ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಜೊತೆಗಾರರು; ಇಂದು ಎದುರಾಳಿಗಳು!

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಮನೀಷ್ ಪಾಂಡೆ–ರಾಬಿನ್‌ ಉತ್ತಪ್ಪ ಹಣಾಹಣಿ
Last Updated 27 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಅವರಿಬ್ಬರೂ ಅಂಗಳಕ್ಕಿಳಿದರೆ ಸ್ಪೋಟಕ ಬ್ಯಾಟ್ಸ್‌ಮನ್‌ಗಳು. ಕ್ರಿಕೆಟ್‌ ಮೂರು ಮಾದರಿಗಳಲ್ಲಿಯೂ ತಮ್ಮದೇ ಶೈಲಿಯಿಂದ ಅಭಿಮಾನಿಗಳ ಮನಗೆದ್ದವರು. ಇಬ್ಬರೂ ಸೇರಿ ಕರ್ನಾಟಕ ತಂಡಕ್ಕೆ ಅದೆಷ್ಟೋ ಗೆಲುವುಗಳ ಸವಿನೆನಪು ನೀಡಿದವರು. ಆದರೆ ಶನಿವಾರ ಅವರು ತಾವಿಬ್ಬರೂ ಆಡಿ ಬೆಳೆದ ಕ್ರೀಡಾಂಗಣದಲ್ಲಿಯೇ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಮತ್ತು ಕೇರಳ ತಂಡದ ನಾಯಕತ್ವ ವಹಿಸಿರುವ ರಾಬಿನ್ ಉತ್ತಪ್ಪ ಅವರೇ ಆ ಗೆಳೆಯರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಕರ್ನಾಟಕ ತಂಡವು ಗುರುವಾರ ನಡೆದಿದ್ದ ಪಂದ್ಯದಲ್ಲಿ ಜಾರ್ಖಂಡ್ ಎದುರು ಭರ್ಜರಿ ಜಯ ಸಾಧಿಸಿತ್ತು. ದೇವದತ್ತ ಪಡಿಕ್ಕಲ್, ನಾಯಕ ಪಾಂಡೆ, ಎಡಗೈ ಬ್ಯಾಟ್ಸ್‌ಮನ್ ಪವನ್ ದೇಶಪಾಂಡೆ ಅರ್ಧಶತಕಗಳನ್ನು ಹೊಡೆದಿದ್ದರು. ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಐದು ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಿಂದಾಗಿ ಜಯ ಸುಲಭವಾಗಿತ್ತು.

ಐವರು ಬ್ಯಾಟ್ಸ್‌ಮನ್, ಮೂವರು ಮಧ್ಯಮವೇಗಿಗಳು ಮತ್ತು ಮೂವರು ಸ್ಪಿನ್ನರ್‌–ಆಲ್‌ರೌಂಡರ್‌ಗಳೊಂದಿಗೆ ಕರ್ನಾಟಕ ತಂಡವು ಆ ಪಂದ್ಯದಲ್ಲಿ ಆಡಿತ್ತು. ಈ ಪಂದ್ಯದಲ್ಲಿಯೂ ಅದೇ ಬಳಗವನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಆದರೆ ಕೇರಳ ತಂಡದ ಮೊದಲ ಪಂದ್ಯವು ಮಳೆಯಿಂದಾಗಿ ನಡೆದಿರಲಿಲ್ಲ. ಎರಡನೇ ಪಂದ್ಯದಲ್ಲಿ ಅದು ಸೌರಾಷ್ಟ್ರದ ಎದುರು ಸೋತಿತ್ತು. ತಂಡದಲ್ಲಿ ಸಂಜು ಸ್ಯಾಮ್ಸನ್, ಸಚಿನ್ ಬೇಬಿ, ವಿಷ್ಣು ವಿನೋದ್ ಅವರು ಉತ್ತಮ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿ ಅವರು ಯಾವ ರೀತಿ ಅಡಲಿದ್ದಾರೆ ಎಂಬ ಕುತೂಹಲ ಈಗ ಇದೆ. ಆದರೆ ಆತಿಥೇಯರ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಬೌಲರ್‌ಗಳೂ ವಿಶೇಷ ತಂತ್ರಗಾರಿಕೆ ಮಾಡುವುದು ಅನಿವಾರ್ಯ.

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ; ಶನಿವಾರ ಮಳೆಯಾಗು ಸಂಭವ ಇದೆ. ಇದರಿಂದಾಗಿ ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂಡಗಳು: ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ದೇವದತ್ತ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ಪವನ್ ದೇಶಪಾಂಡೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ ಎಂ ಕೃಷ್ಣ, ಜೆ. ಸುಚಿತ್, ರೋನಿತ್ ಮೋರೆ,

ಕೇರಳ: ರಾಬಿನ್ ಉತ್ತಪ್ಪ (ನಾಯಕ), ವಿಷ್ಣು ವಿನೋದ್, ವಿನೂಪ್ ಮನೋಹರನ್, ಸಂಜು ಸ್ಯಾಮ್ಸನ್, ಸಚಿನ್ ಬೇಬಿ, ಮೊಹಮ್ಮದ್ ಅಜರುದ್ದೀನ್ (ವಿಕೆಟ್‌ಕೀಪರ್), ಸಲ್ಮಾನ್ ನಝರ್, ಸಿಜೊಮನ್ ಜೋಸೆಫ್, ಬಾಸಿಲ್ ಥಂಪಿ, ಕೆ.ಎಂ. ಆಸಿಫ್, ಸಂದೀಪ್ ವಾರಿಯರ್.

ಮಳೆಗೆ ರದ್ದಾದ ಪಂದ್ಯಗಳಿಗಾಗಿ ವೇಳಾಪಟ್ಟಿ ಪರಿಷ್ಕರಣೆ

ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯ ಆರಂಭದ ಎರಡು ದಿನಗಳ ಪಂದ್ಯಗಳು ಸಂಪೂರ್ಣವಾಗಿ ಮಳೆಗೆ ರದ್ದಾಗಿದ್ದವು. ಎ ಗುಂಪಿನಲ್ಲಿ ಒಟ್ಟು ಆರು ಪಂದ್ಯಗಳು ಕೊಚ್ಚಿಹೋಗಿದ್ದವು. ಆದ್ದರಿಂದ ಟೂರ್ನಿಯ ಮಧ್ಯದಲ್ಲಿ ಇದ್ದ ಬಿಡುವಿನ ದಿನಗಳಲ್ಲಿ ಆ ಪಂದ್ಯಗಳನ್ನು ಆಡಿಸುವ ನಿರ್ಧಾರವನ್ನು ಬಿಸಿಸಿಐ ಮಾಡಿದೆ. ಅದಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಶುಕ್ರವಾರ ಕೆಎಸ್‌ಸಿಎ ಈ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಮೊದಲು ನೀಡಿದ್ದ ವೇಳಾಪಟ್ಟಿಯ ಪ್ರಕಾರ ಕರ್ನಾಟಕವು ಶನಿವಾರ ಛತ್ತೀಸಗಡ ಮತ್ತು ಭಾನುವಾರ ಮುಂಬೈ ತಂಡವನ್ನು ಎದುರಿಸಬೇಕಿತ್ತು. ಆದರೆ ಈಗ ಬದಲಾದ ವೇಳಾಪಟ್ಟಿಯಂತೆ ಶನಿವಾರ ಕರ್ನಾಟಕವು ಕೇರಳದ ವಿರುದ್ಧ ಆಡುವುದು. ಭಾನುವಾರ ರಾಜ್ಯ ತಂಡಕ್ಕೆ ಪಂದ್ಯವಿಲ್ಲ.

ಮೊದಲ ಕರ್ನಾಟಕ ಮತ್ತು ಹೈದರಾಬಾದ್ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅದನ್ನು ಅಕ್ಟೋಬರ್ 1ರಂದು ನಡೆಸಲಾಗುವುದು ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ಎ ಗುಂಪಿನ ಪಂದ್ಯಗಳು ಅ.16ಕ್ಕೆ ಕೊನೆಗೊಳ್ಳಲಿವೆ. ನಾಕೌಟ್ ಪಂದ್ಯಗಳು ಕೂಡ ಬೆಂಗಳೂರಿನಲ್ಲಿಯೇ ನಡೆಯಲಿವೆ. 25ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ನಡೆಯುವುದು.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT