ಸೋಮವಾರ, ನವೆಂಬರ್ 30, 2020
26 °C
ಡೇವಿಡ್ ವಾರ್ನರ್ ಬಳಗಕ್ಕೆ ಶ್ರೇಯಸ್ ಅಯ್ಯರ್ ಪಡೆಯ ಸವಾಲು; ಹೋಲ್ಡರ್, ವಾರ್ನರ್ ಮೇಲೆ ನಿರೀಕ್ಷೆ

ಡೆಲ್ಲಿ–ಹೈದರಾಬಾದ್: ಯಾರಿಗೆ ‘ಫೈನಲ್’?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಎದುರಿಸುವ ತಂಡ ಯಾವುದು ಎಂಬ ಪ್ರಶ್ನೆಗೆ ಭಾನುವಾರ ರಾತ್ರಿ ಉತ್ತರ ಸಿಗಲಿದೆ. ಜಯೇದ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಲಿದ್ದು ಗೆದ್ದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲಿದೆ.

ಡೆಲ್ಲಿ ಮತ್ತು ಹೈದರಾಬಾದ್ ತಂಡಗಳು ಕಳೆದ ಎರಡು ವಾರಗಳಲ್ಲಿ ಸಾಕಷ್ಟು ಏಳು–ಬೀಳು ಕಂಡಿವೆ. ಮೊದಲಾರ್ಧದಲ್ಲಿ ನೀರಸ ಆಟ ಆಡಿದ್ದ ಸನ್‌ರೈಸರ್ಸ್‌ ಎರಡನೇ ಸುತ್ತಿನಲ್ಲಿ ಪುಟಿದೆದ್ದು ಪ್ಲೇ ಆಫ್ ಹಂತಕ್ಕೇರಿತ್ತು. ನಾಯಕ ಡೇವಿಡ್ ವಾರ್ನರ್, ಆಟಗಾರರ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಂಡು ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ.

ಅತ್ತ, ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಒಂಬತ್ತು ಪಂದ್ಯಗಳಲ್ಲಿ ಅಮೋಘ ಆಟ ಆಡಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೆನಿಸಿಕೊಂಡಿತ್ತು. ನಂತರ ದಿಢೀರ್ ಪತನದತ್ತ ಸಾಗಿ, ಪ್ಲೇ ಆಫ್ ಹಂತಕ್ಕೇರುವುದೇ ಸಂದೇಹ ಎಂಬ ಸ್ಥಿತಿಗೆ ತಲುಪಿತ್ತು. ಹಿಗಾಗಿ ನಾಯಕ ಶ್ರೇಯಸ್ ಅಯ್ಯರ್ ಆತಂಕಕ್ಕೆ ಒಳಗಾಗಿದ್ದರು. ಕೊನೆಗೆ, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಮುಂದೆ ಸಪ್ಪೆಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಭಾನುವಾರ ಗೆದ್ದು ಮೊದಲ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ. ಸನ್‌ರೈಸರ್ಸ್‌ ಶುಕ್ರವಾರ ರಾತ್ರಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ವಿಕೆಟ್‌ಗಳ ಜಯ ಗಳಿಸಿ ಭರವಸೆಯಲ್ಲಿದೆ‌; ಎರಡನೇ ಪ್ರಶಸ್ತಿಯ ಕನಸು ಹೊತ್ತುಕೊಂಡಿದೆ.

ಅಗ್ರ ಕ್ರಮಾಂಕದ ಬ್ಯಾಟಿಂಗ್ ಚಿಂತೆ

‌ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ್ದೇ ಚಿಂತೆ. ಕಳೆದ ಪಂದ್ಯದಲ್ಲಿ ತಂಡ ಖಾತೆ ತೆರೆಯುವ ಮೊದಲೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿರುವುದರಿಂದ ಆತಂಕ ಹೆಚ್ಚಿದೆ. 15 ಪಂದ್ಯಗಳಲ್ಲಿ 525 ರನ್ ಕಲೆ ಹಾಕಿರುವ ಶಿಖರ್ ಧವನ್ ಮೇಲೆ ಭರವಸೆ ಇರಿಸಬಹುದು. ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ಸ್ಥಿರ ಪ್ರದರ್ಶನ ತೋರಲು ವಿಫಲರಾಗುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಚಿಂತೆ ಇಲ್ಲ. ಕಗಿಸೊ ರಬಾಡ, ಆ್ಯನ್ರಿಚ್ ನಾಕಿಯಾ ಮತ್ತು ರವಿಚಂದ್ರನ್ ಅಶ್ವಿನ್ ಉತ್ತಮ ಲಯದಲ್ಲಿದ್ದು ಅಕ್ಷರ್ ಪಟೇಲ್ ಕೂಡ ಇವರಿಗೆ ಸೂಕ್ತ ಬೆಂಬಲ ನೀಡುತ್ತಿದ್ದಾರೆ.

ಹಿಂದಿನ ಕೆಲವು ಪಂದ್ಯಗಳಲ್ಲಿ ಸನ್‌ರೈಸರ್ಸ್‌ ತಂಡದ ಬ್ಯಾಟಿಂಗ್ ವಿಭಾಗ ಅಮೋಘ ಸಾಮರ್ಥ್ಯ ತೋರುತ್ತಿದೆ. ನಾಯಕ ಡೇವಿಡ್ ವಾರ್ನರ್ ಬ್ಯಾಟಿನಿಂದ ರನ್‌ಗಳು ಹರಿದುಬರುತ್ತಿದ್ದು ಜೇಸನ್ ಹೋಲ್ಡರ್ ಅವರ ಉಪಸ್ಥಿತಿಯಿಂದಾಗಿ ತಂಡ ಇನ್ನಷ್ಟು ಬಲಿಷ್ಠವಾಗಿದೆ. ಕೇನ್ ವಿಲಿಯಮ್ಸನ್, ವೃದ್ಧಿಮಾನ್ ಸಹಾ, ಜಾನಿ ಬೆಸ್ಟೊ ಮತ್ತು ಮನೀಷ್ ಪಾಂಡೆ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಸಂದೀಪ್ ಶರ್ಮಾ, ಟಿ.ನಟರಾಜನ್ ಮತ್ತು ರಶೀದ್ ಖಾನ್ ಅವರ ಜೊತೆ ಜೇಸನ್ ಹೋಲ್ಡರ್ ಕೂಡ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು