ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕ–ಛತ್ತೀಸಗಡ ಸೆಮಿ ಕದನ

ತಮಿಳುನಾಡು ಸೆಮಿಗೆ; ಮುಂಬೈ, ಪಂಜಾಬ್‌ಗೆ ನಿರಾಸೆ
Last Updated 21 ಅಕ್ಟೋಬರ್ 2019, 19:07 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಛತ್ತೀಸ್‌ಗಢ ತಂಡವನ್ನು ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಪಂದ್ಯ ನಡೆಯಲಿದೆ. ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ಮತ್ತು ಗುಜರಾತ್ ತಂಡಗಳು ಸೆಣಸಲಿವೆ.

ಸೋಮವಾರ ನಡೆದ ಮುಂಬೈ–ಛತ್ತೀಸ್‌ಗಢ, ತಮಿಳುನಾಡು–ಪಂಜಾಬ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಯಾಯಿತು. ಹೀಗಾಗಿ ಲೀಗ್ ಹಂತದಲ್ಲಿ ಹೆಚ್ಚು ಜಯ ಗಳಿಸಿದ ಛತ್ತೀಸಗಡ ಮತ್ತು ತಮಿಳುನಾಡು ತಂಡಗಳಿಗೆ ಸೆಮಿಫೈನಲ್ ಹಾದಿ ಸುಗಮವಾಯಿತು.

ಆಲೂರು 2ನೇ ಮೈದಾನದಲ್ಲಿ ನಡೆದ ಪಂದ್ಯವನ್ನು ಮಳೆಯ ಕಾರಣ 45.4 ಓವರ್‌ಗಳಿಗೂ ಆಲೂರು 1ನೇ ಮೈದಾನದಲ್ಲಿ ನಡೆದ ಪಂದ್ಯವನ್ನು 39 ಓವರ್‌ಗಳಿಗೂ ನಿಗದಿ ಸೀಮಿತಗೊಳಿಸಲಾಗಿತ್ತು. 2ನೇ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಛತ್ತೀಸ್‌ಗಡ 6 ವಿಕೆಟ್‌ಗಳಿಗೆ 190 ರನ್ ಗಳಿಸಿತ್ತು. ಮುಂಬೈ ಇನಿಂಗ್ಸ್‌ ಆರಂಭಿಸುವ ಮುನ್ನ ಮತ್ತೆ ಮಳೆ ಕಾಡಿತು. ಹೀಗಾಗಿ 40 ಓವರ್‌ಗಳಲ್ಲಿ 192 ರನ್ ಗಳಿಸುವ ಗುರಿ ನೀಡಲಾಗಿತ್ತು. ಆದರೆ ತಂಡ 11.3 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 95 ರನ್ ಗಳಿಸಿದ್ದಾಗ ಮಳೆ ಬಿರುಸು ಪಡೆದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

ಛತ್ತೀಸಗಢ ಆರಂಭದಲ್ಲಿ ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ನಾಯಕ ಹರಪ್ರೀತ್‌ ಸಿಂಗ್ (83; 108 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಎ.ಎನ್‌. ಖಾರೆ (ಅಜೇಯ 59; 87 ಎ, 4 ಬೌಂಡರಿ, 1 ಸಿ) ಅವರ ಅರ್ಧಶತಕಗಳು ತಂಡಕ್ಕೆ ಬಲ ತುಂಬಿದವು.

ತಮಿಳುನಾಡು ಕೈ ಹಿಡಿದ ವರುಣ: ಪಂಜಾಬ್ ವಿರುದ್ಧ ಟಾಸ್ ಸೋತ ತಮಿಳುನಾಡು ಮೊದಲು ಬ್ಯಾಟಿಂಗ್ ಮಾಡಿ 39 ಓವರ್‌ಗಳಲ್ಲಿ 6ಕ್ಕೆ 174 ರನ್‌ ಗಳಿಸಿತ್ತು. ಪಂಜಾಬ್‌ಗೆ 195 ರನ್‌ಗಳ ಗೆಲುವಿನ ಗುರಿ ನಿಗದಿ ಮಾಡಲಾಗಿತ್ತು. ಆದರೆ ತಂಡ 12.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 52 ರನ್‌ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ತಮಿಳುನಾಡು ತಂಡ ಆರಂಭದಲ್ಲಿ ಸಂಕಷ್ಟ ಅನುಭವಿಸಿತ್ತು. ಬಾಬಾ ಅಪರಾಜಿತ್ (56; 76 ಎಸೆತ, 2 ಬೌಂಡರಿ, 2 ಸಿಕ್ಸರ್‌) ಮತ್ತು ವಾಷಿಂಗ್ಟನ್ ಸುಂದರ್ (35; 39 ಎಸೆತ, 3 ಬೌಂಡರಿ) ಅವರ ಕೆಚ್ಚೆದೆಯ ಆಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

ಸಂಕ್ಷಿಪ್ತ ಸ್ಕೋರು: ಛತ್ತೀಸಗಡ: 45.4 ಓವರ್‌ಗಳಲ್ಲಿ 6ಕ್ಕೆ 190 (ಅಶುತೋಷ್ ಸಿಂಗ್ 27, ಹರಪ್ರೀತ್ ಸಿಂಗ್ 84, ಎ.ಎನ್‌.ಖಾರೆ 59; ಧವಳ್ ಕುಲಕರ್ಣಿ 9ಕ್ಕೆ2); ಮುಂಬೈ: 11.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 95 (ಯಶಸ್ವಿ ಜೈಸ್ವಾಲ್ 60, ಆದಿತ್ಯ ತರೆ 31). ಫಲಿತಾಂಶ: ಪಂದ್ಯ ರದ್ದು; ಹೆಚ್ಚು ಪಂದ್ಯಗಳನ್ನು ಗೆದ್ದ ಆಧಾರದಲ್ಲಿ ಛತ್ತೀಸಗಡ ಸೆಮಿಫೈನಲ್‌ಗೆ ಪ್ರವೇಶ.

ತಮಿಳುನಾಡು: 39 ಓವರ್‌ಗಳಲ್ಲಿ 6ಕ್ಕೆ 174 (ಬಾಬಾ ಅಪರಾಜಿತ್ 56, ವಾಷಿಂ‌ಗ್ಟನ್ ಸುಂದರ್ 35; ಮಯಂಕ್‌ ಮಾರ್ಕಂಡೆ 26ಕ್ಕೆ2, ಗುರುಕೀರತ್ ಸಿಂಗ 25ಕ್ಕೆ2); ಪಂಜಾಬ್‌: 12.2 ಓವರ್‌ಗಳಲ್ಲಿ 2ಕ್ಕೆ 52 (ಸನ್ವೀರ್ 21). ಫಲಿತಾಂಶ: ಪಂದ್ಯ ರದ್ದು; ಹೆಚ್ಚು ಪಂದ್ಯಗಳನ್ನು ಗೆದ್ದ ಆಧಾರದಲ್ಲಿ ತಮಿಳುನಾಡು ಸೆಮಿಫೈನಲ್‌ಗೆ ಪ್ರವೇಶ.

ಸೆಮಿಫೈನಲ್‌ ಪಂದ್ಯಗಳು

ಕರ್ನಾಟಕ–ಛತ್ತೀಸಗಡ

ದಿನಾಂಕ: ಅಕ್ಟೋಬರ್ 23

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ತಮಿಳುನಾಡು–ಗುಜರಾತ್

ದಿನಾಂಕ: ಅಕ್ಟೋಬರ್ 23

ಸ್ಥಳ: ಜಸ್ಟ್ ಕ್ರಿಕೆಟ್ ಅಕಾಡೆಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT