ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಮುಂದೂಡಲ್ಪಟ್ಟರೆ ಐಪಿಎಲ್‌ನಲ್ಲಿ ಆಡ್ತೇನೆ: ವಾರ್ನರ್‌

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಹೇಳಿಕೆ
Last Updated 21 ಜೂನ್ 2020, 6:22 IST
ಅಕ್ಷರ ಗಾತ್ರ

ನವದೆಹಲಿ: ‘ಮುಂಬರುವ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯನ್ನು ಕೊರೊನಾ ಬಿಕ್ಕಟ್ಟಿನ ಕಾರಣ ಮುಂದೂಡಿದರೆ, ಖಂಡಿತವಾಗಿಯೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುತ್ತೇನೆ’ ಎಂದು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಹೇಳಿದ್ದಾರೆ.

‘ಕೊರೊನಾ ಉಪಟಳ ಹೆಚ್ಚುತ್ತಲೇ ಇರುವ ಸಂದರ್ಭದಲ್ಲಿ 16 ತಂಡಗಳನ್ನೊಳಗೊಂಡ ವಿಶ್ವಕಪ್‌ ಟೂರ್ನಿಯನ್ನು ಈ ವರ್ಷದ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಆಯೋಜಿಸುವುದು ಅವಾಸ್ತವಿಕ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಮುಖ್ಯಸ್ಥ ಇಯರ್ಲ್‌ ಎಡ್ಡಿಂಗ್ಸ್‌ ಇತ್ತೀಚೆಗೆ ನುಡಿದಿದ್ದರು.

ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮುಂದಿನ ತಿಂಗಳು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

‘ನಿಗದಿತ ವೇಳಾಪಟ್ಟಿಯ ಪ್ರಕಾರ ವಿಶ್ವಕಪ್‌ ನಡೆಯದೇ ಹೋದರೆ ಆಸ್ಟ್ರೇಲಿಯಾದ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ’ ಎಂದು ವಾರ್ನರ್‌ ತಿಳಿಸಿದ್ದಾರೆ.

‘ವಿಶ್ವಕಪ್‌ ಮುಂದೂಡುವ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ ವಸತಿ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಮಾಡುವುದು, 14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿ ಇಡುವುದು ಹೀಗೆ ಸಾಕಷ್ಟು ಸವಾಲುಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಕಪ್‌ ಆಯೋಜನೆ ಅಷ್ಟು ಸುಲಭವಲ್ಲ. ಈ ವಿಷಯದಲ್ಲಿ ಐಸಿಸಿ ತೆಗೆದುಕೊಳ್ಳುವ ತೀರ್ಮಾನವನ್ನು ನಾವೆಲ್ಲ ಎದುರು ನೋಡುತ್ತಿದ್ದೇವೆ’ ಎಂದೂ ಹೇಳಿದ್ದಾರೆ.

‘ವಿಶ್ವಕಪ್‌ ಹಾಗೂ ಏಷ್ಯಾಕಪ್‌ ಮುಂದೂಡಲ್ಪಟ್ಟರೆ, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಐಪಿಎಲ್‌ ಆಯೋಜಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಸ್ಟ್ರೇಲಿಯಾದ ಹಲವು ಆಟಗಾರರನ್ನು ಫ್ರಾಂಚೈಸ್‌ಗಳು ತಮ್ಮತ್ತ ಸೆಳೆದುಕೊಂಡಿವೆ. ಹೀಗೆ ಬಿಕರಿಯಾದ ಎಲ್ಲಾ ಆಟಗಾರರೂ ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ. ಇದಕ್ಕೆ ಕ್ರಿಕೆಟ್‌ ಆಸ್ಟ್ರೇಲಿಯಾ ಹಸಿರು ನಿಶಾನೆ ತೋರಬೇಕಿದೆ’ ಎಂದು ನುಡಿದಿದ್ದಾರೆ.

‘ಈ ವರ್ಷದ ಅಂತ್ಯದಲ್ಲಿ ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯತ್ತಲೂ ಚಿತ್ತ ನೆಟ್ಟಿದ್ದೇನೆ. ಭಾರತದಂತಹ ಬಲಿಷ್ಠ ತಂಡದ ವಿರುದ್ಧದ ಸರಣಿಯನ್ನು ಖಾಲಿ ಕ್ರೀಡಾಂಗಣದಲ್ಲಿ ಆಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ. ಈ ಹಿಂದೆ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ನಮ್ಮ ತಂಡವನ್ನು ಸೋಲಿಸಿತ್ತು. ಆಗ ಅವರ ಬೌಲಿಂಗ್‌ ಪಡೆ ಬಲಿಷ್ಠವಾಗಿತ್ತು. ಸದ್ಯ ಭಾರತದ ಬ್ಯಾಟಿಂಗ್‌ ವಿಭಾಗ ಬಲಯುತವಾಗಿದೆ. ಆ ತಂಡದ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯ ನಮ್ಮ ಬೌಲರ್‌ಗಳಿಗೆ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT