ಭಾನುವಾರ, ಏಪ್ರಿಲ್ 2, 2023
23 °C
ಮಿಂಚಿದ ಕೌಶಿಕ್, ಸಮರ್ಥ್: ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನ

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ನಾಲ್ಕನೇ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಮಧ್ಯಮವೇಗಿ ವಿ. ಕೌಶಿಕ್ ಬೌಲಿಂಗ್ ಹಾಗೂ ಆರಂಭಿಕ ಬ್ಯಾಟರ್ ಆರ್. ಸಮರ್ಥ್ ಉತ್ತಮ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ಗುರುವಾರ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದೆಹಲಿ ವಿರುದ್ಧ 4 ವಿಕೆಟ್‌ಗಳಿಂದ ಗೆದ್ದಿತು.

ಇದರೊಂದಿಗೆ ಕರ್ನಾಟಕ ತಂಡವು ಬಿ ಗುಂಪಿನಲ್ಲಿ ಆಡಿದ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಜಯ ಸಾಧಿಸಿದೆ.  16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನುಳಿದಿರುವ ಮೂರು ಪಂದ್ಯಗಳಲ್ಲಿ ಅಸ್ಸಾಂ, ಸಿಕ್ಕಿಂ ಹಾಗೂ ರಾಜಸ್ಥಾನ ವಿರುದ್ಧ ಆಡಲಿದೆ. 

ಜಾಧವಪುರ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೌಶಿಕ್ (23ಕ್ಕೆ3) ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ (25ಕ್ಕೆ3) ಅವರ ಬೌಲಿಂಗ್ ಮುಂದೆ ದೆಹಲಿ ತಂಡವು 45.4 ಓವರ್‌ಗಳಲ್ಲಿ 159 ರನ್‌ ಗಳಿಸಿ ಆಲೌಟ್ ಆಯಿತು.

ದೆಹಲಿ ತಂಡವು  63 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ನಾಯಕ ನಿತೀಶ್ ರಾಣಾ (30; 43ಎ, 4X4) ಹಾಗೂ ಲಲಿತ್ (59; 100ಎ, 4X7) ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ನೀಡಿದ ಸಮರ್ಥ್ (59; 73ಎ) ಹಾಗೂ ಬಿ.ಆರ್. ಶರತ್ (12; 26ಎ) ಮೊದಲ ವಿಕೆಟ್‌ಗೆ 33 ರನ್‌ ಸೇರಿಸಿದರು.

ದೆಹಲಿ ತಂಡದ ಮಯಂಕ್ ಯಾದವ್ (47ಕ್ಕೆ4) ಮತ್ತು ನವದೀಪ್ ಸೈನಿ ಎರಡು ವಿಕೆಟ್ ಪಡೆದು ಕರ್ನಾಟಕಕ್ಕೆ ಆತಂಕ ಮೂಡಿಸಿದರು. ಆದರೆ. ಸಮರ್ಥ್ (59; 73ಎ) ತಾಳ್ಮೆಯ ಆಟ ಹಾಗೂ ಮನೀಷ್ ಪಾಂಡೆಯ ಚುರುಕಾದ ಬ್ಯಾಟಿಂಗ್‌ನಿಂದಾಗಿ ತಂಡವು ಜಯದತ್ತ ವಾಲಿತು. 29.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 161 ರನ್ ಗಳಿಸಿ ಗೆದ್ದಿತು. 

ಮಯಂಕ್ ಅಗರವಾಲ್ ವಿಶ್ರಾಂತಿ ಪಡೆದ ಕಾರಣ ಕರ್ನಾಟಕ ತಂಡವನ್ನು ಸಮರ್ಥ್ ಮುನ್ನಡೆಸಿದರು. 

ರಿಯಾನ್ ಪರಾಗ್ ಶತಕ: ಐಪಿಎಲ್ ಹೀರೊ ರಿಯಾನ್ ಪರಾಗ್ (128; 93ಎ, 4X5, 6X7) ಅವರ ಶತಕದ ಬಲದಿಂದ ಅಸ್ಸಾಂ ತಂಡವು ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ 180 ರನ್‌ಗಳಿಂದ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಅಸ್ಸಾಂ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 307 ರನ್ ಗಳಿಸಿತು. ಸಿಕ್ಕಿಂ ತಂಡವು 36 ಓವರ್‌ಗಳಲ್ಲಿ 127 ರನ್ ಗಳಿಸಿ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರು

ದೆಹಲಿ: 45.4 ಓವರ್‌ಗಳಲ್ಲಿ 159 (ನಿತೀಶ್ ರಾಣಾ 30, ಲಲಿತ್ ಯಾದವ್ 59, ವಿ. ಕೌಶಿಕ್ 23ಕ್ಕೆ3, ಶ್ರೇಯಸ್ ಗೋಪಾಲ್ 25ಕ್ಕೆ3)

ಕರ್ನಾಟಕ: 29.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 161 (ಆರ್. ಸಮರ್ಥ್ 59, ಮನೀಷ್ ಪಾಂಡೆ 48, ಶ್ರೇಯಸ್ ಗೋಪಾಲ್ 26, ನವದೀಪ್ ಸೈನಿ 31ಕ್ಕೆ2, ಮಯಂಕ್ ಯಾದವ್ 47ಕ್ಕೆ4)

ಫಲಿತಾಂಶ: ಕರ್ನಾಟಕ 4 ವಿಕೆಟ್‌ಗಳಿಂದ ಜಯ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು