ಗುರುವಾರ , ಅಕ್ಟೋಬರ್ 17, 2019
22 °C
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ–ಸೌರಾಷ್ಟ್ರ ಕದನ

ನಾಕೌಟ್ ಹಂತದ ಮೇಲೆ ಕಣ್ಣು

Published:
Updated:
Prajavani

ಬೆಂಗಳೂರು: ನಾಲ್ಕನೂರಕ್ಕೂ ಹೆಚ್ಚು ರನ್‌ಗಳನ್ನು ಪೇರಿಸಿರುವ ಮನೀಷ್ ಪಾಂಡೆ ನಾಯಕತ್ವದ ಬಳಗವು ಈಗ ಆತ್ಮವಿಶ್ವಾಸದ ತುತ್ತತುದಿಯಲ್ಲಿದೆ.

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿದೆ. ಅದರಲ್ಲೂ ಹೋದ ಗುರುವಾರ ಮುಂಬೈ ಎದುರು ರೋಚಕ ಜಯ ಸಾಧಿಸಿರುವ ಕರ್ನಾಟಕ ತಂಡವು ಈಗ ಹುಮ್ಮಸ್ಸಿನ ಹೊಳೆಯಲ್ಲಿ ಈಜಾಡುತ್ತಿದೆ. ಶನಿವಾರ ತನ್ನ ಏಳನೇ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯಿ ಸಿದರೆ ಕ್ವಾರ್ಟರ್‌ಫೈನಲ್ ಪ್ರವೇಶ ಖಚಿತವಾಗಲಿದೆ.

ಕರ್ನಾಟಕ ತಂಡವು ಈಗಾಗಲೇ 20 ಅಂಕಗಳನ್ನು ಗಳಿಸಿದೆ. ಎ ಮತ್ತು ಬಿ ಜಂಟಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ಆರಂಭಿಕ ಜೋಡಿ ಕೆ.ಎಲ್. ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಉತ್ತಮ ಲಯದಲ್ಲಿದ್ದಾರೆ. ಪಂದ್ಯಗಳಲ್ಲಿ ಉತ್ತಮ ಆರಂಭ ನೀಡುತ್ತಿದ್ದಾರೆ. ಮನೀಷ್ ಅಂತೂ ನಾಲ್ಕು ಅರ್ಧಶತಕ ಮತ್ತು ಒಂದು ಶತಕ ಬಾರಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕೆಳಕ್ರಮಾಂಕದಲ್ಲಿ ಕ್ರೀಸ್‌ಗೆ ಬರುವ ಕೃಷ್ಣಪ್ಪ ಗೌತಮ್ ಮತ್ತು ಅಭಿಮನ್ನು ಮಿಥುನ್ ಅವರೂ ಬೀಸಾಟವಾಡಿ ಕಾಣಿಕೆ ನೀಡುತ್ತಿದ್ದಾರೆ. ಇವರಿಬ್ಬರೂ ಬೌಲಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. ಮುಂಬೈ ಎದುರಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಸೋಲಿನ ದವಡೆ ಯಿಂದ ಮಿಥುನ್ ಪಾರು ಮಾಡಿದ್ದರು.

ಸೌರಾಷ್ಟ್ರದ ಪರಿಸ್ಥಿತಿ ಗಂಭೀರ ವಾಗಿದೆ. ಕೇವಲ ಎಂಟು ಪಾಯಿಂಟ್ಸ್‌ ಗಳಿಸಿರುವ ತಂಡವು ಎಂಟರ ಘಟ್ಟದ ಹಾದಿಯಿಂದ ಬಹುತೇಕ ಹೊರಬಿದ್ದಿದೆ. ಚೇತೇಶ್ವರ್ ಪೂಜಾರ, ರವೀಂದ್ರ ಜಡೇಜ ಅವರು ಭಾರತ ತಂಡದಲ್ಲಿ ಮಿಂಚುತ್ತಿದ್ದಾರೆ. ಅವರ ಅನುಪಸ್ಥಿತಿ ಯಲ್ಲಿ ಯುವ ಆಟಗಾರರು ನಿರೀಕ್ಷಿತ ಆಟವಾಡಿಲ್ಲ. ಅನುಭವಿ ನಾಯಕ ಜಯದೇವ್ ಉನದ್ಕತ್ ಮತ್ತು ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್‌ ಮೇಲೆಯೇ ಹೆಚ್ಚಿನ ಒತ್ತಡ ಇದೆ.

ಕರ್ನಾಟಕದ ಬೌಲಿಂಗ್ ಪಡೆಯು ಸಬಲವಾಗಿದೆ. ಮುಂಬೈ ಎದುರು ದುಬಾರಿಯಾಗಿದ್ದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತೆ ಲಯಕ್ಕೆ ಮರಳಿದರೆ ಸೌರಾಷ್ಟ್ರ ತಂಡದ ಬ್ಯಾಟಿಂಗ್ ಪಡೆಗೆ ಕಠಿಣ ಸವಾಲು ಎದುರಾಗುವುದು ಖಚಿತ. 2008ರಿಂದ ಇಲ್ಲಿಯವರೆಗೆ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಕರ್ನಾಟಕ ಎರಡು ಸಲ ಮತ್ತು ಸೌರಾಷ್ಟ್ರ ಒಂದು ಸಲ ಗೆದ್ದಿದ್ದವು.

ತಂಡಗಳು

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿಷೇಕ್ ರೆಡ್ಡಿ, ಶ್ರೇಯಸ್ ಗೋಪಾಲ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಕೃಷ್ಣಪ್ಪ ಗೌತಮ್ , ರೋನಿತ್ ಮೋರೆ, ಪ್ರಸಿದ್ಧಕೃಷ್ಣ, ವಿ. ಕೌಶಿಕ್, ಅಭಿಮನ್ಯು ಮಿಥುನ್, ಜೆ. ಸುಚಿತ್, ಪವನ್ ದೇಶಪಾಂಡೆ, ಪ್ರವೀಣ್ ದುಬೆ, ಶರತ್ ಶ್ರೀನಿವಾಸ್. ಸೌರಾಷ್ಟ್ರ: ಜಯದೇವ್ ಉನದ್ಕತ್ (ನಾಯಕ), ಹಿಮಾಲಯ ಬರಾದ್, ಶೆಲ್ಡನ್ ಜಾಕ್ಸನ್, ಸಮರ್ಥ್ ವ್ಯಾಸ್, ವಿಶ್ವರಾಜ್ ಜಡೇಜ, ಅರ್ಪಿತ್ ವಸವದಾ, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಕಮಲೇಶ್ ಮಕ್ವಾನ, ಧರ್ಮೇಂದ್ರಸಿಂಹ ಜಡೇಜ, ಅಗ್ನಿವೇಷ್ ಅಯಾಚಿ.

ಆರಂಭ: ಬೆಳಿಗ್ಗೆ 9ರಿಂದ

Post Comments (+)