ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ವಿನಯಕುಮಾರ್‌ಗೆ ‘ಶತಕ’ದ ಸಂಭ್ರಮ

ಕರ್ನಾಟಕ–ವಿದರ್ಭ ಹಣಾಹಣಿ ಇಂದಿನಿಂದ * ಶರತ್‌ಗೆ ಪದಾರ್ಪಣೆ ಪುಳಕ
Last Updated 11 ನವೆಂಬರ್ 2018, 20:01 IST
ಅಕ್ಷರ ಗಾತ್ರ

ನಾಗಪುರ: ಕರ್ನಾಟಕಕ್ಕೆ ಎರಡು ರಣಜಿ ಟ್ರೋಫಿಗಳನ್ನು ಗೆದ್ದುಕೊಟ್ಟ ನಾಯಕ ರಂಗನಾಥ್ ವಿನಯಕುಮಾರ್ ಸೋಮವಾರ ನಾಗಪುರದ ಜಮ್ತಾ ಕ್ರೀಡಾಂಗಣದಲ್ಲಿ ‘ಶತಕ’ಸಾಧನೆ ಮಾಡಲಿದ್ದಾರೆ. ಅವರು ನೂರನೇ ರಣಜಿ ಪಂದ್ಯ ಆಡಲಿದ್ದಾರೆ. ಈ ಅವಿಸ್ಮರಣೀಯ ಪಂದ್ಯಕ್ಕೆ ಜಯದ ಮೆರಗು ತುಂಬುವ ಉತ್ಸಾಹದಲ್ಲಿದ್ದಾರೆ.

ಹೋದ ವರ್ಷ ಕೋಲ್ಕತ್ತದಲ್ಲಿ ನಡೆದಿದ್ದ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡಕ್ಕೆ ಆಘಾತ ನೀಡಿದ್ದ ವಿದರ್ಭ ಎದುರು ವಿನಯ್ ಬಳಗವು ಈ ವರ್ಷದ ಅಭಿಯಾನ ಆರಂಭಿಸುತ್ತಿದೆ. ಆತಿಥೇಯ ವಿದರ್ಭ ತಂಡವು ’ಹಾಲಿ ಚಾಂಪಿಯನ್’ ಕೂಡ ಹೌದು. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಮಹಾರಾಷ್ಟ್ರ ಎದುರಿನ ಪಂದ್ಯದಲ್ಲಿ ವಿದರ್ಭ ಡ್ರಾ ಸಾಧಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಫಾಲೋ ಆನ್ ಪಡೆದರೂ, ನಂತರ ಪುಟಿದೆದ್ದಿತ್ತು. ಆದ್ದರಿಂದ ಕರ್ನಾಟಕ ತಂಡಕ್ಕೆ ಗೆಲುವು ಸುಲಭವಲ್ಲ.

ಈಚೆಗೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್‌ ಹಂತದಲ್ಲಿಯೇ ಹೊರಬಿದ್ದಿದ್ದ ಕರ್ನಾಟಕ ತನ್ನ ಲಯಕ್ಕೆ ಮರಳುವ ಒತ್ತಡದಲ್ಲಿದೆ. ಅದಕ್ಕಾಗಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿಯಲಿದೆ. ಅನುಭವಿ ವಿಕೆಟ್‌ಕೀಪರ್ ಸಿ.ಎಂ. ಗೌತಮ್ ಅವರನ್ನು ಆಯ್ಕೆ ಮಾಡಿಲ್ಲ. ಅದರಿಂದಾಗಿ ಬಿ.ಆರ್. ಶರತ್ ಪದಾರ್ಪಣೆ ಮಾಡಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಕೆಲವು ಪಂದ್ಯಗಳಲ್ಲಿ ಅವರು ಉತ್ತಮವಾಗಿ ಆಡಿದ್ದರು.

‘ರನ್‌ ಯಂತ್ರ’ ಮಯಂಕ್ ಅಗರವಾಲ್ ಮತ್ತು ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಅವರು ನ್ಯೂಜಿಲೆಂಡ್‌ನಲ್ಲಿ ಭಾರತ ‘ಎ’ ತಂಡದ ಪರ ಆಡುತ್ತಿದ್ದಾರೆ. ಆದ್ದರಿಂದ ಅವರ ಬದಲಿಗೆ ಸ್ಥಾನ ಪಡೆದಿರುವ ಡಿ. ನಿಶ್ಚಲ್ ಅವರು ಆರ್. ಸಮರ್ಥ್ ಜೊತೆಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಸ್ಥಾನದಲ್ಲಿ ಶಿಶಿರ್ ಭವಾನೆ ಅಥವಾ ಪದಾರ್ಪಣೆ ನಿರೀಕ್ಷೆಯಲ್ಲಿರುವ ಕೆ.ವಿ.ಸಿದ್ಧಾರ್ಥ್ ಸ್ಥಾನ ಪಡೆಯಬಹುದು. ಕರುಣ್ ನಾಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಪ್ರಮುಖ ಅಟಗಾರರಾದ ಮನೀಷ್ ಪಾಂಡೆ ತಂಡದಲ್ಲಿ ಇಲ್ಲ.

ಆದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್‌ ಬಿನ್ನಿ ಅವರು ಉತ್ತಮ ಕಾಣಿಕೆ ನೀಡುವ ಅನಿವಾರ್ಯತೆ ಇದೆ. ಬೌಲಿಂಗ್ ಸಾರಥ್ಯ ನಾಯಕ ವಿನಯಕುಮಾರ್ ಮೇಲೆ ಇದೆ. ಅವರಿಗೆ ಅನುಭವಿ ಮಿಥುನ್ ಜೊತೆ ನೀಡಲಿದ್ದಾರೆ. ಹೋದ ವರ್ಷ ಆಡಿದ್ದ ಎಸ್. ಅರವಿಂದ್ ಈಗ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ. ಆದ್ದರಿಂದ ಅವರ ಸ್ಥಾನವನ್ನು ತುಂಬಲು ಬೆಳಗಾವಿಯ ರೋನಿತ್ ಮೋರೆ ಅಥವಾ ಪ್ರಸಿದ್ಧ ಕೃಷ್ಣ ಅವಕಾಶ ಗಿಟ್ಟಿಸಬಹುದು. ಸ್ಪಿನ್ ವಿಭಾಗದಲ್ಲಿ ಶ್ರೇಯಸ್‌ಗೆ ಜೆ. ಸುಚಿತ್ ಜೊತೆಯಾಗಬಹುದು.

ಹೋದ ವರ್ಷ ಇಲ್ಲಿಯೇ ನಡೆದಿದ್ದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಂಬೈ ಎದುರು ವಿನಯ್ ಕುಮಾರ್ ಅಮೋಘ ಬೌಲಿಂಗ್ ಮಾಡಿ ತಂಡದ ಜಯಕ್ಕೆ ಕಾರಣರಾಗಿದ್ದರು. ಈ ಬಾರಿಯೂ ಅವರ ಆಟ ರಂಗೇರಿದರೆ ಗೆಲುವಿನ ಸಂಭ್ರಮ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT