ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ತಮಿಳುನಾಡು ಸವಾಲು

ಸೇಡು ತೀರಿಸಿಕೊಳ್ಳುವ ಛಲದಲ್ಲಿ ಮನೀಷ್ ಬಳಗ
Last Updated 20 ಡಿಸೆಂಬರ್ 2021, 14:03 IST
ಅಕ್ಷರ ಗಾತ್ರ

ಜೈಪುರ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ನಿರಾಶೆ ಅನುಭವಿಸಿದ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಮತ್ತೊಂದು ಪೈಪೋಟಿಗೆ ಸಜ್ಜಾಗಿದೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಎರಡೂ ತಂಡಗಳು ಎಂಟರ ಘಟ್ಟದ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸುವ ಭರವಸೆಯಲ್ಲಿವೆ. ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವುದು ತಮಿಳುನಾಡು ತಂಡದ ನಿರೀಕ್ಷೆ ಮೂಡಿಸಿದ್ದರೆ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ರಾಜಸ್ಥಾನ ವಿರುದ್ಧ ಭರ್ಜರಿ ಜಯ ಗಳಿಸಿರುವುದು ಕರ್ನಾಟಕ ತಂಡದಲ್ಲಿ ಆಸೆ ಚಿಗುರಲು ಕಾರಣ.

ಭಾನುವಾರದ ಪಂದ್ಯದಲ್ಲಿ ಕರ್ನಾಟಕ 8 ವಿಕೆಟ್‌ಗಳಿಂದ ಆತಿಥೇಯ ತಂಡವನ್ನು ಮಣಿಸಿತ್ತು. ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ವಿರುದ್ಧವೂ ಇದೇ ಲಯದಲ್ಲಿ ಆಡಲು ತಂಡ ಸಜ್ಜಾಗಿದೆ. ಬಲಿಷ್ಠ ಬ್ಯಾಟಿಂಗ್ ಬಳಗ ತಂಡದ ಭರವಸೆಯಾಗಿದ್ದು ತಮಿಳುನಾಡು ತಂಡದಲ್ಲಿ ಸಮರ್ಥ ಆಲ್‌ರೌಂಡರ್‌ಗಳು ಇದ್ದಾರೆ.

ರವಿಕುಮಾರ್ ಸಮರ್ಥ್‌, ದೇವದತ್ತ ಪಡಿಕ್ಕಲ್‌, ಕೆ.ವಿ.ಸಿದ್ಧಾರ್ಥ್‌, ನಾಯಕ ಮನೀಷ್ ಪಾಂಡೆ, ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್‌ ಮತ್ತು ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಯಾವುದೇ ರೀತಿಯ ಬೌಲಿಂಗ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಸಿದ್ಧ ಕೃಷ್ಣ ನೇತೃತ್ವದ ಬೌಲಿಂಗ್ ದಾಳಿಯೂ ಕರ್ನಾಟಕದ ಶಕ್ತಿಯಾಗಿದೆ. ಪ್ರವೀಣ್ ದುಬೆ, ಕೆ.ಸಿ.ಕಾರ್ಯಪ್ಪ, ವೈಶಾಖ್ ವಿಜಯಕುಮಾರ್‌, ಜೆ.ಸುಚಿತ್‌ ಮುಂತಾದವರು ಪ್ರಸಿದ್ಧ ಅವರಿಗೆ ಉತ್ತಮ ಸಹಕಾರ ನೀಡಬಲ್ಲರು.

ತಿರುವನಂತಪುರದಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕವನ್ನು ತಮಿಳುನಾಡು ಮಣಿಸಿತ್ತು. ನಂತರ ಕರ್ನಾಟಕ ತಂಡ ಪುಟಿದೆದ್ದಿದೆ. ತಮಿಳುನಾಡು ವಿರುದ್ಧ ಸೇಡು ತೀರಿಸುವ ಛಲವೂ ತಂಡಕ್ಕಿದೆ. ಎನ್‌.ಜಗದೀಶನ್, ಬಾಬಾ ಇಂದ್ರಜಿತ್‌, ದಿನೇಶ್ ಕಾರ್ತಿಕ್‌, ವಾಷಿಂಗ್ಟನ್ ಸುಂದರ್ ಮತ್ತು ನಾಯಕ ವಿಜಯಶಂಕರ್‌ ಅವರೊಂದಿಗೆ ಸ್ಫೋಟಕ ಬ್ಯಾಟರ್‌ ಶಾರೂಖ್‌ ಖಾನ್‌ ಅವರನ್ನು ನಿಯಂತ್ರಿಸುವ ಸವಾಲು ಕರ್ನಾಟಕದ ಮುಂದೆ ಇದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಶಾರೂಖ್ ಖಾನ್ ಕರ್ನಾಟಕದಿಂದ ಜಯ ಕಸಿದುಕೊಂಡಿದ್ದರು.

ಉತ್ತರಪ್ರದೇಶ–ಹಿಮಾಚಲಪ್ರದೇಶ ಪೈಪೋಟಿ

ಮಂಗಳವಾರ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಪ್ರದೇಶ ಮತ್ತು ಹಿಮಾಚಲಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ. ಹಿಮಾಚಲಪ್ರದೇಶ ನೇರ ಪ್ರವೇಶ ಪಡೆದಿದ್ದು ಉತ್ತರಪ್ರದೇಶ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶವನ್ನು ಮಣಿಸಿ ಎಂಟರ ಘಟ್ಟ ಪ್ರವೇಶಿಸಿತ್ತು.

ಆಕಾಶ್‌ದೀಪ್‌ ನಾಥ್‌, ಮಾಧವ್ ಕೌಶಿಕ್‌, ಆರ್ಯನ್ ಜುಯಾಲ್, ಕರ್ಣ ಶರ್ಮಾ ಮತ್ತು ಸಮೀರ್‌ ರಿಜ್ವಿ ಮುಂತಾದವರು ಉತ್ತರಪ್ರದೇಶದ ಶಕ್ತಿಯಾಗಿದ್ದು ರಿಂಕು ಸಿಂಗ್ ಮೇಲೆಯೂ ನಿರೀಕ್ಷೆ ಇದೆ.

ಭುವನೇಶ್ವರ್ ಕುಮಾರ್‌, ಅಂಕಿತ್ ರಜಪೂತ್‌, ಯಶ್ ದಯಾಳ್‌, ಶಿವಂ ಮಾವಿ ಮತ್ತು ಶಿವಂ ಶರ್ಮಾ ಅವರ ಮೇಲೆ ಹಿಮಾಚಲಪ್ರದೇಶ ಅವಲಂಬಿತವಾಗಿದೆ. ಆಲ್‌ರೌಂಡರ್ ಋಷಿ ಧವನ್‌ ಬ್ಯಾಟಿಂಗ್‌ನಲ್ಲೂ ಬೌಲಿಂಗ್‌ನಲ್ಲೂ ಮಿಂಚಬಲ್ಲರು.

ಇಂದಿನ ಪಂದ್ಯಗಳು

ಕರ್ನಾಟಕ–ತಮಿಳುನಾಡು

ಸ್ಥಳ: ಕೆ.ಎಲ್‌.ಸೈನಿ ಕ್ರೀಡಾಂಗಣ

ಆರಂಭ: ಬೆಳಿಗ್ಗೆ 9.00

ಉತ್ತರಪ್ರದೇಶ–ಹಿಮಾಚಲಪ್ರದೇಶ

ಸ್ಥಳ: ಸವಾಯ್‌ ಮಾನ್‌ಸಿಂಗ್ ಕ್ರೀಡಾಂಗಣ

ಆರಂಭ: ಬೆಳಿಗ್ಗೆ 9.00

ಕರ್ನಾಟಕ–ತಮಿಳುನಾಡು ಹಿಂದಿನ 5 ಪಂದ್ಯಗಳು

* 2021, ಡಿ.9: ತಮಿಳುನಾಡಿಗೆ 8 ವಿಕೆಟ್‌ಗಳ ಜಯ

* 2019, ಅ.25: ಕರ್ನಾಟಕಕ್ಕೆ 60 ರನ್‌ ಜಯ (ವಿಜೆಡಿ ನಿಯಮ)

* 2014, ನ.10: ಕರ್ನಾಟಕಕ್ಕೆ 104 ರನ್‌ಗಳ ಗೆಲುವು

* 2014, ಮಾ.5: ತಮಿಳುನಾಡಿಗೆ 7 ವಿಕೆಟ್‌ಗಳ ಜಯ

* 2013, ಫೆ.17: ಕರ್ನಾಟಕಕ್ಕೆ 7 ವಿಕೆಟ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT