ಮಂಗಳವಾರ, ಅಕ್ಟೋಬರ್ 15, 2019
22 °C
ಕರ್ನಾಟಕ–ಮುಂಬೈ ಪಂದ್ಯ ಇಂದು

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಮನೀಷ್–ಶ್ರೇಯಸ್‌ ಪ್ರತಿಷ್ಠೆಯ ಹಣಾಹಣಿ

Published:
Updated:
Prajavani

ಬೆಂಗಳೂರು: ಭಾರತ ಏಕದಿನ ಕ್ರಿಕೆಟ್ ತಂಡದಲ್ಲಿ ಐದನೇ ಕ್ರಮಾಂಕದ ಬ್ಯಾಟ್ಸ್‌ ಮನ್ ಸ್ಥಾನಕ್ಕೆ ಪೈಪೋಟಿ ಯಾರ ನಡುವೆ ಇದೆ?

ನೆನಪಾಗುವ ಎರಡು ಹೆಸರು ಗಳೆಂದರೆ; ಮನೀಷ್ ಪಾಂಡೆ ಮತ್ತು  ಶ್ರೇಯಸ್ ಅಯ್ಯರ್ ಅವರದ್ದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಇವರಿಬ್ಬರ ನಾಯಕತ್ವದ ಕರ್ನಾಟಕ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಲಿವೆ.

ಹೋದ ತಿಂಗಳು ದಕ್ಷಿಣ ಆಫ್ರಿಕಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಆಡಿದ್ದ ಭಾರತ ತಂಡದಲ್ಲಿ ಶ್ರೇಯಸ್ ಮತ್ತು ಮನೀಷ್ ಇಬ್ಬರೂ ಇದ್ದರು. ಆದರೆ, ಶ್ರೇಯಸ್‌ಗೆ ಮಾತ್ರ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಮನೀಷ್ ಬೆಂಚ್ ಕಾದಿದ್ದರು. ಆದರೆ ಆ ಸರಣಿಯ ನಂತರ ಆರಂಭವಾದ ದೇಶಿ ಏಕದಿನ ಟೂರ್ನಿಯಲ್ಲಿ ಮನೀಷ್ ಬ್ಯಾಟ್‌ನಿಂದ ರನ್‌ಗಳು ಹರಿಯುತ್ತಿವೆ. ಅವರು ಕಳೆದ ಐದು ಪಂದ್ಯಗಳಲ್ಲಿ ಒಂದು ಶತಕ, ಮೂರು ಅರ್ಧಶತಕಗಳನ್ನು ಹೊಡೆದಿದ್ದಾರೆ.  ಒಂದರಲ್ಲಿ 48 ರನ್‌ ಗಳಿಸಿದ್ದರು. ಒಟ್ಟು 342 ರನ್‌ಗಳು ಅವರ ಖಾತೆಯಲ್ಲಿ ಸೇರಿವೆ. ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಕೇರಳದ ವಿಷ್ನು ವಿನೋದ್ (353) ಮೊದಲ ಸ್ಥಾನದಲ್ಲಿದ್ದಾರೆ.

ಅಲ್ಲದೇ ಕರ್ನಾಟಕ  ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸುವಲ್ಲಿಯೂ ಪಾಂಡೆ ಯಶಸ್ವಿಯಾಗಿದ್ದಾರೆ. ಅಂಬಟಿ ರಾಯುಡು ನಾಯಕತ್ವದ ಹೈದರಾ ಬಾದ್ ಎದುರು ಸೋಲು ಅನುಭವಿಸಿದ್ದನ್ನು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿಯೂ  ದೊಡ್ಡ ಅಂತರದ ಗೆಲುವು ಸಾಧ್ಯವಾಗಿದೆ. ಆದ್ದರಿಂದಲೇ ಜಂಟಿ ಪಾಯಿಂಟ್‌ ಪಟ್ಟಿಯಲ್ಲಿ (ಎ ಮತ್ತು ಬಿ) ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮುಂಬೈ ಏಳನೇ ಸ್ಥಾನದಲ್ಲಿದೆ.

ಶ್ರೇಯಸ್‌ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ದಾಖಲಾಗಿಲ್ಲ. ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ನಾಲ್ಕು ಪಂದ್ಯಗಳಿಂದ 170 ರನ್‌ಗಳನ್ನು ಗಳಿಸಿ ದ್ದಾರೆ. ಮುಂಬೈ ತಂಡವು ಒಟ್ಟು ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದೆ. ಛತ್ತೀಸಗಡದಂತಹ ಹೊಸ ತಂಡದ ಎದುರು ಸೋಲಿನ ಕಹಿ ಅನುಭವಿಸಿತು. ಇನ್ನೆರಡು ಮಳೆಯಿಂದಾಗಿ ರದ್ದಾಗಿವೆ. 

ಆದ್ದರಿಂದ ಇನ್ನುಳಿದ ಎಲ್ಲ ಪಂದ್ಯಗಳಲ್ಲಿಯೂ ಜಯಿಸುವ ಒತ್ತಡ ಮುಂಬೈ ಮೇಲಿದೆ. ಅದರಲ್ಲೂ  ಆತ್ಮವಿಶ್ವಾಸದ ಉತ್ತುಂಗದಲ್ಲಿರುವ ಕರ್ನಾಟಕವನ್ನು ಸೋಲಿಸಲು ವಿಶೇಷ ಯೋಜನೆಯೊಂದಿಗೆ ಕಣಕ್ಕಿಳಿಯುವ ಸವಾಲು ಇದೆ.  ಆರಂಭಿಕ ಜೋಡಿ ಕೆ.ಎಲ್. ರಾಹುಲ್ ಮತ್ತು ದೇವದತ್ತ ಪಡಿಕ್ಕಲ್  ಉತ್ತಮ ಲಯದಲ್ಲಿದ್ದಾರೆ. ಬಿ.ಆರ್. ಶರತ್ ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಕರುಣ್ ನಾಯರ್ ಮತ್ತು ಅಭಿಷೇಕ್ ರೆಡ್ಡಿ ಲಯಕ್ಕೆ ಮರಳಿದರೆ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗುವುದು ಖಚಿತ.

ಬೌಲಿಂಗ್‌ನಲ್ಲಿ ಪ್ರಸಿದ್ಧ ಕೃಷ್ಣ, ಅಭಿಮನ್ಯು ಮಿಥುನ್, ಸ್ಪಿನ್ ಜೋಡಿ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಅವರು ತಂಡಕ್ಕೆ ಜಯದ ಕಾಣಿಕೆ ನೀಡುವ ಸಮರ್ಥರಾಗಿದ್ದಾರೆ. ಗೋವಾ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಸಿದ್ಧೇಶ್ ಲಾಡ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಮತ್ತು ಆದಿತ್ಯ ತಾರೆ ಅವರನ್ನು ನಿಯಂತ್ರಿಸುವುದು ಆತಿಥೇಯ ಬೌಲರ್‌ಗಳ ಮುಂದೆ ಇರುವ ಪ್ರಮುಖ ಸವಾಲು.

 ಮಳೆ ಸಾಧ್ಯತೆ: ಹವಾಮಾನ ಇಲಾಖೆಯ ಮನ್ಸೂಚನೆಯ ಪ್ರಕಾರ ಗುರುವಾರ ನಗರದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಮಧ್ಯಾಹ್ನ ಮತ್ತು ರಾತ್ರಿ ಹೆಚ್ಚು ಮಳೆಯ ಸಾಧ್ಯತೆ ಇದೆ ಎನ್ನಲಾಗಿದೆ.

ತಂಡಗಳು

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿಷೇಕ್ ರೆಡ್ಡಿ, ಶ್ರೇಯಸ್ ಗೋಪಾಲ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಕೃಷ್ಣಪ್ಪ ಗೌತಮ್ , ರೋನಿತ್ ಮೋರೆ, ಪ್ರಸಿದ್ಧಕೃಷ್ಣ, ವಿ. ಕೌಶಿಕ್, ಅಭಿಮನ್ಯು ಮಿಥುನ್, ಜೆ. ಸುಚಿತ್, ಪವನ್ ದೇಶಪಾಂಡೆ, ಪ್ರವೀಣ್ ದುಬೆ, ಶರತ್ ಶ್ರೀನಿವಾಸ್.

ಮುಂಬೈ: ಶ್ರೇಯಸ್ ಅಯ್ಯರ್ (ನಾಯಕ), ಆದಿತ್ಯ ತಾರೆ (ವಿಕೆಟ್‌ಕೀಪರ್), ಯಶಸ್ವಿ ಜೈಸ್ವಾಲ್, ಸಿದ್ಧೇಶ್ ಲಾಡ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಶುಭಂ ರಾಂಜಣೆ, ಧವಳ್ ಕುಲಕರ್ಣಿ, ಶಶಾಂಕ್ ಅತ್ತಾರ್ಡೆ, ಶಾರ್ದೂಲ್ ಠಾಕೂರ್, ಶಂಸ್ ಮುಲಾನಿ.

ಪಂದ್ಯ ಆರಂಭ: ಬೆಳಿಗ್ಗೆ 9

 

Post Comments (+)