ಶುಕ್ರವಾರ, ಏಪ್ರಿಲ್ 16, 2021
31 °C
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕ – ರೈಲ್ವೆ ಪಂದ್ಯ ಇಂದು; ಎದುರಾಳಿಗಳಿಗೆ ದೇವದತ್ತ ಭಯ

ಎಂಟರ ಘಟ್ಟದ ಮೇಲೆ ಸಮರ್ಥ್ ಬಳಗದ ಕಣ್ಣು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈ ಸಲದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟ್‌ರಫೈನಲ್‌ಗೆ ನೇರವಾಗಿ ಲಗ್ಗೆ ಹಾಕಲು ಸಿ ಗುಂಪಿನಲ್ಲಿ ಮೂರು ತಂಡಗಳು ಕಣ್ಣಿಟ್ಟಿವೆ. ಈ ತುರುಸಿನ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕವೂ ಇದೆ.

ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಸದ್ಯ ಕರ್ನಾಟಕ, ಕೇರಳ ಮತ್ತು ಉತ್ತರಪ್ರದೇಶ ತಂಡಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಈ ತಂಡಗಳು ತಲಾ 12 ಅಂಕಗಳನ್ನು ಹೊಂದಿವೆ. ಉತ್ತಮ ರನ್‌ರೇಟ್ ಆಧಾರದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ.  ಭಾನುವಾರ ನಡೆಯಲಿರುವ ಗುಂಪಿನ ಕೊನೆಯ ಸುತ್ತಿನಲ್ಲಿ ಕರ್ನಾಟಕ ತಂಡವು ರೈಲ್ವೆಸ್, ಕೇರಳ ತಂಡವು ಬಿಹಾರ ಮತ್ತು ಒಡಿಶಾ ತಂಡವು ಉತ್ತರಪ್ರದೇಶ ತಂಡವನ್ನು ಎದುರಿಸಲಿವೆ.

ಪ್ರಸ್ತುತ ನಿಯಮಾವಳಿಯ ಪ್ರಕಾರ ಪ್ರತಿಯೊಂದು ಗುಂಪಿನಲ್ಲಿ ಅಗ್ರಸ್ಥಾನ ಗಳಿಸುವ ತಂಡವು  ಎಂಟರ ಘಟ್ಟಕ್ಕೆ ನೇರ ಪ್ರವೇಶ ಗಿಟ್ಟಿಸಲಿವೆ. ಉಳಿದಂತೆ ರನ್‌ರೇಟ್ ಮತ್ತು ಪಾಯಿಂಟ್ಸ್‌ ಗಳಿಕೆಯ ಲೆಕ್ಕಾಚಾರದಲ್ಲಿ ಉಳಿದ ತಂಡಗಳು ಆಯ್ಕೆಯಾಗುತ್ತವೆ. ಈ ಗೊಂದಲವನ್ನು ತಪ್ಪಿಸಿಕೊಳ್ಳಲು ಕೊನೆಯ ಸುತ್ತಿನಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸುವತ್ತ ಸಮರ್ಥ್ ಪಡೆ ಚಿತ್ತ ನೆಟ್ಟಿದೆ.

ಶುಕ್ರವಾರ ಬಲಿಷ್ಠ ಕೇರಳ ತಂಡವನ್ನು ಮಣಿಸಿರುವ ತಂಡವು ಭರ್ತಿ ಆತ್ಮವಿಶ್ವಾಸದಲ್ಲಿದೆ. ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿರುವ ದೇವದತ್ತ ಪಡಿಕ್ಕಲ್ ಮತ್ತು ಉತ್ತಮ ಫಾರ್ಮ್‌ನಲ್ಲಿರುವ ನಾಯಕ ಸಮರ್ಥ್ ತಂಡಕ್ಕೆ ಒಳ್ಳೆಯ ಆರಂಭ ನೀಡುತ್ತಿದ್ದಾರೆ. ಕೆ.ವಿ. ಸಿದ್ಧಾರ್ಥ್ ಕೂಡ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದ್ದಾರೆ. ಕರುಣ್ ನಾಯರ್ ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಕೆಳ ಕ್ರಮಾಂಕದಲ್ಲಿ ರನ್‌ಗಳ ಕಾಣಿಕೆ ನೀಡುತ್ತಿರುವ ಅಭಿಮನ್ಯು ಮಿಥುನ್, ಬೌಲಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. ಶ್ರೇಯಸ್ ಗೋಪಾಲ್, ಅನಿರುದ್ಧ ಜೋಶಿ ಕೂಡ ಉತ್ತಮವಾಗಿ ಆಡಿದ್ದಾರೆ.

ಆದರೆ ರೈಲ್ವೆಸ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಎಂಟು ಪಾಯಿಂಟ್ಸ್‌ಗಳಿಸಿ ನಾಲ್ಕನೇ ಸ್ಥಾನದಲ್ಲಿರುವ ತಂಡದಲ್ಲಿರುವ ಕನ್ನಡಿಗ, ಮಧ್ಯಮವೇಗಿ ಟಿ. ಪ್ರದೀಪ್ ಇದುವರೆಗೆ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ತಂಡದ ಬ್ಯಾಟ್ಸ್‌ಮನ್‌ಗಳಾದ ಮೃಣಾಲ್ ದೇವಧರ್, ಪ್ರಥಮ್ ಸಿಂಗ್, ಶಿವಂ ಚೌಧರಿ ಚೆನ್ನಾಗಿ ಆಡುವ ಸಮರ್ಥರು. ಅವರನ್ನು ಕಟ್ಟಿಹಾಕುವಲ್ಲಿ ಆತಿಥೇಯ ಬೌಲರ್‌ಗಳು ಯಶಸ್ವಿಯಾದರೆ, ಗೆಲುವಿನ ಹಾದಿ ಸುಗಮವಾಗಬಹುದು.

ತಂಡಗಳು: ಕರ್ನಾಟಕ: ಆರ್. ಸಮರ್ಥ್ (ನಾಯಕ), ದೇವದತ್ತ ಪಡಿಕ್ಕಲ್, ಕೆ.ವಿ. ಸಿದ್ಧಾರ್ಥ್, ಕರುಣ್ ನಾಯರ್, ಅನಿರುದ್ಧ ಜೋಶಿ, ಬಿ.ಆರ್. ಶರತ್ (ವಿಕೆಟ್‌ಕೀಪರ್), ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ವೈಶಾಖ ವಿಜಯಕುಮಾರ್, ಪ್ರಸಿದ್ಧಕೃಷ್ಣ, ರೋನಿತ್ ಮೋರೆ, ಕೆ. ಗೌತಮ್, ಡಿ. ನಿಶ್ಚಲ್, ರೋಹನ್ ಕದಂ, ಆದಿತ್ಯ ಸೋಮಣ್ಣ, ಎಂ.ಬಿ. ದರ್ಶನ್, ನಿಕಿನ್ ಜೋಸ್, ಎಸ್. ರಕ್ಷಿತ್, ಕೆ.ಎಲ್. ಶ್ರೀಜಿತ್, ಮನೋಜ್ ಭಾಂಡಗೆ, ಶುಭಾಂಗ್ ಹೆಗಡೆ.

 ರೈಲ್ವೆಸ್: ಕರ್ಣ ಶರ್ಮಾ (ನಾಯಕ), ಮೃಣಾಲ್ ದೇವಧರ್, ಪ್ರಥಮ್ ಸಿಂಗ್, ಶಿವಂ ಚೌಧರಿ, ಅರಿಂದಮ್ ಘೋಷ್, ದಿನೇಶ್ ಮೋರ್ (ವಿಕೆಟ್‌ಕೀಪರ್), ಸೌರಭ್ ಸಿಂಗ್, ಹರ್ಷ ತ್ಯಾಗಿ, ಟಿ. ಪ್ರದೀಪ್, ಅಮಿತ್ ಮಿಶ್ರಾ, ಅನಂತ್ ಸಹಾ, ಶಿವೇಂದ್ರ ಸಿಂಗ್, ಅಮಿತ್ ಕುಲಿಯಾ, ಮನೀಷ್ ರಾವ್, ವಿಕ್ರಾಂತ್ ರಜಪೂತ್, ಹಿಮಾಂಶು ಸಂಗ್ವಾನ್, ದೃಷ್ಯಂತ್ ಸೋನಿ, ಅವಿಜಿತ್ ಸಿಂಗ್, ಯುವರಾಜ್ ಸಿಂಗ್, ಅಭಿಷೇಕ್ ಪಾಂಡೆ, ಆಕಾಶ್ ಪಾಂಡೆ. 

ಸಿ ಗುಂಪಿನ ಪಂದ್ಯಗಳು

ಒಡಿಶಾ–ಉತ್ತರಪ್ರದೇಶ (ಜಸ್ಟ್‌ ಕ್ರಿಕೆಟ್ ಮೈದಾನ)

ಕೇರಳ–ಬಿಹಾರ (ಆಲೂರು ಕೆಎಸ್‌ಸಿಎ ಕ್ರೀಡಾಂಗಣ)

ಪಂದ್ಯಗಳ ಆರಂಭ: ಬೆಳಿಗ್ಗೆ 9

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು