ಶುಕ್ರವಾರ, ಜುಲೈ 1, 2022
25 °C
ಟ್ವೆಂಟಿ–20 ಕ್ರಿಕೆಟ್ ಸರಣಿ ಇಂದಿನಿಂದ

ಭಾರತ–ನ್ಯೂಜಿಲೆಂಡ್ ಕ್ರಿಕೆಟ್: ಜಯದ ಭರವಸೆಯಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಲಿಂಗ್ಟನ್‌: ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ನಿರಾಸೆಗೆ ಒಳಗಾಗಿದ್ದ ಭಾರತ ಮಹಿಳಾ ತಂಡದವರು ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿದ್ದಾರೆ.

ಸರಣಿಯ ಮೊದಲ ಪಂದ್ಯ ಬುಧವಾರ ಇಲ್ಲಿ ನಡೆಯಲಿದ್ದು ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಮಿಥಾಲಿ ರಾಜ್ ನಾಯಕಿಯಾಗಿದ್ದ ಏಕದಿನ ಸರಣಿಯಲ್ಲಿ ಹೆಚ್ಚಿನ ಸಾಧನೆ ಮಾಡಲಾಗದ ಕೌರ್‌ ಟ್ವೆಂಟಿ–20 ಪಂದ್ಯಗಳಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ.

ಮಹಿಳಾ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಭಾಗವಾಗಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡ ಅಮೋಘ ಜಯ ಸಾಧಿಸಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಸೋತಿತ್ತು. ಪಂದ್ಯದಲ್ಲಿ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 149 ರನ್‌ ಗಳಿಸಿತ್ತು. ಹೀಗಾಗಿ ಬ್ಯಾಟಿಂಗ್ ವಿಭಾಗಕ್ಕೆ ಹೊಸ ಚೇತನ ತುಂಬಲು ಕೋಚ್‌ ಪ್ರಯತ್ನಿಸಲಿದ್ದಾರೆ.

ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ನಂತರ ಭಾರತ ಈ ಮಾದರಿಯಲ್ಲಿ ಆಡುತ್ತಿರುವ ಮೊದಲ ಪಂದ್ಯವಾಗಿದೆ ಇದು. ಹೊಸ ಕೋಚ್‌ ಡಬ್ಲ್ಯು.ವಿ.ರಾಮನ್ ಅವರಿಗೂ ಇದು ಸವಾಲಿನ ಪಂದ್ಯವಾಗಿದೆ.

200 ಏಕದಿನ ಪಂದ್ಯಗಳನ್ನು ಆಡಿ ವಿಶ್ವದಾಖಲೆ ಬರೆದಿರುವ ಮಿಥಾಲಿ ರಾಜ್‌ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಹೆಚ್ಚು ಸಾಧನೆ ಮಾಡಲಿಲ್ಲ. ಆದ್ದರಿಂದ ನಾಯಕಿಯ ಜೊತೆ ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್‌ ಬ್ಯಾಟಿಂಗ್ ವಿಭಾಗದ ಶಕ್ತಿ ಎನಿಸಿದ್ದಾರೆ.

ತನಿಯಾ ಭಾಟಿಯಾ ಅವರ ಬದಲಿಗೆ ಮಂದಾನ ಅವರ ಜೊತೆ ಜೆಮಿಮಾ ರಾಡ್ರಿಗಸ್‌ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದ್ದು ವೇದಾ ಕೃಷ್ಣಮೂರ್ತಿ ಬದಲಿಗೆ ತಂಡವನ್ನು ಸೇರಿರುವ ಆಲ್‌ರೌಂಡರ್ ಪ್ರಿಯಾ ಪೂನಿಯಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ತಂಡಗಳು: ಭಾರತ:ಹರ್ಮನ್ ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ, ಮಿಥಾಲಿ ರಾಜ್‌, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ತನಿಯಾ ಭಾಟಿಯಾ, ಪೂನಂ ಯಾದವ್‌, ರಾಧಾ ಯಾದವ್‌, ಅನುಜಾ ಪಾಟೀಲ್‌, ಏಕ್ತಾ ಬಿಷ್ಠ್‌, ದಯಾಳನ್‌ ಹೇಮಲತಾ, ಮಾನಸಿ ಜೋಶಿ, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪ್ರಿಯಾ ಪೂನಿಯಾ.

ನ್ಯೂಜಿಲೆಂಡ್‌: ಆ್ಯಮಿ ಸಟತ್‌ವೇಟ್‌ (ನಾಯಕಿ), ಸೂಸಿ ಬೇಟ್ಸ್‌, ಬರ್ನಾಡಿನ್ ಬೆಜೂಡಿನಾಟ್‌, ಸೋಫಿ ಡಿವೈನ್‌, ಹೇಲಿ ಜೆನ್ಸೆನ್‌, ಕ್ಯಾಟ್ಲಿನ್ ಕರಿ, ಲೀ ಕ್ಯಾಸ್ಪೆರೆಕ್‌, ಅಮೆಲಿಯಾ ಕೆರ್‌, ಫ್ರಾನ್ಸಿಸ್ ಮೆಕೆ, ಕಾಥಿ ಮಾರ್ಟಿನ್‌, ರೋಸ್‌ಮೇರಿ ಮೇರ್‌, ಹನಾ ರೋ, ಲೀ ತಹುಹು.

ಪಂದ್ಯ ಆರಂಭ: ಬೆಳಿಗ್ಗೆ 8.30 (ಭಾರತೀಯ ಕಾಲಮಾನ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು