ವೇಗದ ಬೌಲರ್‌ ಆಗುವುದು ಕಷ್ಟದ ಕೆಲಸ

7

ವೇಗದ ಬೌಲರ್‌ ಆಗುವುದು ಕಷ್ಟದ ಕೆಲಸ

Published:
Updated:
Deccan Herald

ಅದು 1996ರ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ–ಪಾಕಿಸ್ತಾನ ನಡುವೆ ಜಿದ್ದಾಜಿದ್ದಿನ ಹಣಾಹಣಿ. ಭಾರತದ 287 ರನ್‌ಗಳ ಗುರಿ ಬೆನ್ನಟ್ಟಿದ್ದ ಪಾಕ್‌ ದಿಟ್ಟ ಆರಂಭ ಪಡೆದಿತ್ತು. ಅಮೀರ್‌ ಸೊಹೇಲ್ ಬಿರುಸಿನ ಆಟವಾಡಿ ಭಾರತ ತಂಡಕ್ಕೆ ಭಯ ಮೂಡಿಸಿದ್ದರು.

ವೇಗಿ ವೆಂಕಟೇಶ್‌ ಪ್ರಸಾದ್‌ ಅವರ ಓವರ್‌ನಲ್ಲಿ ಬೌಂಡರಿ ಸಿಡಿಸಿದ್ದ ಸೊಹೇಲ್‌ ಕರ್ನಾಟಕದ ಬೌಲರ್‌ಅನ್ನು ಕೆಣಕಿದ್ದರು. ಮುಂದಿನ ಎಸೆತದಲ್ಲಿ ಸೊಹೇಲ್‌ ವಿಕೆಟ್‌ ಪಡೆದ ಪ್ರಸಾದ್‌ ಸೇಡು ತೀರಿಸಿಕೊಂಡಿದ್ದರು. ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು 35 ಸಾವಿರ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದರು. ಆ ವಿಕೆಟ್‌ ಪಂದ್ಯಕ್ಕೆ ರೋಚಕ ತಿರುವು ನೀಡಿತ್ತು. ಭಾರತ 39 ರನ್‌ಗಳ ಜಯ ಸಾಧಿಸಿತ್ತು. ಪ್ರಸಾದ್‌ ‘ಹೀರೊ’ ಆಗಿ ಹೊರಹೊಮ್ಮಿದ್ದರು.

ಪ್ರಸಾದ್ 161 ಏಕದಿನ ಮತ್ತು 33 ಟೆಸ್ಟ್‌ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ಆ ಪಂದ್ಯ ಅವರ ಕ್ರಿಕೆಟ್‌ ಜೀವನದ ‘ಹೈಲೈಟ್‌’ಗಳಲ್ಲೊಂದು.

ನಿವೃತ್ತಿಯ ಬಳಿಕ ರಾಷ್ಟ್ರೀಯ ತಂಡ, ಐಪಿಎಲ್‌ನ ವಿವಿಧ ತಂಡಗಳಿಗೆ ಕೋಚ್‌ ಆಗಿ ಕೆಲಸ ಮಾಡಿರುವ ಅವರು ಇದೀಗ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌)ನಲ್ಲಿ ಆಡುವ ಮೈಸೂರು ವಾರಿಯರ್ಸ್‌ ತಂಡದ ಸಲಹೆಗಾರ (ಮೆಂಟರ್) ಆಗಿದ್ದಾರೆ. ಅವರೊಂದಿಗಿನ ಸಂದರ್ಶನದ ವಿವರ ಇಲ್ಲಿದೆ.

* ಇದೇ ಮೊದಲ ಬಾರಿ ಕೆಪಿಎಲ್‌ನ ಭಾಗವಾಗಿದ್ದೀರಿ, ಈ ನಿರ್ಧಾರದ ಹಿಂದಿನ ಕಾರಣ..
ಭಾರತ ರಾಷ್ಟ್ರೀಯ ತಂಡ ಹಾಗೂ ಐಪಿಎಲ್‌ನ ಕೆಲವು ತಂಡಗಳಿಗೆ ಕೋಚ್‌ ಆಗಿ ಸೇವೆ ಸಲ್ಲಿಸಿದ್ದೇನೆ. ಕೋಚ್‌ ಆಗಿದ್ದುಕೊಂಡು ಕಳೆದ 15 ವರ್ಷಗಳಲ್ಲಿ ಪಡೆದ ಅನುಭವವನ್ನು ಕರ್ನಾಟಕದ ಯುವ ಆಟಗಾರರ ಜೊತೆ ಹಂಚಿಕೊಳ್ಳಬೇಕು. ಅದೇ ನನ್ನ ಮುಖ್ಯ ಉದ್ದೇಶ.

* ಮೈಸೂರು ವಾರಿಯರ್ಸ್‌ ತಂಡದ ಬಗ್ಗೆ...
ವಂಡರ್‌ಫುಲ್ ತಂಡ. ವಾರಿಯರ್ಸ್‌ ಮಾಲೀಕ ಅರ್ಜುನ್‌ ರಂಗ, ಕೋಚ್ ಹಾಗೂ ತಂಡದ ಸಹಾಯಕ ಸಿಬ್ಬಂದಿ ಜತೆ ಮಾತನಾಡಿದ್ದೇನೆ. ಆಟಗಾರರಾದ ಅಮಿತ್ ವರ್ಮಾ, ಗೌತಮ್, ಸುಚಿತ್, ರಾಜು ಭಟ್ಕಳ್ ಅವರ ಬಗ್ಗೆ ಗೊತ್ತಿದೆ. ಇನ್ನು ಕೆಲವರ ಆಟದ ಬಗ್ಗೆ ಗೊತ್ತಿಲ್ಲ. ನೆಟ್ಸ್‌ನಲ್ಲಿ ಆಟಗಾರರ ಸಾಮರ್ಥ್ಯ ನೋಡಿ ನನ್ನ ಅಭಿಪ್ರಾಯವನ್ನು ಕೋಚ್ ಅವರಿಗೆ ತಿಳಿಸುತ್ತೇನೆ. ಕೋಚಿಂಗ್‌ನಲ್ಲಿ ಅನುಭವ ಇರುವುದರಿಂದ ಆಟಗಾರರ ಶಕ್ತಿ ಮತ್ತು ದೌರ್ಬಲ್ಯಗಳನ್ನು ಸುಲಭವಾಗಿ ಗ್ರಹಿಸಿ ಅವರಿಗೆ ಸಲಹೆ ನೀಡುವುದು ಕಷ್ಟವಲ್ಲ.

*ತಂಡದಲ್ಲಿ ಯಾವ ರೀತಿ ಬದಲಾವಣೆ ತರುತ್ತೀರಿ?
ಐಪಿಎಲ್‌ ಅಥವಾ ಕೆಪಿಎಲ್‌ ಟೂರ್ನಿಯೇ ಇರಲಿ, ತಂಡದಲ್ಲಿ ಬದಲಾವಣೆ ತರಲು ಅವಕಾಶ ಸಿಗುವುದಿಲ್ಲ. ಟೂರ್ನಿಗೆ ಕೇವಲ 4–5 ವಾರಗಳು ಇರುವಾಗ ಆಟಗಾರರನ್ನು ನೋಡುವಿರಿ. 8–10 ದಿನ ತರಬೇತಿ ಶಿಬಿರ ನಡೆಯುತ್ತದೆ. ಕೂಡಲೇ ಪಂದ್ಯಗಳು ಆರಂಭವಾಗಿ ಬಿಡುತ್ತವೆ. ಬದಲಾವಣೆ ತರಲು ಸಮಯವೂ ಇಲ್ಲ. ಆದ್ದರಿಂದ ಕೋಚ್ ಆಗಿರಲಿ, ಮೆಂಟರ್‌ ಆಗಿರಲಿ ಬದಲಾವಣೆಗೆ ಮುಂದಾಗಬಾರದು. ಬದಲಾಗಿ ಒಬ್ಬ ಆಟಗಾರನ ಸಾಮರ್ಥ್ಯ ಹೆಚ್ಚಿಸುವತ್ತ ಗಮನ ನೀಡಬೇಕು. ಅದಕ್ಕೆ ಪೂರಕವಾದ ಸಲಹೆಗಳನ್ನು ಕೊಡಬೇಕು.

* ರಾಜ್ಯದ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಕೆಪಿಎಲ್ ಸಹಾಯಕವಾಗಿದೆಯೇ?
ಖಂಡಿತ... ಈಗ ಎಲ್ಲರೂ ಬಯಸುವುದು ಟಿ–20 ಮಾದರಿ ಆಟವನ್ನು. ಹಾಗಾಗಿ ಈಗಿನ ಆಟಗಾರರು ಕೂಡಾ ಸ್ಮಾರ್ಟ್‌ ಆಗಿ ಯೋಚನೆ ಮಾಡ್ತಾರೆ. ಹೊಸ ಶೈಲಿಯ ಹೊಡೆತಗಳಿಗೆ ಮುಂದಾಗುತ್ತಾರೆ. ಬೌಲಿಂಗ್‌ನಲ್ಲೂ ಪ್ರಯೋಗಗಳನ್ನು ಮಾಡುತ್ತಾರೆ. ಕೆಪಿಎಲ್‌ನಲ್ಲಿ ಆಡುವ ಆಟಗಾರರಿಗೆ ಮಾರ್ಗದರ್ಶನ ನೀಡಿ ಅವರಿಗೆ ಒಂದು ದಿಕ್ಕನ್ನು ತೋರಿಸಿ ಬಲ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಹಾಗಾದಲ್ಲಿ ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಇನ್ನಷ್ಟು ಪ್ರತಿಭೆಗಳನ್ನು ಕಾಣಲು ಸಾಧ್ಯ.

* ರಾಷ್ಟ್ರೀಯ ತಂಡದ ಕದ ತಟ್ಟುತ್ತಿರುವ ವೇಗಿಗಳು ರಾಜ್ಯದಲ್ಲಿಲ್ಲ ಏಕೆ?
ವೇಗದ ಬೌಲಿಂಗ್ ಸುಲಭದ ಕೆಲಸವಲ್ಲ. ಟ್ವೆಂಟಿ–20 ಆಟದ ವೈಭವ ನೋಡುತ್ತಾ ಬೆಳೆಯುವ ಇಂದಿನ ಆಟಗಾರರು ಬ್ಯಾಟ್ಸ್‌ಮನ್‌ ಆಗಬೇಕು ಎಂದು ಯೋಚನೆ ಮಾಡ್ತಾರೆ. ಬೌಲರ್‌ ಆಗುವುದು ಅದರಲ್ಲೂ ವೇಗದ ಬೌಲರ್‌ ಆಗುವುದು ಕಷ್ಟದ ಕೆಲಸ. ಫಿಟ್‌ನೆಸ್‌ ಕಾಪಾಡಲು ನಿರಂತರ ಕೆಲಸ ಮಾಡಬೇಕಾಗುತ್ತದೆ. ಭುಜ, ಬೆನ್ನು, ಮೊಣಕಾಲು.. ಹೀಗೆ ಒಂದಲ್ಲ ಒಂದು ಗಾಯ ಕಾಡ್ತಾ ಇರ್ತದೆ. ಹಾಗಾಗಿ ಬೌಲಿಂಗ್‌ ವೃತ್ತಿ ತೆಗೆದುಕೊಳ್ಳುವವರು ಕಡಿಮೆಯಾಗ್ತಾ ಇದ್ದಾರೆ.

* ವೇಗದ ಬೌಲರ್‌ಗಳನ್ನು ಹುಟ್ಟುಹಾಕಲು ಏನು ಮಾಡಬೇಕು?ವೇಗದ
ಬೌಲರ್‌ಗಳನ್ನು ಹೇಗೆ ಉತ್ತೇಜಿಸಬಹುದು ಎಂಬುದು ಮುಖ್ಯ. ವೇಗಿಗಳಿಗೆ ನೆರವು ನೀಡುವ ಪಿಚ್‌ ನಿರ್ಮಿಸಬೇಕು. ನಾವು ಆಡುತ್ತಿದ್ದ ಕಾಲದಲ್ಲಿ ಉತ್ತಮ ಪಿಚ್‌ಗಳಿದ್ದವು. ರೋಜರ್‌ ಬಿನ್ನಿ, ಶ್ರೀನಾಥ್ ಅವರ ಹಾದಿಯಲ್ಲಿ ನಾನು ಮುನ್ನಡೆದೆ. ಆ ಬಳಿಕ ದೊಡ್ಡ ಗಣೇಶ್, ಡೇವಿಡ್ ಜಾನ್ಸನ್, ವಿನಯ್ ಕುಮಾರ್ ಬಂದರು. ಅಂದು ಇದ್ದಂತಹ ಪಿಚ್‌ಗಳು ಬೌಲಿಂಗ್‌ಗೆ ಯೋಗ್ಯವಾಗಿದ್ದವು. ಹಾಗಾಗಿ ನಮಗೆ ಬೌಲಿಂಗ್ ಮಾಡೋಣ, ವಿಕೆಟ್‌ ಬರುತ್ತೆ ಎಂಬ ‘ಫೀಲ್‌’ ಉಂಟಾಗುತಿತ್ತು. ಈಗ ಪರಿಸ್ಥಿತಿ ಬದಲಾಗಿದೆ.

*1996 ವಿಶ್ವಕಪ್‌ನಲ್ಲಿ ನಡೆದಿದ್ದ ಘಟನೆ ನೆನಪಾಗುತ್ತಿರುತ್ತದೆಯೇ?
ಅದು ಜೀವನಲ್ಲಿ ಮರೆಯಲಾಗದ ಘಟನೆ. ಅದನ್ನು ನೆನಪು ಮಾಡಬಾರದು ಎಂದುಕೊಂಡರೂ ಜನರು ಮತ್ತೆ ಮತ್ತೆ ನೆನಪಿಸುತ್ತಾರೆ. ಪ್ರತಿದಿನ ಕನಿಷ್ಠ 3–4 ಮಂದಿ ಆ ಪಂದ್ಯವನ್ನು ನನಗೆ ನೆನಪಿಸುವರು. ಆ ಘಟನೆಯಿಂದ ತುಂಬಾ ಕ್ರಿಕೆಟಿಗರು ಉತ್ತೇಜನ ಪಡೆದುಕೊಂಡಿದ್ದಾರೆ ಎಂಬ ಹೆಮ್ಮೆಯೂ ನನಗಿದೆ. 

* ರಾಜ್ಯದ ಆಟಗಾರರು ಟೆಸ್ಟ್‌ ತಂಡದಲ್ಲಿ ಸ್ಥಾನ ಗಟ್ಟಿಮಾಡುತ್ತಿಲ್ಲ ಏಕೆ?
ಐದು ದಿನಗಳ ಪಂದ್ಯದಲ್ಲಿ ಯಶಸ್ಸು ಗಳಿಸಲು ‘ಟೆಂಪರಮೆಂಟ್’ ಮುಖ್ಯ. ಜತೆಗೆ ಸಿಕ್ಕಾಪಟ್ಟೆ ತಾಳ್ಮೆ ಇರಬೇಕು. ತಾಳ್ಮೆ ಕಳೆದುಕೊಂಡಾಗ ಪ್ರಯೋಗಗಳನ್ನು ಮಾಡಲು ಮುಂದಾಗುತ್ತಾರೆ. ಈ ವೇಳೆ ಬೌಲರ್‌ಗಳು ಹೆಚ್ಚು ರನ್‌ ಬಿಟ್ಟುಕೊಡಬಹುದು. ಬ್ಯಾಟ್ಸ್‌ಮನ್‌ಗಳು ಕೆಟ್ಟ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಬಹುದು. ಟೆಸ್ಟ್‌ನಲ್ಲಿ ಹಲವು ಓವರ್‌ಗಳನ್ನು ಎಸೆದರೂ ವಿಕೆಟ್‌ ಸಿಗದೇ ಇರಬಹುದು. ತುಂಬಾ ಹೊತ್ತು ಆಡಿದರೂ ರನ್‌ ಬರದೇ ಇರಬಹುದು. ವಿಕೆಟ್‌ ಅಥವಾ ರನ್‌ಗಳ ‘ಬರ’ ಎದುರಾದಾಗ ಆ ಪರಿಸ್ಥಿತಿಯನ್ನು ನಾಜೂಕಿನಿಂದ ನಿಭಾಯಿಸಬೇಕು. ಅಂತಹ ಸಾಮರ್ಥ್ಯ ಬೆಳೆಸಿಕೊಂಡರೆ ಟೆಸ್ಟ್‌ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !