ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಕಲೆಕ್ಟರ್‌ ನೌಕರಿ ಬಿಟ್ಟ ಧೋನಿ ದಂತಕಥೆಯಾದರು..

Last Updated 16 ಆಗಸ್ಟ್ 2020, 4:25 IST
ಅಕ್ಷರ ಗಾತ್ರ

ಬೆಂಗಳೂರು: ಮಹೇಂದ್ರಸಿಂಗ್ ಧೋನಿ ತಮ್ಮ ಜೀವನದಲ್ಲಿ ಎಂದಿಗೂ ಅಲ್ಪತೃಪ್ತರಾದವರಲ್ಲ. ಶಾಂತಚಿತ್ತ ಮತ್ತು ಮೃದುಭಾಷಿಯಾದರೂ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಕಠೋರ ಹೃದಯಿ.

ಒಂದೊಮ್ಮೆ ಅವರು ರೈಲ್ವೆ ಇಲಾಖೆಯಲ್ಲಿ ಟಿಕೆಟ್ ನಿರೀಕ್ಷಕರಾಗಿಯೇ ಮುಂದುವರಿದಿದ್ದರೆ ಕ್ರಿಕೆಟ್ ಲೋಕಕ್ಕೆ ಬಹುದೊಡ್ಡ ನಷ್ಟವಾಗುತ್ತಿತ್ತು. ಅಲ್ಲದೇ ಸ್ವತಃ ಧೋನಿಗೂ!

ಅವರು ಆ ನೌಕರಿ ಬಿಟ್ಟು ಕ್ರಿಕೆಟಿನಾಗಲು ಹೋಗಿದ್ದರಿಂದಲೇ ಇವತ್ತು ಧೋನಿಯ ಗಳಿಕೆಯ ಮೊತ್ತವು ₹ 600 ಕೋಟಿಗಿಂತಲೂ ಹೆಚ್ಚು.

ಹೌದು; ಮಧ್ಯಮವರ್ಗದ ಕುಟುಂಬಗಳಲ್ಲಿ ಮಕ್ಕಳು ಒಳ್ಳೆಯ ನೌಕರಿ ಪಡೆದರೆ ಸಾಕು ಎಂದು ತಂದೆತಾಯಿಗಳು ಸಹಜವಾಗಿಯೇ ಬಯಸುತ್ತಾರೆ. ಅದರಲ್ಲೂ ಕೇಂದ್ರ ಸರ್ಕಾರದ ನೌಕರಿ ಸಿಕ್ಕರೆ ಮಗ ಅಥವಾ ಮಗಳ ಕುರಿತು ಪಾಲಕರಿಗೆ ಆಗುವ ಸಂತಸ ಮತ್ತು ಸಂತೃಪ್ತಿಗೆ ಮೇರೆಯೇ ಇರುವುದಿಲ್ಲ. ಕ್ರಿಕೆಟ್‌ ಕೋಟಾದಲ್ಲಿ ಮಹಿ ರೈಲ್ವೆ ನೌಕರಿ ಪಡೆದರು. ಅಪ್ಪ ಪಾನ್‌ಸಿಂಗ್ ಭಾರೀ ಸಂತಸಪಟ್ಟರು.

ಧೋನಿಗೆ ತಮ್ಮ ಬಗ್ಗೆ ಆತ್ಮವಿಶ್ವಾಸವಿತ್ತು. ಭಾರತ ತಂಡದಲ್ಲಿ ಆಡುವ ಪ್ರತಿಭೆ ಮತ್ತು ಸಾಮರ್ಥ್ಯ ತಮಗಿದೆ. ಆದರೆ ರೈಲ್ವೆ ನೌಕರಿಯಲ್ಲಿ ಅದೆಲ್ಲವೂ ಕಮರುತ್ತಿದೆ. ಅಭ್ಯಾಸಕ್ಕಾಗಿ ಸಮಯ ಸಾಕಾಗುತ್ತಿಲ್ಲ. ಉನ್ನತ ದರ್ಜೆಯ ತರಬೇತಿ ಸಿಗುತ್ತಿಲ್ಲ ಎಂಬ ಕೊರಗಿತ್ತು. ಅದಕ್ಕೆ ಅವರು ಅದೊಂದು ದಿನ ನೌಕರಿ ಬಿ್ಟ್ಟರೂ ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಕೊಂಡರು.

ಯಾವುದೇ ಪಂದ್ಯದ ಕೊನೆಯ ಓವರ್‌ನಲ್ಲಿಯೂ ಭಾರತವು ಜಯಿಸಬಹುದು ಎಂಬುದನ್ನು ತೋರಿಸಿಕೊಟ್ಟ ಮೊದಲಿಗರು ಧೋನಿ. ಅದಕ್ಕಾಗಿಯೇ ಅವರು ಗ್ರೇಟ್ ಫಿನಿಷರ್ ಆದರು. ಅವರು ಕ್ರೀಸ್‌ನಲ್ಲಿರಲಿ ಅಥವಾ ವಿಕೆಟ್‌ ಹಿಂದೆ ಕೀಪಿಂಗ್ ಮಾಡುತ್ತಿರಲಿ ಎದುರಾಳಿಗಳ ಎದೆಯಲ್ಲಿ ಡವಡವ್‌ ಇದ್ದೇ ಇರುತ್ತಿತ್ತು.

ವಿವಾದಗಳು ಮತ್ತು ಟೀಕೆಗಳು

ಏನೆಲ್ಲ ಸಾಧನೆ ಮಾಡಿದರೂ ಟೀಕೆಗಳು ಮತ್ತು ವಿವಾದಗಳು ಧೋನಿಯನ್ನು ಬಿಟ್ಟಿರಲಿಲ್ಲ. ಬ್ಯಾಟ್ಸ್‌ಮನ್, ಬೌಲರ್ ಯಾರೇ ಆಗಿರಲಿ ಫೀಲ್ಡಿಂಗ್‌ನಲ್ಲಿ ಅಚ್ಚುಕಟ್ಟಾಗಿರಬೇಕು ಎಂಬುದು ಅವರ ವಾದ. ಏಕೆಂದರೆ ಒಬ್ಬ ಫೀಲ್ಡರ್‌ ಪಡೆಯುವ ಕ್ಯಾಚ್, ಮಾಡುವ ರನ್‌ಔಟ್ ಮತ್ತು ಉಳಿಸುವ ರನ್‌ಗಳು ಪಂದ್ಯದ ಫಲಿತಾಂಶವನ್ನೇ ಬದಲಿಸಬಹುದು ಎಂಬ ಅಚಲ ನಂಬಿಕೆ ಅವರದ್ದು.

ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ ತಂಡಗಳು ಮಾತ್ರ ಮೊದಲಿನಿಂದಲೂ ಇಂತಹ ಕಟ್ಟುನಿಟ್ಟಾದ ಕ್ಷೇತ್ರ ರಕ್ಷಣೆ ವ್ಯವಸ್ಥೆ ಹೊಂದಿದ್ದವು. ಜಾಂಟಿ ರೋಡ್ಸ್‌ ಬಂದಾಗ ದಕ್ಷಿಣ ಆಫ್ರಿಕಾ ತಂಡದಲ್ಲಿಯೂ ಅಂತಹದೊಂದು ರೂಢಿ ಬೆಳೆಯಿತು.

ಭಾರತ ತಂಡದಲ್ಲಿ ಅಜರುದ್ದೀನ್, ಅಜಯ್ ಜಡೇಜಾ, ರಾಬಿನ್ ಸಿಂಗ್ ಅವರಂತಹ ಒಳ್ಳೆಯ ಫೀಲ್ಡರ್‌ಗಳಿದ್ದರು. ಆದರೆ ಎಲ್ಲರೂ ಅದೇ ತರಹ ಇರಲಿಲ್ಲ. ಧೋನಿ ಆ ವ್ಯಾಖ್ಯಾನವನ್ನು ಬದಲಾಯಿಸಿದರು. ಫೀಲ್ಡಿಂಗ್‌ನಲ್ಲಿ ದುರ್ಬಲರಾಗಿದ್ದ ಕೆಲವು ಅನುಭವಿ ಮತ್ತು ಖ್ಯಾತನಾಮ ಆಟಗಾರರಿಗೆ ಗೇಟ್ ಪಾಸ್ ಕೊಡಿಸಿದರು. ಇದರಿಂದ ಅವರೆಲ್ಲರ ಕೆಂಗಣ್ಣಿಗೆ ಗುರಿಯಾದರು. ಆದರೆ, ಯುವಶಕ್ತಿಯ ಮೇಲೆ ನಂಬಿಕೆ ಇಟ್ಟರು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಹೀರ್ ಖಾನ್, ಜಸ್‌ಪ್ರೀತ್ ಬೂಮ್ರಾ ಅವರಂತಹ ಪ್ರತಿಭಾನ್ವಿತರಿಗೆ ಮಣೆ ಹಾಕಿದರು. ಸದ್ಯದ ವಿರಾಟ್ ನಾಯಕತ್ವದ ತಂಡದಲ್ಲಿರುವ ಬಹಳಷ್ಟು ಯುವಪ್ರತಿಭೆಗಳು ಧೋನಿಯ ಶೋಧವೇ ಅಂದರೆ ತಪ್ಪಿಲ್ಲ.

ತಮ್ಮ ಕ್ರಿಕೆಟ್‌ ಜೀವನ ಕೊನೆಯಾಗಲು ಧೋನಿಯ ಧೋರಣೆಯೇ ಕಾರಣ ಎಂದು ಹಲವು ಕ್ರಿಕೆಟಿಗರು ಪರೋಕ್ಷವಾಗಿ ಟೀಕಿಸಿದ್ದೂ ಇದೆ. ಅದರಲ್ಲೂ ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಕೂಡ ಬಹಿರಂಗವಾಗಿಯೇ ಧೋನಿಯನ್ನು ಟೀಕಿಸಿದ್ದಾರೆ. ಆದರೆ, ಇವೆಲ್ಲವನ್ನೂ ಮೀರಿದ ಧೋನಿ ನಡೆದದ್ದೇ ಹಾದಿಯಾಗಿತ್ತು. ಆ ಮಟ್ಟಿಗೆ ಮಹಿ ಕ್ರಿಕೆಟ್‌ನ ಯುಗಪುರುಷನೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT