ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ನಿವೃತ್ತಿ

Last Updated 28 ಜನವರಿ 2021, 13:07 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಆರ್ಮ್‌ಗಾರ್ಡ್‌ ರಕ್ಷಣಾ ಸಲಕರಣೆ ಧರಿಸಿ ಕಾರ್ಯನಿರ್ವಹಿಸುವ ಕ್ರಿಕೆಟ್ ಅಂಪೈರ್, ಆಸ್ಟ್ರೇಲಿಯಾದ ಬ್ರೂಸ್ ಆಕ್ಸೆನ್‌ಫೋರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

15 ವರ್ಷಗಳಿಂದ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ಅಂಪೈರಿಂಗ್ ಮಾಡಿದ್ದಾರೆ. 2012ರಿಂದ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಅಂಪೈರ್‌ಗಳ ಎಲೀಟ್ ಪ್ಯಾನಲ್‌ನಲ್ಲಿದ್ದಾರೆ. ಲಾಲಿಪಾಪ್‌ ನಮೂನೆಯ ಪಾಲಿಕಾರ್ಬೋನೈಟ್ ಡಿವೈಸ್‌ ಒಂದನ್ನು ಅವರು ತಮ್ಮ ಎಡಗೈಗೆ ಹಾಕಿಕೊಳ್ಳುತ್ತಿದ್ದರು. ಬ್ಯಾಟ್ಸ್‌ಮನ್‌ಗಳು ಹೊಡೆದಾಗ ಅನಿರೀಕ್ಷಿತವಾಗಿ ನುಗ್ಗಿ ಬರುವ ಚೆಂಡಿನ ಪೆಟ್ಟಿನಿಂದ ರಕ್ಷಣೆ ಪಡೆದುಕೊಳ್ಳಲು ಅವರು ಈ ಸಲಕರಣೆಯನ್ನು ವಿನ್ಯಾಸಗೊಳಿಸಿಕೊಂಡಿದ್ದಾರೆ. 2014ರಲ್ಲಿ ದೇಶಿ ಪಂದ್ಯವೊಂದರಲ್ಲಿ ಅಂಪೈರ್‌ವೊಬ್ಬರು ತಲೆಗೆ ಚೆಂಡು ಬಡಿದು ಮೃತಪಟ್ಟಿದ್ದರು. ಅದರಿಂದಾಗಿ ಈ ಸಲಕರಣೆಯನ್ನು 2015ರಲ್ಲಿ ಬ್ರೂಸ್ ಮೊದಲ ಬಾರಿಗೆ ಬಳಕೆ ಮಾಡಿ ಗಮನ ಸೆಳೆದರು.

60 ವರ್ಷದ ಬ್ರೂಸ್, 62 ಟೆಸ್ಟ್‌ ಪಂದ್ಯಗಳಲ್ಲಿ ಅಂಪೈರಿಂಗ್ ಕಾರ್ಯ ನಿರ್ವಹಿಸಿದ್ದಾರೆ. 2006ರ ಜನವರಿಯಲ್ಲಿ ಅವರು ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಪಂದ್ಯದಲ್ಲಿ ಮೊದಲ ಬಾರಿ ಅಂಪೈರ್ ಆಗಿದ್ದರು. ಕಳೆದ ಮೂರು ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್‌ಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ.

’ನನ್ನ ವೃತ್ತಿಜೀವನವನ್ನು ಒಮ್ಮೆ ಅವಲೋಕಿಸಿದರೆ ಅಚ್ಚರಿಯಾಗುತ್ತದೆ. ಒಟ್ಟು ನೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದು ಖುಷಿಯಾಗುತ್ತದೆ. ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ‘ ಎಂದು ಬ್ರೂಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT