‘ಅಯ್ಯೋ ಇನ್ನು ನಾಲ್ಕು ರನ್ ಹೊಡೆದಿದ್ದರೆ ವೈಭವ್ ಸೂರ್ಯವಂಶಿ ಶತಕ ಆಗುತ್ತಿತ್ತಲ್ಲಾ. ರಾಜಸ್ಥಾನ ರಾಯಲ್ಸ್ ಫೈನಲ್ ತಲುಪಿದ್ದರೆ ಮತ್ತು ಅದರಲ್ಲಿ ಈ 15 ವರ್ಷದ ಹುಡುಗ 24 ರನ್ ಗಳಿಸಿದ್ದರೆ ಒಂದೇ ಋತುವಿನಲ್ಲಿ 800 ರನ್ ಗಳಿಸಿದ ಸಾಧನೆ ಮೂಡುತ್ತಿತ್ತಲ್ಲ...’

ಶುಕ್ರವಾರ ರಾತ್ರಿ ಡಗ್ಔಟ್ನಲ್ಲಿ ಕಣ್ಣೀರು ಸುರಿಸುತ್ತ ಕುಳಿತಿದ್ದ ‘ಬಿಹಾರಿ ಬಾಲಕ’ ವೈಭವ್ ವಿಡಿಯೊ ನೋಡಿದ ಕ್ರಿಕೆಟ್ ಅಭಿಮಾನಿಗಳೆಲ್ಲರೂ ಮಮ್ಮಲ ಮರುಗುತ್ತ ಆಡುತ್ತಿರುವ ಮಾತುಗಳು ಇವು. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ..’ ಎಂಬಂತೆ ಇದು ಕೂಡ.

ಆದರೆ ಸಾಧ್ಯವಾಗದ ನಾಲ್ಕು ರನ್ಗಳಿಗಿಂತ ವೈಭವ್ ಗಳಿಸಿದ ಆ 96 ರನ್ಗಳನ್ನು ಇಲ್ಲಿ ಸಂಭ್ರಮಿಸಬೇಕಾದ ಅಗತ್ಯವಿದೆ. 800ರ ಗಡಿ ಮುಟ್ಟಲಿಲ್ಲ ಎನ್ನುವದಕ್ಕಿಂತ 776 ರನ್ಗಳನ್ನು ಪೇರಿಸಿರುವ ಛಲ, ಬಲ ಮತ್ತು ಸ್ಥಿರತೆಯ ಆಟವನ್ನು ಮೆಲುಕು ಹಾಕುವಂತಹ ಅವಕಾಶವನ್ನು ಈ ‘ಬೇಬಿ ಬಾಸ್’ ಕೊಟ್ಟಿದ್ದಾರಲ್ಲವೇ?

ಇಂತಹ ಇನಿಂಗ್ಸ್ಗಳು ಸದಾಕಾಲ ನೆನಪಿನಲ್ಲಿ ಉಳಿಯುತ್ತವೆ. ಕರ್ನಾಟಕದ ದಿಗ್ಗಜ ಜಿ.ಆರ್. ವಿಶ್ವನಾಥ್ ಅವರು ಮದ್ರಾಸ್ (ಚೆನ್ನೈ) ಟೆಸ್ಟ್ನಲ್ಲಿ ಗಳಿಸಿದ್ದ ಅಜೇಯ 97 ಮರೆಯಲು ಸಾಧ್ಯವೇ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಪ್ರತಿ ವರ್ಷವೂ ಹೊಸ ಪ್ರತಿಭೆಗಳು ಬಂದಿದ್ದಾರೆ. ಮಿಂಚಿದ್ದಾರ ಮತ್ತು ಇನ್ನೊಂದು ಆವೃತ್ತಿಯ ಹೊತ್ತಿಗೆ ಮರೆಯಾಗಿದ್ದಾರೆ. ಕೆಲವರು ಇದ್ದರೂ ಕೂಡ ಸುದ್ದಿಯಲ್ಲಿ ಇಲ್ಲ. ಹೋದ ವರ್ಷ ಐಪಿಎಲ್ನಲ್ಲಿ ವೈಭವ್ ಪದಾರ್ಪಣೆ ಮಾಡಿದ್ದರು. ಏಳು ಪಂದ್ಯಗಳಲ್ಲಿ ಆಡಿ 252 ರನ್ ಗಳಿಸಿದ್ದರು. ಅದರಲ್ಲಿ ಒಂದು ಶತಕ ಇತ್ತು. ಈ ಬಾರಿ ಅದರ ಮೂರು ಪಟ್ಟು ರನ್ಗಳನ್ನು ಗಳಿಸಿದ್ದಾರೆ. ಘಟಾನುಘಟಿ ಬೌಲರ್ಗಳಿಗೆ ಸಿಕ್ಸರ್ ಹೊಡೆದ ಪರಿ ಅಸಾಧಾರಣವೇ ಸರಿ. ಆದರೆ ಎಲಿಮಿನೇಟರ್ (2) ಪಂದ್ಯದವರೆಗೂ ಅವರನ್ನು ‘ಬೀಸಾಟದ ವೀರಬಾಲಕ’ನಂತೆಯೇ ಈ ಜಗತ್ತು ನೋಡಿತ್ತು. ಆದರೆ, ಗುಜರಾತ್ ಟೈಟನ್ಸ್ ಎದುರಿನ ಈ ನಿರ್ಣಾಯಕ ಪಂದ್ಯದಲ್ಲಿ ಅವರ ಇನ್ನೊಂದು ‘ಅವತಾರ’ ಕೂಡ ಬೆಳಕಿಗೆ ಬಂತು.

ಅದು ಅವರ ಪ್ರಬುದ್ಧ ಆಟ. ಎರಡು ಓವರ್ ಆಗುವಷ್ಟರಲ್ಲಿಯೇ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ ಜುರೇಲ್ ಅವರು ಔಟಾಗಿದ್ದರು. ಸ್ಕೋರ್ಬೋರ್ಡ್ನಲ್ಲಿ ಎರಡಂಕಿ ಮೊತ್ತವೂ ದಾಖಲಾಗಿರಲಿಲ್ಲ. ಇದೇ ಪಿಚ್ನಲ್ಲಿ ಮೂರು ದಿನಗಳ ಹಿಂದಷ್ಟೇ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಬಾರಿಸಿದ್ದ ವೈಭವ್ ತಮ್ಮ ಬೀಸಾಟಕ್ಕೆ ನಿಯಂತ್ರಣ ಹಾಕಿಕೊಳ್ಳಬೇಕಾಯಿತು. ತಂಡದ ಇನಿಂಗ್ಸ್ ಕಟ್ಟಿ ಬೆಳೆಸಲು ರವೀಂದ್ರ ಜಡೇಜ ಅವರೊಂದಿಗೆ ದೊಡ್ಡ ಜೊತೆಯಾಟಕ್ಕೆ ಅಣಿಯಾದರು. ಅದನ್ನು ನಿಭಾಯಿಸಿದರು ಕೂಡ. ಅದಕ್ಕಾಗಿಯೇ 47 ಎಸೆತಗಳಲ್ಲಿ ಅವರು ಗಳಿಸಿದ 96 ರನ್ಗಳು ಶ್ರೇಷ್ಠ.

ಕ್ರಿಕೆಟ್ನಲ್ಲಿ ಮೊದಲಿನಿಂದಲೂ ಅರ್ಧಶತಕ, ಶತಕ, ದ್ವಿಶತಕ, ತ್ರಿಶತಕಗಳು ಮೈಲಿಗಲ್ಲುಗಳಾಗಿ ರೂಢಿಗತವಾಗಿ ಬಂದಿವೆ. ಅದಕ್ಕಾಗಿಯೇ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರು ಶತಕಗಳ ಶತಕ ಹೊಡೆದಿದ್ದು ದಾಖಲೆಯಾಗಿಯೇ ಉಳಿದಿದೆ. ಆದರೆ 90 ರಿಂದ 100ರೊಳಗೆ ಔಟಾಗುವುದನ್ನು ‘ನರ್ವಸ್ ನೈಂಟಿ’ ಎಂದು ಕರೆಯುತ್ತಾರೆ. ಆದರೆ ಮೈಲಿಗಲ್ಲು ಮತ್ತು ಸಾಂದರ್ಭಿಕ ಉಪಯುಕ್ತತೆಯನ್ನು ಹೋಲಿಕೆ ಮಾಡಿ ನೋಡಿದರೆ, ವೈಭವ್ ಗಳಿಸಿದ ಹೊಡೆದ 96 ರನ್ಗಳಿಗೆ ಶತಕಕ್ಕೆ ಸಲ್ಲುವಷ್ಟೇ ಗೌರವ ಸಲ್ಲಲೇಬೇಕು ಅಲ್ಲವೇ?

ಅಗಾಧ ಒತ್ತಡದ ಸನ್ನಿವೇಶದಲ್ಲಿ ಹದಿಹರೆಯದ ಹುಡುಗ ತನ್ನ ಹೆಗಲ ಮೇಲೆ ಹೊಣೆ ಹೊತ್ತು ನಿಭಾಯಿಸಿದ ರೀತಿ ಅನನ್ಯ. ತಂಡದ ಮೊತ್ತವು 214 ರನ್ ಮುಟ್ಟಲು ಅವರ ಆಟವೇ ಅಡಿಗಲ್ಲಾಯಿತು. ಆದರೆ ಟೆಸ್ಟ್ ಕ್ರಿಕೆಟ್ ಪರಿಣತ ಬ್ಯಾಟರ್ಗಳಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರು ತಮ್ಮ ಕೌಶಲಭರಿತ ಮತ್ತು ಕಲಾತ್ಮಕತೆ ಬೆರೆಸಿದ ಬ್ಯಾಟಿಂಗ್ನಿಂದ ಗುಜರಾತ್ ಟೈಟನ್ಸ್ ತಂಡವನ್ನು ಫೈನಲ್ನತ್ತ ಕರೆದೊಯ್ದರು. ಭಾನುವಾರ ತಮ್ಮದೇ ತವರು ಅಹಮದಾಬಾದಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಎದುರಿಸಲು ಅಣಿಯಾದರು.

ಅದೇನೇ ಆದರೂ ವೈಭವ್ ಆಟ ಮಾತ್ರ ಮನ ಗೆದ್ದಿತು. ಕಗಿಸೊ ರಬಾಡ ಅವರಂತಹ ಬೌಲರ್ಗಳ ಉತ್ತಮ ಎಸೆತಗಳನ್ನು ಮುಂದಡಿಯಿಟ್ಟು ಸಿಕ್ಸರ್ ಎತ್ತಿದರು. ಮೊಹಮ್ಮದ್ ಸಿರಾಜ್ ಅವರ ಶಾರ್ಟ್ ಪಿಚ್, ನಿಧಾನಗತಿಯ ಎಸೆತಗಳಿಗೆ ತಕ್ಕ ಉತ್ತರ ಕೊಟ್ಟರು. ಲೆಂಗ್ತ್ ಹೊಂದಾಣಿಕೆ ಮಾಡುವ ಅವರ ಪದಚಲನೆ ಆಕರ್ಷಕವಾಗಿತ್ತು. ಕಣ್ಣಿನ ದೃಷ್ಟಿ ಮತ್ತು ಕೈಗಳ ಚಲನೆಯ ಸಂಯೋಜನೆಯೂ ಅಮೋಘ. 140 ಕಿ.ಮೀ ವೇಗಕ್ಕೂ ಹೆಚ್ಚಿನ ಎಸೆತಗಳನ್ನು ಕ್ಷಣಾರ್ಧದಲ್ಲಿ ಗುರುತಿಸಿ ಸಿಕ್ಸರ್ಗೆತ್ತುವ ಸಾಹಸದ ಹಿಂದಿನ ಅಭ್ಯಾಸ ಮತ್ತು ಆಹಾರ, ವಿಹಾರಗಳ ಕಠಿಣ ನಿಯಮಗಳ ಅನುಪಾಲನೆ ಇರಲೇಬೇಕು. ನೆಟ್ಸ್ನಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಎಸೆತಗಳಿಗೆ ಬ್ಯಾಟಿಂಗ್ ಮಾಡಲೇಬೇಕು. ಉಪ್ಪು, ಖಾರ, ಸಿಹಿಯ ಕಡಿಮೆಯ ಆದರೆ ಪ್ರೋಟಿನ್, ಪೌಷ್ಟಿಕಾಂಶಗಳಿರುವ ಊಟ, ತಿಂಡಿಗಳೇ ಸರ್ವಸ್ವ. ಎಲಿಮಿನೇಟರ್ ಪಂದ್ಯದಲ್ಲಿ ಮಿಂಚಿದ ನಂತರ ಹೋಟೆಲ್ಗೆ ಮರಳಿದ ವೈಭವ್ ಸೂರ್ಯವಂಶಿಗೆ ಭವ್ಯ ಸ್ವಾಗತ ದೊರೆಯಿತು. ಅವರ ಮುಂದೆ ಗುಲಾಬಿ ವರ್ಣದ ಸಿಹಿಯಾದ ಚೆಂದದ ಕೇಕ್ ಇತ್ತು. ಎಡಗೈನಲ್ಲಿ ಚಾಕು ಹಿಡಿದು ಪಕ್ಕದಲ್ಲೇ ಇದ್ದ ನಾಯಕ ರಿಯಾನ್ ಪರಾಗ್ ಅವರತ್ತ ನೋಡಿ ‘ಮುಖಕ್ಕೆ ಹಚ್ಚಬೇಡಿ..’ ಎನ್ನುತ್ತ ಕೇಕ್ ಕತ್ತರಿಸಿದರು. ಆದರೆ; ಆ ಕೇಕ್ನಿಂದ ಒಂದು ಚೂರನ್ನೂ ಬಾಯಿಗೆ ಹಾಕಿಕೊಳ್ಳಲಿಲ್ಲ. ಅಭಿಮಾನಿಗಳತ್ತ ಕೈಬೀಸುತ್ತ ತಮ್ಮ ಕೋಣೆಯ ಹಾದಿ ಹಿಡಿದರು.

ಹುಡುಗಾಟದ ವಯಸ್ಸಿನಲ್ಲಿ ಚಾಕೋಲೆಟ್, ಐಸ್ಕ್ರೀಂ, ಕೇಕ್ ಎಂದರೆ ಎಲ್ಲರಿಗೂ ಆಸೆ ಇದ್ದಿದ್ದೇ. ಆದರೆ 15ರ ಹದಿಹರೆಯದಲ್ಲಿ ನಾಲಿಗೆಯ ರುಚಿಗೆ ಕಡಿವಾಣ ಹಾಕಿ ಫಿಟ್ನೆಸ್ ಕಾಪಾಡಿಕೊಳ್ಳುವುದಿದೆಯಲ್ಲ. ಅದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ಇಂತಹ ಸಣ್ಣಪುಟ್ಟ ತ್ಯಾಗ ಮತ್ತು ಕಠಿಣ ಪಾಲನೆಗಳಿಂದಲೇ ದೊಡ್ಡ ಸಾಧನೆ ಸಾಧ್ಯವಾಗುತ್ತದೆ.

ಅಪ್ಪನ ಛಲ; ದ್ರಾವಿಡ್ ಶೋಧ

ಬಿಹಾರ ರಾಜ್ಯದಲ್ಲಿ ಕ್ರಿಕೆಟ್ ಸೌಲಭ್ಯಗಳ ಕೊರತೆ ಇದೆ. ಸದಾ ವಿವಾದ, ಹಗರಣ ಮತ್ತು ಅವ್ಯವಸ್ಥೆಗಳಿಂದಲೇ ಸುದ್ದಿಯಾದ ರಾಜ್ಯ ಇದು. ಆದರೂ ಇಂತಹ ವಾತಾವರಣದಲ್ಲಿ ತಂದೆ ಸಂಜಯ್ ಸೂರ್ಯವಂಶಿ ಅವರ ಆಸಕ್ತಿ ಮತ್ತು ತ್ಯಾಗಗಳಿಂದ ವೈಭವ್ ಕ್ರಿಕೆಟಿಗನಾಗಿ ಬೆಳೆದಿದ್ದಾರೆ. ಎಂಟನೇ ವಯಸ್ಸಿಗೆ ಕ್ರಿಕೆಟ್ ಆಡಲು ಶುರು ಮಾಡಿದ ವೈಭವ್ ಪ್ರತಿಭೆಯನ್ನು ಗುರುತಿಸಿದವರೂ ಸಂಜಯ್ ಅವರೇ. ಎಸೆತದ ವೇಗ, ಓಘವನ್ನು ಗುರುತಿಸುವ ವೈಭವ್ ಅವರ ಚುರುಕಿನ ದೃಷ್ಟಿ, ಅದರ ಜೊತೆಗೆ ವೇಗವಾಗಿ ಚಲಿಸುತ್ತಿದ್ದ ಕೈಗಳು, ಬ್ಯಾಟ್ ಗ್ರಿಪ್ ಎಲ್ಲವೂ ವಿಶೇಷವೇ ಆಗಿದ್ದವು. ಸಂಜೀವ್ ತಡ ಮಾಡಲಿಲ್ಲ. ಸಮಸ್ತಿಪುರದಲ್ಲಿದ್ದ ಕೋಚ್ ಬ್ರಜೇಶ್ ಝಾ ಅವರ ಅಕಾಡೆಮಿಗೆ ಸೇರಿಸಿದರು. ಅದರ ನಂತರ ಪಾಟ್ನಾದ ಮನೀಷ್ ಝಾ ಅವರ ಅಕಾಡೆಮಿಗೆ ಸೇರಿಸಲಾಯಿತು. ಅದು ವೈಭವ್ ಜೀವನಕ್ಕೆ ಸಿಕ್ಕ ಮಹತ್ವದ ತಿರುವು.

‘ಮುದ್ದುಮುದ್ದಾಗಿದ್ದ ವೈಭವ್ ಅವರಿಗೆ ಆಟವಷ್ಟೇ ಅಲ್ಲ. ಆಹಾರ, ವಿಹಾರಗಳ ತರಬೇತಿ ಕೂಡ ನೀಡಲಾಗಿದೆ. ಮಟನ್ ಖಾದ್ಯ, ಪಿಜ್ಜಾ ತಿನ್ನುವುದರಿಂದ ದೂರ ಉಳಿಸಲಾಗಿದೆ. ಪ್ರೊಟೀನ್, ಕ್ಯಾಲ್ಸಿಯಂ ಮತ್ತಿತರ ಪೌಷ್ಟಿಕಾಂಶಗಳ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಮನೀಷ್ ಝಾ ಹೇಳಿದ್ದಾರೆ.

ವೈಭವ್ 10ನೇ ವಯಸ್ಸಿನವರಾಗಿದ್ದ ಸಂದರ್ಭದಲ್ಲಿ ಕ್ರಿಕೆಟ್ ತರಬೇತಿಯ ಖರ್ಚು ನಿಭಾಯಿಸುವುದು ತಂದೆಗೆ ಕಷ್ಟವಾಗಿತ್ತು. ತಮ್ಮ ಹಳ್ಳಿಯಲ್ಲಿದ್ದ ಕೃಷಿ ಭೂಮಿಯನ್ನು ಹಿಂದೆಮುಂದೆ ಯೋಚಿಸದೇ ಮಾರಿಬಿಟ್ಟರು. ಅದರಿಂದ ಬಂದ ದುಡ್ಡನ್ನು ಮಗನ ಕ್ರಿಕೆಟ್ ಕಲಿಕೆಗೆ ಹಾಕಿದರು.

ಬಾಲ್ಯದಿಂದಲೂ ಕ್ರಿಕೆಟ್ಪ್ರೇಮಿಯಾಗಿದ್ದ ಸಂಜೀವ್ ಬಡತನದ ಕಾರಣಕ್ಕೆ ಆಟಗಾರನಾಗಿ ಬೆಳೆಯಲಿಲ್ಲ. ತಮ್ಮ ಕನಸನ್ನು ಮಗ ಈಡೇರಿಸುವ ಭರವಸೆಯೊಂದಿಗೆ ಬಹಳಷ್ಟು ಕಷ್ಟ ಅನುಭವಿಸಿದರು.ರೆಸ್ಟೊರೆಂಟ್ ಸೇರಿದಂತೆ ಹಲವೆಡೆ ಕೆಲಸ ಮಾಡಿ ಕುಟುಂಬವನ್ನು ಸಲಹಿದರು.

ಅಪ್ಪನ ಶ್ರಮ ವ್ಯರ್ಥವಾಗಲು ಮಗ ಬಿಡಲಿಲ್ಲ. 13 ವರ್ಷವಾದಾಗಲೇ ಬಿಹಾರ ರಾಜ್ಯ ತಂಡ, 19 ವರ್ಷದೊಳಗಿನವರ ತಂಡಗಳಲ್ಲಿ ಆಡಿದರು. ಅವರ ಬ್ಯಾಟಿಂಗ್ಗೆ ಆಯ್ಕೆ ದಾರರೂ ಮನಸೋತರು. ಅಷ್ಟೇ ಅಲ್ಲ; ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ದಿಗ್ಗಜ ಕ್ರಿಕೆಟಿಗ, ರಾಜಸ್ಥಾನ ರಾಯಲ್ಸ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನೂ ಸೆಳೆದ ಬಾಲಕನಿಗೆ ಬಂಪರ್ ಒಲಿಯಿತು. ₹ 30 ಲಕ್ಷ ಮೂಲಬೆಲೆ ಹೊಂದಿದ್ದ ವೈಭವ್ ಅವರನ್ನು ರಾಜಸ್ಥಾನ ತಂಡವು ₹ 1.1 ಕೋಟಿ ಕೊಟ್ಟು ಖರೀದಿಸಿತು. ಡೆಲ್ಲಿ ಕ್ಯಾಪಿಟಲ್ಸ್ ವೈಭವ್ ಖರೀದಿಗೆ ಬಹಳಷ್ಟು ಪ್ರಯತ್ನಿಸಿತ್ತು. ಆದರೆ ರಾಯಲ್ಸ್ ಮೇಲುಗೈ ಸಾಧಿಸಿತ್ತು.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಜ್ಜೆಗುರುತು ಮೂಡಿಸುವ ಎಲ್ಲ ಸಾಮರ್ಥ್ಯವೂ ಈ ಬಾಲಕನಿಗೆ ಇದೆ. ಕೆಲವು ತಿಂಗಳುಗಳ ಹಿಂದೆ ಜಿಂಬಾಬ್ವೆಯ ಹರಾರೆಯಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಈ ಹುಡುಗನ ಗದಾಪ್ರಹಾರಕ್ಕೆ ಇಂಗ್ಲೆಂಡ್ನ ಹುಡುಗರು ಬೆಚ್ಚಿ ಬೆರಗಾಗಿದ್ದರು. ವೈಭವ್ ಅವತ್ತು ಕೇವಲ 80 ಎಸೆತಗಳಲ್ಲಿ 175 ರನ್ ಸೂರೆ ಮಾಡಿದ್ದರು. ಅದರಲ್ಲಿ 15 ಸಿಕ್ಸರ್ ಅಷ್ಟೇ ಸಂಖ್ಯೆಯ ಬೌಂಡರಿಗಳಿದ್ದವು. ಸುಮಾರು ಎರಡು ತಾಸು ಕ್ರೀಸ್ನಲ್ಲಿದ್ದ ವೈಭವ್ ಆಟಕ್ಕೆ ಬೌಲರ್ಗಳೆಲ್ಲರೂ ಬೆವರಿ ನೀರಾದರು. ಆ ಟೂರ್ನಿಯಲ್ಲಿ 7 ಇನಿಂಗ್ಸ್ಗಳಿಂದ 439 ರನ್ ಸೇರಿಸಿದ್ದಾರೆ. ಅಲ್ಲಿ ವಿಶ್ವಕಪ್ ಗೆದ್ದು ಐಪಿಎಲ್ಗೆ ಬಂದ ಅವರು ಬ್ಯಾಟ್ ಝಳಪಿಸುವುದನ್ನು ನಿಲ್ಲಿಸಿಲ್ಲ. ಈ ಆವೃತ್ತಿಯಲ್ಲಿ 776 ರನ್ ಸೂರೆ ಮಾಡಿದ್ದಾರೆ. 72 ಸಿಕ್ಸರ್ ಹೊಡೆದಿದ್ದಾರೆ. ಕ್ರಿಸ್ ಗೇಲ್ (59 )ಸಿಕ್ಸರ್ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ ಈ ‘ಬೇಬಿ ಬಾಸ್’.

ಈ ಬಾರಿಯ ಐಪಿಎಲ್ನಲ್ಲಿ ಜೋಷ್ ಹೇಝಲ್ವುಡ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬೂಮ್ರಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ರಶೀದ್ ಖಾನ್ ಅವರಂತಹ ಖ್ಯಾತ ಬೌಲರ್ಗಳಿಗೂ ಸಿಕ್ಸರ್ ಎತ್ತಿದರು.

‘ನನ್ನೆದುರಿಗೆ ಬರುವ ಎಸೆತಗಳನ್ನಷ್ಠೇ ನೋಡುತ್ತೇನೆ. ಬೌಲರ್ ಬಗ್ಗೆ ಯೋಚಿಸುವುದೂ ಇಲ್ಲ. ಯಾರೇ ಬೌಲರ್ ಇರಲಿ ಎಸೆತಗಳನ್ನು ಸಿಕ್ಸರ್ಗೆ ಕಳಿಸುವತ್ತಲೇ ನನ್ನ ಚಿತ್ತ’ ಎಂದು ಸಂದರ್ಶನಗಳಲ್ಲಿ ವೈಭವ್ ಹೇಳಿದ್ದಾರೆ.

ಅವರ ಆಟಕ್ಕೆ ಈಗ ದಿಗ್ಗಜ ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಕೈಫ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ಹಲವರು ಮನಸೋತಿದ್ದಾರೆ. ಇಷ್ಟಾದರೂ ಅವರ ತಂದೆ ಸಂಜಯ್ ಅವರಿಗೆ ತೃಪ್ತಿ ಇಲ್ಲ.

‘ಟೆಸ್ಟ್ ಕ್ರಿಕೆಟ್ನಲ್ಲಿ ವೈಭವ್ ಆಡಬೇಕು. ಅಲ್ಲಿಯೂ ಯಶಸ್ಸು ಸಾಧಿಸಬೇಕು. ಆಗಲೇ ಆತ ಕ್ರಿಕೆಟಿಗನಾಗುವುದು’ ಎಂದು ಖಡಾಖಂಡಿತವಾಗಿ ಹೇಳುತ್ತಾರೆ ಸಂಜಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.