ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಏಕದಿನ ಟ್ರೋಫಿ: ನಾಳೆ ಫೈನಲ್; ಉತ್ತರ ಪ್ರದೇಶಕ್ಕೆ ಪೃಥ್ವಿ ಶಾ ಸವಾಲು

ನಾಲ್ಕನೇ ಪ್ರಶಸ್ತಿ ಮೇಲೆ ಮುಂಬೈ ಕಣ್ಣು
Last Updated 13 ಮಾರ್ಚ್ 2021, 18:14 IST
ಅಕ್ಷರ ಗಾತ್ರ

ನವದೆಹಲಿ: ವಿಜಯ್ ಹಜಾರೆ ಏಕದಿನ ಟ್ರೋಫಿ ಟೂರ್ನಿಯಲ್ಲಿ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮುಂಬೈ ತಂಡಕ್ಕೆ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶದ ಸವಾಲು ಎದುರಾಗಿದೆ. ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿರುವ ಮುಂಬೈ ನಾಯಕ ಪೃಥ್ವಿ ಶಾ, ತಂಡವನ್ನು ಚಾಂಪಿಯನ್ ಆಗಿಸುವ ಹಂಬಲದಲ್ಲಿದ್ದಾರೆ. ಇಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಪ್ರಶಸ್ತಿ ಸುತ್ತಿನ ಹಣಾಹಣಿಗೆ ಸಜ್ಜಾಗಿದೆ.

ಪೃಥ್ವಿ ಅವರು ಟೂರ್ನಿಯಲ್ಲಿ ಇದುವರೆಗೆ 754 ರನ್ ಗಳಿಸಿದ್ದಾರೆ. ಒಂದು ದ್ವಿಶತಕ ಹಾಗೂ ಮೂರು ಶತಕಗಳು ಅವುಗಳಲ್ಲಿ ಸೇರಿವೆ. ಇಂಗ್ಲೆಂಡ್ ವಿರುದ್ಧ ಭಾರತ ತಂಡ ಆಡಲಿರುವ ಮೂರುಏಕದಿನ ಪಂದ್ಯಗಳ ಸರಣಿಗೆ ಒಂದೊಮ್ಮೆ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿದರೆಅವರ ಸ್ಥಾನ ತುಂಬಲು ಪೃಥ್ವಿ ಸ್ಪರ್ಧೆಯಲ್ಲಿದ್ದಾರೆ.

ಪೃಥ್ವಿ ಅವರ ಭರ್ಜರಿ ಬ್ಯಾಟಿಂಗ್ ನೆರಳಿನಲ್ಲಿ ಮರೆಯಾದಂತಿರುವ ಮುಂಬೈನ ಇನ್ನುಳಿದ ಬ್ಯಾಟ್ಸ್‌ಮನ್‌ಗಳೂ ತಂಡಕ್ಕೆ ಕಾಣಿಕೆ ನೀಡಬೇಕಿದೆ. ಯಶಸ್ವಿ ಜೈಸ್ವಾಲ್‌, ಸರ್ಫರಾಜ್ ಖಾನ್‌, ವಿಕೆಟ್ ಕೀಪರ್ ಆದಿತ್ಯ ತಾರೆ ಹಾಗೂ ಆಲ್‌ರೌಂಡರ್‌ಗಳಾದ ಶಮ್ಸ್‌ ಮುಲಾನಿ, ಶಿವಂ ದುಬೆ ಮಿಂಚುವ ಅಗತ್ಯವಿದೆ.

ಅನುಭವಿ ವೇಗಿ ಧವಳ್ ಕುಲಕರ್ಣಿ (ಒಟ್ಟು 14 ವಿಕೆಟ್‌) ಮುಂದಾಳತ್ವದ ಮುಂಬೈ ಬೌಲಿಂಗ್‌ ಪಡೆಯಲ್ಲಿ ತುಷಾರ್ ದೇಶಪಾಂಡೆ, ಸ್ಪಿನ್ ತ್ರಿವಳಿಗಳಾದ ಪ್ರಶಾಂತ್‌ ಸೋಲಂಕಿ, ತನುಷ್‌ ಕೋಟ್ಯಾನ್‌ ಹಾಗೂ ಶಮ್ಸ್ ಮುಲಾನಿ ಇದ್ದಾರೆ.

ಕೋಚ್ ಜ್ಞಾನೇಂದ್ರ ಪಾಂಡೆ ಅವರ ತರಬೇತಿಯಲ್ಲಿ ಪಳಗಿರುವ ಉತ್ತರ ಪ್ರದೇಶ ತಂಡವೂ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದೆ. ತಂಡದ ಯಶಸ್ಸಿನಲ್ಲಿ ನಾಯಕ, ಯುವ ಪ್ರತಿಭೆ ಕರಣ್ ಶರ್ಮಾ ಅವರ ಪಾತ್ರ ಅಪಾರ. ಎಡಗೈ ವೇಗಿ ಯಶ್ ದಯಾಳ್‌ ಬೌಲಿಂಗ್ ಬಲವಿದೆ. ನಾಯಕ ಕರಣ್‌ (225 ರನ್‌) ಹಾಗೂ ವಿಕೆಟ್ ಕೀಪರ್ ಉಪೇಂದ್ರ ಯಾದವ್‌ (276) ಬ್ಯಾಟಿಂಗ್‌ನಲ್ಲಿ ಬೆಳಗಿದ್ದಾರೆ.

ಗುಜರಾತ್ ತಂಡವನ್ನು ಸೆಮಿಫೈನಲ್‌ನಲ್ಲಿ ಐದು ವಿಕೆಟ್‌ಗಳಿಂದ ಮಣಿಸಿ ಉತ್ತರ ಪ್ರದೇಶ ಫೈನಲ್‌ಗೆ ಕಾಲಿಟ್ಟಿದೆ. ಟೂರ್ನಿಯಲ್ಲಿ ಮೂರನೇ ಬಾರಿ ಅದು ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದೆ.

ನಾಲ್ಕರ ಘಟ್ಟದಲ್ಲಿ ಮುಂಬೈ ತಂಡವು ಹಾಲಿ ಚಾಂಪಿಯನ್‌ ಕರ್ನಾಟಕವನ್ನು ಮಣಿಸಿತ್ತು. ಮುಂಬೈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದರೂ ಉತ್ತರಪ್ರದೇಶ ತಂಡವನ್ನೂ ಅಲ್ಲಗಳೆಯುವಂತಿಲ್ಲ.

ತಂಡಗಳು
ಮುಂಬೈ:
ಪೃಥ್ವಿ ಶಾ (ನಾಯಕ), ಆದಿತ್ಯ ತಾರೆ (ವಿಕೆಟ್‌ಕೀಪರ್), ಸರ್ಫರಾಜ್ ಖಾನ್, ಶಿವಂ ದುಬೆ, ಅಮನ್ ಹಕೀಂ ಖಾನ್, ಶಮ್ಸ್‌ ಮಲಾನಿ, ಪ್ರಶಾಂತ್ ಸೋಳಂಕಿ, ಮೋಹಿತ್ ಅವಸ್ತಿ, ತುಷಾರ್ ದೇಶಪಾಂಡೆ, ತನುಷ್ ಕೊಟ್ಯಾನ್, ಧವಳ್ ಕುಲಕರ್ಣಿ, ಅಖಿಲ್ ಹೆರ್ವಾಡ್ಕರ್, ಸುಜಿತ್ ನಾಯಕ, ಸಿದ್ಧೇಶ್ ಲಾಡ್, ಆಕಾಶ್ ಪಾರ್ಕರ್, ಅಥರ್ವ ಅಂಕೋಲೆಕರ್, ಅತೀಫ್ ಅತ್ತರವಾಲಾ, ಹಾರ್ದೀಕ್ ತಮೊರೆ, ಯಶಸ್ವಿ ಜೈಸ್ವಾಲ್‌.

ಉತ್ತರ ಪ್ರದೇಶ: ಕರಣ್ ಶರ್ಮಾ (ನಾಯಕ), ಆರ್ಯನ್ ಜುಯಲ್‌ (ವಿಕೆಟ್ ಕೀಪರ್‌), ಅಕ್ಷದೀಪ್ ನಾಥ್‌, ಶಾನು ಸೈನಿ, ಸಮೀರ್ ಚೌಧರಿ, ಯಶ್ ದಯಾಳ್‌, ಮಾಧವ್ ಕೌಶಿಕ್‌, ಉಪೇಂದ್ರ ಯಾದವ್‌ (ವಿಕೆಟ್‌ ಕೀಪರ್‌), ಸಮರ್ಥ್‌ ಸಿಂಗ್‌, ಪೂರ್ಣಾಂಕ್ ತ್ಯಾಗಿ, ಅಕೀಬ್ ಖಾನ್‌, ಪ್ರಿಯಂ ಗರ್ಗ್‌, ಶಿವಂ ಮಾವಿ, ಅಭಿಷೇಕ್ ಗೋಸ್ವಾಮಿ, ಜಸ್ಮೇರ್ ಧನಕರ್‌.

ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆ
ಸ್ಥಳ: ಅರುಣ್ ಜೇಟ್ಲಿ ಕ್ರೀಡಾಂಗಣ, ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT