೂಡಾ ಮನಮೋಹಕ ಆಟ ಆಡಿ ಗಮನ ಸೆಳೆದರು. 27 ವರ್ಷ ವಯಸ್ಸಿನ ಮಯಂಕ್‌, 112 ಎಸೆತಗಳಲ್ಲಿ 77ರನ್‌ ಕಲೆಹಾಕಿದರು. ಇದರಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದ್ದವು.

ಮಯಂಕ್‌ ಮತ್ತು ಪೂಜಾರ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ ಒಟ್ಟು 116ರನ್‌ ಸೇರಿಸಿ‌‌ದರು. ಹೀಗಾಗಿ ವಿರಾಟ್‌ ಕೊಹ್ಲಿ ಬಳಗ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 303ರನ್‌ ಪೇರಿಸಿ ದಿನದ ಗೌರವ ತನ್ನದಾಗಿಸಿಕೊಂಡಿತು.

ರಾಹುಲ್‌ ವೈಫಲ್ಯ: ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಸಂಕಷ್ಟ ಎದುರಾಯಿತು. ಕರ್ನಾಟಕದ ಕೆ.ಎಲ್‌.ರಾಹುಲ್‌ ಎರಡನೇ ಓವರ್‌ನಲ್ಲಿ ಜೋಶ್‌ ಹ್ಯಾಜಲ್‌ವುಡ್‌ಗೆ ವಿಕೆಟ್‌ ನೀಡಿದರು. ಆರು ಎಸೆತಗಳನ್ನು ಎದುರಿಸಿದ ಅವರು ಎರಡು ಬೌಂಡರಿ ಸಹಿತ 9ರನ್‌ ಸೇರಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಮೊದಲ ಎರಡು ಪಂದ್ಯಗಳಲ್ಲಿ ರಾಹುಲ್‌, ವೈಫಲ್ಯ ಕಂಡಿದ್ದರು. ಹೀಗಾಗಿ ಮೂರನೇ ಪಂದ್ಯಕ್ಕೆ ಪ್ರಕಟಿಸಲಾಗಿದ್ದ ತಂಡದಿಂದ ಅವರನ್ನು ಕೈಬಿಡಲಾಗಿತ್ತು. ನಾಲ್ಕನೇ ಪಂದ್ಯಕ್ಕೆ ರೋಹಿತ್‌ ಶರ್ಮಾ ಅಲಭ್ಯರಾಗಿದ್ದರಿಂದ ರಾಹುಲ್‌ಗೆ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. ಈ ಅವಕಾಶವನ್ನೂ ಕರ್ನಾಟಕದ ಆಟಗಾರ ಕೈಚೆಲ್ಲಿದರು.

ಪೂಜಾರ–ಮಯಂಕ್‌ ಮೋಡಿ: ಪೂಜಾರ ಮತ್ತು ಮಯಂಕ್‌ ಮೋಡಿ ಮಾಡಿದರು. ಆರಂಭದಲ್ಲಿ ಒಂದೊಂದು ರನ್‌ ಕಲೆಹಾಕುವತ್ತ ಚಿತ್ತ ಹರಿಸಿದ ಈ ಜೋಡಿ ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಮರೆಯಲಿಲ್ಲ. 178 ಎಸೆತಗಳಲ್ಲಿ ಶತಕದ ಜೊತೆಯಾಟ ಪೂರೈಸಿದ ಈ ಜೋಡಿ ಭೋಜನ ವಿರಾಮದ ಬಳಿಕವೂ ಸೊಬಗಿನ ಆಟ ಮುಂದುವರಿಸಿತು. ಊಟದ ವಿರಾಮದ ನಂತರದ ಒಂದು ಗಂಟೆಯ ಆಟದಲ್ಲಿ ತಂಡದ ಖಾತೆಗೆ 64ರನ್‌ ಸೇರಿಸಿದ್ದು ಇದಕ್ಕೆ ಸಾಕ್ಷಿ.

96 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಯಂಕ್‌, ಶತಕದ ಹಾದಿಯಲ್ಲಿ ಮತ್ತೊಮ್ಮೆ ಎಡವಿದರು. ನೇಥನ್‌ ಲಯನ್‌ ಬೌಲ್‌ ಮಾಡಿದ 34ನೇ ಓವರ್‌ನಲ್ಲಿ ಲಾಂಗ್‌ ಆನ್‌ನಲ್ಲಿದ್ದ ಮಿಷೆಲ್‌ ಸ್ಟಾರ್ಕ್‌ಗೆ ವಿಕೆಟ್‌ ನೀಡಿದರು.

ಮಯಂಕ್‌ ಅವರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಆಡಿದ ಸತತ ಮೂರು ಇನಿಂಗ್ಸ್‌ಗಳ ಪೈಕಿ ಎರಡರಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೂರನೇ ಆರಂಭಿಕ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ತಮ್ಮದಾಗಿಸಿಕೊಂಡರು. ಸುನಿಲ್‌ ಗಾವಸ್ಕರ್‌ ಮತ್ತು ಪೃಥ್ವಿ ಶಾ ಮೊದಲು ಈ ಸಾಧನೆ ಮಾಡಿದ್ದರು.

ಮಯಂಕ್‌ ಔಟಾದ ನಂತರ ಭಾರತ ಸತತ ಎರಡು ವಿಕೆಟ್‌ ಕಳೆದುಕೊಂಡಿತು. ನಾಯಕ ವಿರಾಟ್‌ ಕೊಹ್ಲಿ (23) ಮತ್ತು ಅಜಿಂಕ್ಯ ರಹಾನೆ ಬೇಗನೆ ಪೆವಿಲಿಯನ್‌ ಸೇರಿದರು. ಹೀಗಿದ್ದರೂ ಪೂಜಾರ ಎದೆಗುಂದಲಿಲ್ಲ.

30 ವರ್ಷ ವಯಸ್ಸಿನ ಪೂಜಾರ, ತಾವೆದುರಿಸಿದ 199ನೇ ಎಸೆತದಲ್ಲಿ ಬೌಂಡರಿ ಗಳಿಸಿ ಮೂರಂಕಿಯ ಗಡಿ ದಾಟಿದರು. ಈ ಮೂಲಕ ಟೆಸ್ಟ್‌ನಲ್ಲಿ 18ನೇ ಶತಕ ಸಿಡಿಸಿದ ಸಾಧನೆಯನ್ನೂ ಮಾಡಿದರು.

ಶತಕದ ನಂತರವೂ ಅವರ ತಾಳ್ಮೆಯ ಆಟ ಮುಂದುವರಿಯಿತು. ಹನುಮ ವಿಹಾರಿ (ಔಟಾಗದೆ 39; 58ಎ, 5ಬೌಂ) ಜೊತೆ ಮುರಿಯದ ಐದನೇ ವಿಕೆಟ್‌ಗೆ 75ರನ್‌ ಸೇರಿಸಿದ ಅವರು ಪ್ರವಾಸಿ ಪಡೆ ತ್ರಿಶತಕ ಗಡಿ ದಾಟಲು ನೆರವಾದರು.

ತಪ್ಪುಗಳಿಂದ ಪಾಠ ಕಲಿಯಬೇಕು: ಮಯಂಕ್‌
‘ಈ ಪಂದ್ಯದಲ್ಲಿ ಶತಕ ಗಳಿಸಲು ಉತ್ತಮ ಅವಕಾಶ ಲಭ್ಯವಾಗಿತ್ತು. ನೇಥನ್‌ ಲಯನ್‌ ಅವರ ಎಸೆತದ ಗತಿ ಅಂದಾಜಿಸುವಲ್ಲಿ ಎಡವಿದೆ. ಅವರು ಹಾಕಿದ 34ನೇ ಓವರ್‌ನ ಆರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಲು ಪ್ರಯತ್ನಿಸಿದೆ. ಆದರೆ ಅದು ಕ್ಯಾಚ್‌ ಆಯಿತು. ಇದು ಕಲಿಕೆಯ ಹಂತ. ತಪ್ಪುಗಳು ಆಗುವುದು ಸಹಜ. ಅವುಗಳನ್ನು ತಿದ್ದಿಕೊಂಡು ಹೋಗುತ್ತೇನೆ’ ಎಂದು ಮಯಂಕ್‌ ಹೇಳಿದರು.

‘ಆಸ್ಟ್ರೇಲಿಯಾದ ವೇಗದ ದಾಳಿಯನ್ನು ಎದುರಿಸುವುದು ಸವಾಲೆನಿಸಿತ್ತು. ಚೆಂಡು ಕೆಳ ಹಂತದಲ್ಲಿ ನುಗ್ಗಿ ಬರುತ್ತಿತ್ತು. ಸ್ವಲ್ಪ ಮೈಮರೆತರೂ ವಿಕೆಟ್‌ ಬೀಳುವುದು ನಿಶ್ಚಿತವಾಗಿತ್ತು. ಹೀಗಾಗಿ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದೆ. ಆಟಕ್ಕೆ ಕುದುರಿಕೊಂಡ ನಂತರ ರನ್‌ ವೇಗ ಹೆಚ್ಚಿಸಲು ಪ್ರಯತ್ನಿಸಿದೆ’ ಎಂದರು.

‘ಮಯಂಕ್‌ ಶತಕ ಗಳಿಸದಿದ್ದುದು ಬೇಸರ ತರಿಸಿದೆ’
‘ಮಯಂಕ್‌ ಅಗರವಾಲ್‌ ಈ ಪಂದ್ಯದಲ್ಲಿ ಶತಕ ಬಾರಿಸುತ್ತಾನೆ ಎಂದು ಕಾತರನಾಗಿದ್ದೆ. ಆದರೆ ಆತ ಮೂರಂಕಿಯ ಗಡಿಯ ಸನಿಹ ಎಡವಿದ. ಹೀಗಾಗಿ ತುಂಬಾ ಬೇಸರವಾಯಿತು’ ಎಂದು ಕೋಚ್‌ ಇರ್ಫಾನ್‌ ಸೇಠ್‌ ಹೇಳಿದ್ದಾರೆ.

‘ಮಯಂಕ್‌ ಈಗಿನ್ನೂ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದಾನೆ. ಸಿಕ್ಕ ಅವಕಾಶದಲ್ಲಿ ಶ್ರೇಷ್ಠ ಆಟ ಆಡಿ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾನೆ. ಸ್ಥಿರ ಆಟದ ಮೂಲಕ ತಂಡಕ್ಕೆ ಆಸರೆಯಾಗುತ್ತಿರುವುದು ಖುಷಿಯ ವಿಷಯ’ ಎಂದಿದ್ದಾರೆ.

ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್‌ 4ಕ್ಕೆ303 (90 ಓವರ್‌ಗಳಲ್ಲಿ)

ಮಯಂಕ್‌ ಅಗರವಾಲ್‌ ಸಿ ಮಿಷೆಲ್‌ ಸ್ಟಾರ್ಕ್‌ ಬಿ ನೇಥನ್‌ ಲಯನ್‌ 77

ಕೆ.ಎಲ್‌.ರಾಹುಲ್‌ ಸಿ ಶಾನ್‌ ಮಾರ್ಷ್‌ ಬಿ ಜೋಶ್‌ ಹ್ಯಾಜಲ್‌ವುಡ್‌ 09

ಚೇತೇಶ್ವರ ಪೂಜಾರ ಬ್ಯಾಟಿಂಗ್ 130

ವಿರಾಟ್‌ ಕೊಹ್ಲಿ ಸಿ ಟಿಮ್‌ ಪೇನ್‌ ಬಿ ಜೋಶ್‌ ಹ್ಯಾಜಲ್‌ವುಡ್‌ 23

ಅಜಿಂಕ್ಯ ರಹಾನೆ ಸಿ ಟಿಮ್‌ ಪೇನ್‌ ಬಿ ಮಿಷೆಲ್‌ ಸ್ಟಾರ್ಕ್‌ 18

ಹನುಮ ವಿಹಾರಿ ಬ್ಯಾಟಿಂಗ್‌ 39

ಇತರೆ: (ಲೆಗ್‌ ಬೈ 2, ವೈಡ್‌ 5) 07

ವಿಕೆಟ್‌ ಪತನ: 1–10 (ಕೆ.ಎಲ್‌.ರಾಹುಲ್‌; 1.3), 2–126 (ಮಯಂಕ್‌; 33.6), 3–180 (ಕೊಹ್ಲಿ; 52.5), 4–228 (ರಹಾನೆ; 70.2).

ಬೌಲಿಂಗ್‌: ಮಿಷೆಲ್‌ ಸ್ಟಾರ್ಕ್‌ 18–0–75–1, ಜೋಶ್‌ ಹ್ಯಾಜಲ್‌ವುಡ್‌ 20–7–51–2, ಪ್ಯಾಟ್‌ ಕಮಿನ್ಸ್‌ 19–3–62–0, ನೇಥನ್‌ ಲಯನ್‌ 29–5–88–1, ಮಾರ್ನಸ್‌ ಲಬುಚಾನೆ 4–0–25–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT