ವಿವಾದಕ್ಕೆಡೆಯಾದ ವಿಕ್ರಂ ರಾಥೋಡ್ ನೇಮಕ ಪ್ರಸ್ತಾವ

7

ವಿವಾದಕ್ಕೆಡೆಯಾದ ವಿಕ್ರಂ ರಾಥೋಡ್ ನೇಮಕ ಪ್ರಸ್ತಾವ

Published:
Updated:
Prajavani

ನವದೆಹಲಿ: ಹಿರಿಯ ಕ್ರಿಕೆಟಿಗ, ವಿಕ್ರಂ ರಾಥೋರ್ ಅವರನ್ನು ರಾಷ್ಟ್ರೀಯ ‘ಎ’ ಮತ್ತು 19 ವರ್ಷದೊಳಗಿನ ತಂಡಗಳ ಬ್ಯಾಟಿಂಗ್ ಕೋಚ್‌ ಆಗಿ ನೇಮಕ ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ. ಇದು ವಿವಾದ ಸೃಷ್ಟಿಸಿದೆ. ವಿಕ್ರಂ, 19 ವರ್ಷದೊಳಗಿನವರ ಆಯ್ಕೆ ಸಮಿತಿ ಮುಖ್ಯಸ್ಥ ಆಶಿಶ್‌ ಕಪೂರ್ ಅವರ ಸಂಬಂಧಿಯಾಗಿರುವುದು ವಿವಾದಕ್ಕೆ ಕಾರಣ.‌

ವಿಕ್ರಂ ಅವರನ್ನು ಬ್ಯಾಟಿಂಗ್ ಕೋಚ್‌ ಆಗಿ ಮತ್ತು ವಿಜಯ್‌ ಯಾದವ್ ಅವರನ್ನು ವಿಕೆಟ್ ಕೀಪಿಂಗ್ ಕೋಚ್‌ ಆಗಿ ನೇಮಕ ಮಾಡುವುದು ಬಿಸಿಸಿ‌ಐ ಉದ್ದೇಶ. ಕ್ರಿಕೆಟ್‌ ಆಪರೇಷನ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಅವರಿಗೆ ಈ ಕುರಿತು ಆಡಳಿತಾಧಿಕಾರಿ ಸಮಿತಿ ಮುಖ್ಯಸ್ಥ ವಿನೋದ್ ರಾಯ್‌ ಹಸಿರು ನಿಶಾನೆ ನೀಡಿದ್ದಾರೆ.

‘ತಂಡಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ಮುಂದಾದಾಗ ವಿಕ್ರಂ ಮತ್ತು ವಿಜಯ್‌ ಅವರ ಹೆಸರನ್ನು ಭಾರತ ‘ಎ’ ಮತ್ತು 19 ವರ್ಷದೊಳಗಿನವರ ಕೋಚ್‌ ರಾಹುಲ್ ದ್ರಾವಿಡ್ ಶಿಫಾರಸು ಮಾಡಿದ್ದಾರೆ. ಹೆಚ್ಚುವರಿ ಸಿಬ್ಬಂದಿ ಭಾರತ ‘ಎ’, ಭಾರತ ‘ಬಿ’ ದಕ್ಷಿಣ ಆಫ್ರಿಕಾ ‘ಎ’ ಮತ್ತು ಅಫ್ಗಾನಿಸ್ತಾನ ‘ಎ’ ತಂಡಗಳ ನಡುವಿನ ಚತುಷ್ಕೋನ ಸರಣಿಯಲ್ಲಿ ತಂಡಕ್ಕೆ ಸಹಾಯ ಮಾಡಲಿದ್ದಾರೆ. ವಿಕ್ರಂ ಅವರು ಇರಾನಿ ಕಪ್‌ ಟೂರ್ನಿಯಲ್ಲಿ ಭಾರತ ಇತರ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.

‘ಯಾರು ಯಾರ ಸಂಬಂಧಿ ಎಂಬುದನ್ನು ಗಮನಿಸುವುದು ವಿನೋದ್ ರಾಯ್ ಅವರ ಕೆಲಸವಲ್ಲ. ಇದಕ್ಕಿಂತಲೂ ಮುಖ್ಯವಾದ ವಿಷಯ ಎಂದರೆ, ಇದು ತಾತ್ಕಾಲಿಕ ನೇಮಕಾತಿಯಾಗಿದೆ’ ಎಂದು ಅಧಿಕಾರಿ ಅಭಿಪ್ರಾಯಪಟ್ಟರು.

ವಿಕ್ರಂ ಅವರು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಪರವಾಗಿ ಸಾಕಷ್ಟು ಪಂದ್ಯಗಳನ್ನು ಆಡಿದ್ದು 1996ರಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಭಾರತದ ಪರವಾಗಿ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2016ರ ವರೆಗೆ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲೂ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !