ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ 77.12 ಮತದಾನ
Last Updated 9 ಜೂನ್ 2018, 6:51 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ದ್ವೈವಾರ್ಷಿಕ ಚುನಾವಣೆಗೆ ಮೈಸೂರು ಜಿಲ್ಲೆಯಲ್ಲಿ ಶೇ 77.12 ಮತದಾನ ನಡೆದಿದ್ದು, ಒಂಬತ್ತು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಯಿತು.

ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರ ವರೆಗೆ ಮೈಸೂರು ನಗರದ 10 ಮತ್ತು ವಿವಿಧ ತಾಲ್ಲೂಕು ಕೇಂದ್ರಗಳ ಮತಗಟ್ಟೆಗಳಲ್ಲಿ ಮತದಾನ ಸುಸೂತ್ರವಾಗಿ ನಡೆಯಿತು. 9,643 ಮತದಾರರಲ್ಲಿ 7,437 ಮಂದಿ ತಮ್ಮ ಹಕ್ಕು ಚಲಾಯಿಸಿದರು.

ತುಂತುರು ಮಳೆಯ ನಡುವೆಯೇ ಶಿಕ್ಷಕರು ಹುರುಪಿನಿಂದ ಮತ ಚಲಾಯಿ ಸಿದರು. ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನ ನೂತನ ಕಟ್ಟಡ ದಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂನಲ್ಲಿ ಮತಪೆಟ್ಟಿಗೆಗಳನ್ನು ಇರಿಸಲಾಗಿದ್ದು, ಜೂನ್‌ 12ರಂದು ಎಣಿಕೆ ನಡೆಯಲಿದೆ.

ಮಂದಗತಿಯ ಆರಂಭ: ಜಿಲ್ಲೆಯಲ್ಲಿ ಮೊದಲ ಎರಡು ತಾಸಿನಲ್ಲಿ ಮತದಾನ ಮಂದಗತಿಯಲ್ಲಿ ಸಾಗಿತ್ತು. ಬೆಳಿಗ್ಗೆ 9ರ ವರೆಗೆ ಶೇ 5.97 ಮತದಾನ ನಡೆದಿತ್ತು.

ಹೊತ್ತು ಕಳೆದಂತೆ ಮತದಾರರು ಗುಂಪು ಗುಂಪಾಗಿ ಮತಗಟ್ಟೆಗಳಿಗೆ ಬರಲಾರಂಭಿಸಿದ್ದರಿಂದ ಮತದಾನ ಚುರುಕು ಪಡೆದುಕೊಂಡಿತು. ಬೆಳಿಗ್ಗೆ 11ರ ವೇಳೆಗೆ ಶೇ 22.69 ಮತದಾನ ದಾಖಲಾಗಿದ್ದರೆ, ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ 45.06 ಮತದಾನ ನಡೆದಿತ್ತು.

ಮಧ್ಯಾಹ್ನದ ಬಳಿಕವೂ ಬಿರುಸಿ ನಿಂದ ಮತದಾನ ನಡೆಯಿತು. ಮೂರು ಗಂಟೆಯ ವೇಳೆಗೆ ಶೇ 65.27 ಪ್ರಮಾಣ ದಾಖಲಾಗಿತ್ತು. ಕೊನೆಯ ಎರಡು ಗಂಟೆಗಳಲ್ಲಿ ಸುಮಾರು ಶೇ 12ರಷ್ಟು ಮತದಾನ ದಾಖಲಾಯಿತು.

ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್‌ ಅವರು ಗೋಕುಲಂನ ಮೈಸೂರು ವೆಸ್ಟ್‌ ಲಯನ್ಸ್‌ ಸೇವಾನಿಕೇತನ ಶಾಲೆಯಲ್ಲಿ ಮತದಾನ ಮಾಡಿದರೆ, ಜೆಡಿಎಸ್‌ ಮುಖಂಡ ಪ್ರೊ.ಕೆ.ಎಸ್‌.ರಂಗಪ್ಪ ಅವರು ಪೀಪಲ್ಸ್‌ ಪಾರ್ಕ್‌ನಲ್ಲಿರುವ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಕ್ಕು ಚಲಾಯಿಸಿದರು.

ಹೆಚ್ಚು ಮತದಾರರು ಇದ್ದ ಕಾರಣ ಮೈಸೂರು ನಗರದ ಪೀಪಲ್ಸ್‌ ಪಾರ್ಕ್‌ನಲ್ಲಿರುವ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ ಶಿಕ್ಷಣ ಕಾಲೇಜಿನ ಮತಗಟ್ಟೆಗಳಲ್ಲಿ ಮಧ್ಯಾಹ್ನ ದವರೆಗೆ ಉದ್ದನೆಯ ಸಾಲು ಕಂಡು ಬಂತು. ಈ ಎರಡು ಕೇಂದ್ರಗಳಲ್ಲಿ ಕ್ರಮವಾಗಿ 1,716, 1,192 ಮತಗಳಿ ದ್ದವು. ಇತರ ಕೇಂದ್ರಗಳಲ್ಲಿ ಮತದಾರರ ಉದ್ದನೆ ಸಾಲು ಕಂಡುಬರಲಿಲ್ಲ.

ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಮತಗಟ್ಟೆಗಳ ಹೊರಭಾಗದಲ್ಲಿ ಮತಯಾಚಿಸುವ ದೃಶ್ಯ ಸಾಮಾನ್ಯವಾಗಿತ್ತು. ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮತ್ತು ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌ ಅವರು ನಗರದ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದರು.

ಪಿರಿಯಾಪಟ್ಟಣ, ಕೆ.ಆರ್‌.ನಗರ, ಹುಣಸೂರು, ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ತಾಲ್ಲೂಕು ಕಚೇರಿಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.

ಕಣದಲ್ಲಿ ಪಕ್ಷೇತರರು ಸೇರಿದಂತೆ 9 ಅಭ್ಯರ್ಥಿಗಳಿದ್ದರೂ ಜೆಡಿಎಸ್‌ನ ಮರಿ ತಿಬ್ಬೇಗೌಡ, ಕಾಂಗ್ರೆಸ್‌ನ ಎಂ.ಲಕ್ಷ್ಮಣ್‌ ಮತ್ತು ಬಿಜೆಪಿಯ ಬಿ.ನಿರಂಜನಮೂರ್ತಿ ನಡುವೆ ‘ತ್ರಿಕೋನ’ ಸ್ಪರ್ಧೆ ಏರ್ಪಟ್ಟಿದೆ. ಹಿಂದಿನ ಮೂರು ಚುನಾವಣೆಗಳಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿರುವ ಮರಿತಿಬ್ಬೇಗೌಡ ಅವರಿಗೆ ಈ ಬಾರಿ ಲಕ್ಷ್ಮಣ್ ಮತ್ತು ನಿರಂಜಮೂರ್ತಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಸೇರುತ್ತವೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 20,678 ಮತದಾರರು ಇದ್ದರು.

ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿರುವ ಸರ್ಕಾರಿ, ಅನುದಾನ, ಅನುದಾನ ರಹಿತ ಪ್ರೌಢಶಾಲಾ, ಕಾಲೇಜು, ವೃತ್ತಿಪರ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT