ಮಂಗಳವಾರ, ಅಕ್ಟೋಬರ್ 15, 2019
26 °C
ಅರ್ಧಶತಕ ದಾಖಲಿಸಿದ ನಾಯಕ ಮನೀಷ್‌ ಪಾಂಡೆ

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವಿನ ‘ಶ್ರೇಯಸ್ಸು’

Published:
Updated:
Prajavani

ಬೆಂಗಳೂರು: ತಮ್ಮ ಬತ್ತಳಿಕೆಯಲ್ಲಿದ್ದ ಸ್ಪಿನ್‌ ಅಸ್ತ್ರಗಳನ್ನು ಒಂದೊಂದಾಗಿ ಪ್ರಯೋಗಿಸಿ ಆಂಧ್ರ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ ಶ್ರೇಯಸ್‌ ಗೋಪಾಲ್‌, ಕರ್ನಾಟಕದ ಆಟಗಾರರು ಸೋಮವಾರವೇ ‘ವಿಜಯ ದಶಮಿ’ ಆಚರಿಸುವಂತೆ ಮಾಡಿದರು.

ಶ್ರೇಯಸ್‌ (48ಕ್ಕೆ4) ಮತ್ತು ಪ್ರಸಿದ್ಧ ಕೃಷ್ಣ (40ಕ್ಕೆ3) ಅವರ ಬಿಗುವಿನ ದಾಳಿಯ ಬಲದಿಂದ ಮನೀಷ್‌ ಪಾಂಡೆ ಬಳಗ ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 53 ರನ್‌ಗಳಿಂದ ಗೆದ್ದಿತು.

ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯರು 50 ಓವರ್‌ಗಳಲ್ಲಿ 7 ವಿಕೆಟ್‌ಗೆ 278ರನ್‌ ಕಲೆಹಾಕಿದರು. ಸವಾಲಿನ ಗುರಿ ಬೆನ್ನಟ್ಟಿದ ಆಂಧ್ರ ತಂಡ 46.5 ಓವರ್‌ಗಳಲ್ಲಿ 225ರನ್‌ ಗಳಿಸಿ ಹೋರಾಟ ಮುಗಿಸಿತು.

ಭದ್ರ ಅಡಿಪಾಯ: ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕಕ್ಕೆ ಕೆ.ಎಲ್‌.ರಾಹುಲ್‌ (33; 58ಎ, 4ಬೌಂ) ಮತ್ತು ದೇವದತ್ತ ಪಡಿಕ್ಕಲ್‌ (44; 63ಎ, 6ಬೌಂ) ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ಗೆ 68ರನ್‌ ಸೇರಿಸಿದರು. 17ನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್‌, ಶೋಯಬ್‌ ಮೊಹಮ್ಮದ್‌ ಖಾನ್‌ಗೆ ವಿಕೆಟ್‌ ನೀಡಿದರು.

ದೇವದತ್ತ ಮತ್ತು ಕರುಣ್‌ ನಾಯರ್‌ (24; 33ಎ, 1ಬೌಂ) ಎರಡನೇ ವಿಕೆಟ್‌ಗೆ 40ರನ್‌ ಪೇರಿಸಿ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. 10ರನ್‌ಗಳ ಅಂತರದಲ್ಲಿ ಇವರು ಪೆವಿಲಿಯನ್‌ ಸೇರಿದರು. ಅಭಿಷೇಕ್‌ ರೆಡ್ಡಿ (18; 24ಎ) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ನಾಯಕ ಮನೀಷ್‌ (50; 56ಎ, 1ಬೌಂ, 1ಸಿ) ಮತ್ತು ವಿಕೆಟ್‌ ಕೀಪರ್‌ ಬಿ.ಆರ್‌.ಶರತ್‌ (ಔಟಾಗದೆ 45; 38ಎ, 4ಬೌಂ, 1ಸಿ) ಛಲದಿಂದ ಹೋರಾಡಿದರು. ಅರ್ಧಶತಕ ಗಳಿಸಿದ ಬೆನ್ನಲ್ಲೇ ಮನೀಷ್‌ ಔಟಾದರು. ಬಳಿಕ ಕೆ.ಗೌತಮ್‌ (34; 16ಎ, 4ಸಿ) ಸ್ಫೋಟಕ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು.

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟಿದ ಆಂಧ್ರ ತಂಡಕ್ಕೆ ಎರಡನೇ ಓವರ್‌ನಲ್ಲೇ ಆಘಾತ ಎದುರಾಯಿತು. ಪ್ರಸಿದ್ಧ ಕೃಷ್ಣ ಹಾಕಿದ ಐದನೇ ಎಸೆತದಲ್ಲಿ ಕೆ.ಅಶ್ವಿನ್‌ ಹೆಬ್ಬಾರ್‌ (0) ಬೌಲ್ಡ್‌ ಆದರು.

ನಾಯಕ ರಿಕಿ ಭುಯಿ (11; 14ಎ, 2ಬೌಂ) ನಿರೀಕ್ಷೆ ಹುಸಿಗೊಳಿಸಿದರು. ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್‌ (38; 45ಎ, 3ಬೌಂ, 2ಸಿ) ಮತ್ತು ಪ್ರಶಾಂತ್‌ ಕುಮಾರ್‌ (78; 104ಎ, 6ಬೌಂ, 2ಸಿ) ಕರ್ನಾಟಕದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡಿದರು.

ಎದುರಾಳಿಗಳ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದ ಅಭಿಮನ್ಯು ಮಿಥುನ್‌, ಪ್ರಸಿದ್ಧ ಕೃಷ್ಣ ಮತ್ತು ಶ್ರೇಯಸ್‌ ಗೋಪಾಲ್‌, ಕರ್ನಾಟಕ ತಂಡದ ಖುಷಿಗೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 278 (ಕೆ.ಎಲ್‌.ರಾಹುಲ್‌ 33, ದೇವದತ್ತ ಪಡಿಕ್ಕಲ್‌ 44, ಕರುಣ್‌ ನಾಯರ್‌ 24, ಮನೀಷ್‌ ಪಾಂಡೆ 50, ಅಭಿಷೇಕ್‌ ರೆಡ್ಡಿ 18, ಶ್ರೇಯಸ್‌ ಗೋಪಾಲ್‌ 11, ಬಿ.ಆರ್‌.ಶರತ್‌ ಔಟಾಗದೆ 45, ಕೆ.ಗೌತಮ್‌ 34; ಶೋಯಬ್‌ ಮೊಹಮ್ಮದ್‌ ಖಾನ್‌ 20ಕ್ಕೆ1, ದಾಸರಿ ಸ್ವರೂಪ್‌ 46ಕ್ಕೆ1, ಕೆ.ಅಶ್ವಿನ್‌ ಹೆಬ್ಬಾರ್‌ 27ಕ್ಕೆ2).

ಆಂಧ್ರ: 46.5 ಓವರ್‌ಗಳಲ್ಲಿ 225 (ಕೆ.ಎಸ್‌.ಭರತ್‌ 38, ಪ್ರಶಾಂತ್‌ ಕುಮಾರ್‌ 78, ರಿಕಿ ಭುಯಿ 11, ಕರಣ್‌ ಶಿಂಧೆ 20, ಶೋಯಬ್‌ ಮೊಹಮ್ಮದ್‌ ಖಾನ್‌ 28, ಕೆ.ವಿ.ಶಶಿಕಾಂತ್‌ 11, ವೈ.ಪೃಥ್ವಿರಾಜ್‌ ಔಟಾಗದೆ 18; ಅಭಿಮನ್ಯು ಮಿಥುನ್‌ 28ಕ್ಕೆ1, ಪ್ರಸಿದ್ಧ ಕೃಷ್ಣ 40ಕ್ಕೆ3, ರೋನಿತ್‌ ಮೋರೆ 53ಕ್ಕೆ1, ಕೆ.ಗೌತಮ್‌ 42ಕ್ಕೆ1, ಶ್ರೇಯಸ್‌ ಗೋಪಾಲ್‌ 48ಕ್ಕೆ4).

ಫಲಿತಾಂಶ: ಕರ್ನಾಟಕಕ್ಕೆ 53ರನ್‌ ಗೆಲುವು ಹಾಗೂ ನಾಲ್ಕು ಪಾಯಿಂಟ್ಸ್‌.      

Post Comments (+)