ಶುಕ್ರವಾರ, ಆಗಸ್ಟ್ 12, 2022
23 °C
ತ್ರಿಕೋನ ಏಕದಿನ ಸರಣಿ: ಬಾಂಗ್ಲಾ ಎದುರಾಳಿ

ತ್ರಿಕೋನ ಏಕದಿನ ಸರಣಿ ಫೈನಲ್‌ಗೆ ಭಾರತ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಕೆನ್‌ಹ್ಯಾಮ್‌, ಇಂಗ್ಲೆಂಡ್‌ (ಪಿಟಿಐ): ದಿವ್ಯಾಂಶ್‌ ಸಕ್ಸೇನಾ ಅವರ ಶತಕದ ಹೊರತಾಗಿಯೂ ಕೊನೆಯ ಲೀಗ್‌ ಪಂದ್ಯದಲ್ಲಿ  ಭಾರತ 19 ವರ್ಷದೊಳಗಿನವರ ತಂಡ, ಇಂಗ್ಲೆಂಡ್‌ನ 19 ವರ್ಷದೊಳಗಿನವರ ಕ್ರಿಕೆಟ್‌ ತಂಡದ ಎದುರು ಸೋತಿತು. ಆದರೆ ತ್ರಿಕೋನ ಸರಣಿಯ ಫೈನಲ್‌ ತಲುಪಲು ಸಮಸ್ಯೆಯಾಗಲಿಲ್ಲ. 

ಮಳೆಬಾಧಿತ ಪಂದ್ಯದಲ್ಲಿ ಡಕ್ವರ್ಥ್‌ ಲೂಯಿಸ್‌ ನಿಯಮದ ಅನುಸಾರ 8 ವಿಕೆಟ್‌ಗಳಿಂದ ಆತಿಥೇಯ ತಂಡದ ಎದುರು ಭಾರತ ಮುಗ್ಗರಿಸಿತು. ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಎದುರಿಸಲಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 278 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ದಿವ್ಯಾಂಶ್‌ ಭರ್ಜರಿ ಶತಕ (102) ಹಾಗೂ ನಾಯಕ ಪ್ರಿಯಮ್ ಗರ್ಗ್‌ (51) ಮತ್ತು ತಿಲಕ್‌ ವರ್ಮಾ (52) ಅರ್ಧಶತಕಗಳು ಭಾರತದ ಇನಿಂಗ್ಸ್‌ಗೆ ಜೀವ ತುಂಬಿದವು.

ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಉತ್ತಮ ಆರಂಭ ಕಂಡಿತು. ಬೆನ್‌ ಚಾರ್ಲ್ಸ್‌ವರ್ಥ್‌ (46) ಹಾಗೂ ಟಾಮ್‌ ಕ್ಲಾರ್ಕ್‌ (66) ಮೊದಲ ವಿಕೆಟ್‌ ಜೊತೆಯಾಟದಲ್ಲಿ 72 ರನ್‌ ಪೇರಿಸಿದರು. 37 ಓವರ್‌ಗಳಲ್ಲಿ ಇಂಗ್ಲೆಂಡ್‌ ಸ್ಕೋರು 161 ಆಗಿತ್ತು.

ಆ ಬಳಿಕ ಮಳೆ ಸುರಿದ ಕಾರಣ ಇಂಗ್ಲೆಂಡ್‌ಗೆ 42 ಓವರ್‌ಗಳಲ್ಲಿ 214 ರನ್‌ ಪರಿಷ್ಕೃತ ಗುರಿ ನೀಡಲಾಯಿತು. 30 ಎಸೆತಗಳಲ್ಲಿ 56 ರನ್‌
ಗಳಿಸಬೇಕಾದ ಅನಿವಾರ್ಯತೆಗೆ ಆತಿಥೇಯ ಪಡೆ ಸಿಲುಕಿತು. ಡ್ಯಾನ್‌ ಮೌಸ್ಲಿ (ಔಟಾಗದೆ 74) ಈ ವೇಳೆ ಸಿಡಿದರು. ಮೂರು ಬೌಂಡರಿ, ಎರಡು ಸಿಕ್ಸರ್‌ ಬಾರಿಸಿ ಇಂಗ್ಲೆಂಡ್‌ ಗೆಲುವನ್ನು ಸುಲಭವಾಗಿಸಿದರು. 

ಸಂಕ್ಷಿಪ್ತ ಸ್ಕೋರು: ಭಾರತ 19 ವರ್ಷದೊಳಗಿನವರ ತಂಡ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 278 (ದಿವ್ಯಾಂಶ್‌ ಸಕ್ಸೇನಾ 102, ಪ್ರಿಯಮ್‌ ಗರ್ಗ್‌ 51, ತಿಲಕ್‌ ವರ್ಮಾ 52; ಎವಿಸನ್‌ 46ಕ್ಕೆ 3, ಬಾಲ್ಡರ್‌ಸನ್‌ 60ಕ್ಕೆ 3)

ಇಂಗ್ಲೆಂಡ್‌ 19 ವರ್ಷದೊಳಗಿನವರ ತಂಡ: 41.3 ಓವರ್‌ಗಳಲ್ಲಿ 2 ವಿಕೆಟ್‌ಗೆ  214 (ಡ್ಯಾನ್‌ ಮೌಸ್ಲಿ ಔಟಾಗದೆ 74, ಟಾಮ್‌ ಕ್ಲಾರ್ಕ್‌ 66; ಪ್ರಜ್ಞೇಶ್‌ ಕಾನ್‌ಪಿಲ್ಲೆವರ್‌ 27ಕ್ಕೆ 1, ತಿಲಕ್‌ ವರ್ಮಾ 38ಕ್ಕೆ1)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು