ರಾಯಪುರದ ಕ್ರೀಡಾಂಗಣದಲ್ಲಿ ಅವತ್ತು ವಿರಾಟ್ ಕೊಹ್ಲಿ ತಮ್ಮ ಮೊದಲ ರನ್ ಓಡಿದಾಗ ಅಪಾರವಾಗಿ ಸಂಭ್ರಮಿಸಿದರು. ಆದರೆ ಸ್ವಲ್ಪ ಹೊತ್ತಿನ ನಂತರ ಶತಕ ಪೂರ್ಣಗೊಳಿಸಿದಾಗ ಹೆಚ್ಚು ಸಡಗರಪಡಲಿಲ್ಲ. ಸುಮ್ಮನೇ ಬ್ಯಾಟ್ ಎತ್ತಿ ಪ್ರೇಕ್ಷಕರತ್ತ ನೋಟ ಹಾಯಿಸಿ ಆಟ ಮುಂದುವರಿಸಿದರು.

ಅವರ ಈ ನಡವಳಿಕೆ ಹೀಗೇಕೆ ಎಂಬ ಕುತೂಹಲಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿಯಂತೂ ದೊಡ್ಡ ಚರ್ಚೆಯೇ ಆರಂಭವಾಯಿತು. ಅದೆಲ್ಲಕ್ಕೂ ಕೊಹ್ಲಿಯೇ ಉತ್ತರ ಕೊಟ್ಟರು.

‘ಇದಕ್ಕೂ ಮುನ್ನ ಎರಡು ಪಂದ್ಯಗಳಲ್ಲಿ ಸತತ ಸೊನ್ನೆಗೆ ಔಟಾಗಿದ್ದೆ. ಅದರಿಂದ ತುಸು ಒತ್ತಡಕ್ಕೆ ಒಳಗಾಗಿದ್ದೆ. ನಾನು ಉತ್ತಮ ಲಯದಲ್ಲಿದ್ದೆ. ಎಸೆತಗಳ ಲಯವನ್ನು ಅಚ್ಚುಕಟ್ಟಾಗಿ ಗುರುತಿಸಿ ಲೀಲಾಜಾಲವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಇತ್ತು. ಆದರೂ ಔಟಾಗಿದ್ದು ಮನಸ್ಸಿನಲ್ಲಿ ಕಾಡುತ್ತಿತ್ತು. ಆದ್ದರಿಂದ ಈ ಪಂದ್ಯದಲ್ಲಿ ಮೊದಲ ರನ್ ಹೊಡೆದಾಗ ಆತ್ಮವಿಶ್ವಾಸ ಮೂಡಿತು. ಅದಕ್ಕಾಗಿಯೇ ಖುಷಿಪಟ್ಟೆ’ ಎಂದು ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದ ನಂತರ ಟೀವಿ ನಿರೂಪಕರಿಗೆ ಉತ್ತರಿಸಿದ್ದರು ಕೊಹ್ಲಿ.

ಈ ಸಂಗತಿಯು ವಿರಾಟ್ ಅವರ ಮನೋಬಲ, ಬಿದ್ದಾಗ ಮತ್ತೆ ಎದ್ದು ನಿಲ್ಲುವ ಛಲ ಮತ್ತು ಪುಟ್ಟ ಯಶಸ್ಸನ್ನೂ ಮನಸಾರೆ ಆಸ್ವಾದಿಸುವ ರೀತಿಯನ್ನು ತೋರ್ಪಡಿಸುತ್ತದೆ ಅಲ್ಲವೇ?

ಏಕೆಂದರೆ; ಅವತ್ತು ಅವರು ಆಡಿದ್ದು ತಮ್ಮ ವೃತ್ತಿಜೀವನದ 279ನೇ ಐಪಿಎಲ್ ಪಂದ್ಯವಾಗಿತ್ತು. ಹೊಡೆದಿದ್ದು 9ನೇ ಶತಕ. 19 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಣ್ಮಣಿಯೇ ಆಗಿರುವ ವಿರಾಟ್ ಅವರು ಈಗ ಅತಿ ಹೆಚ್ಚು ಪಂದ್ಯ ಆಡಿದ ಮತ್ತು ಹೆಚ್ಚು ಶತಕ ದಾಖಲಿಸಿದ ಆಟಗಾರನಾಗಿದ್ದಾರೆ.

ವಿರಾಟ್ ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿ ಎರಡು ವರ್ಷಗಳು ತುಂಬಿವೆ. ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿ ಒಂದು ವರ್ಷ ಕಳೆದುಹೋಗಿದೆ. ಏಕದಿನ ಪಂದ್ಯಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಆದರೆ ಐಪಿಎಲ್ನಲ್ಲಿ ಕಣಕ್ಕಿಳಿದಾಕ್ಷಣ ಅವರು ಟಿ20 ಮಾದರಿಗೆ ಹೊಂದಿಕೊಂಡು ಆಡುವ ಪರಿ ಯುವಪೀಳಿಗೆಯ ಆಟಗಾರರಿಗೆ ಮಾದರಿಯೇ ಸರಿ.

ಏಕೆಂದರೆ; ವಿರಾಟ್ ಬ್ಯಾಟಿಂಗ್ ಗಮನಿಸಿದವರಿಗೆ ‘ಕ್ಲಾಸ್ ಮತ್ತು ಮಾಸ್’ ಎರಡೂ ಎದ್ದು ಕಾಣುತ್ತವೆ. ಮೊಣಕಾಲ ಮಟ್ಟದಿಂದ ಕೆಳಗೆ ಸಾಗಿಬರುವ ಎಸೆತವನ್ನು ಫ್ಲಿಕ್ ಮಾಡಿ ಸಿಕ್ಸರ್ಗೆತ್ತುವ ಅವರ ಶೈಲಿ ಕಣ್ಣಿಗೆ ಹಬ್ಬವನ್ನೇ ಉಂಟುಮಾಡುತ್ತದೆ. ಸ್ಪಿನ್ನರ್ಗಳಿಗೆ ಸ್ವೀಪ್ ಮೂಲಕ ದಂಡಿಸುವ ಶೈಲಿ ಅವರ ಟೆಸ್ಟ್ ಆಟವನ್ನು ನೆನಪಿಸದೇ ಇರದು. ಟೆಸ್ಟ್ ಕ್ರಿಕೆಟ್ನಲ್ಲಿಯೂ ದಾಖಲೆಗಳ ರಾಶಿ ಹಾಕಿರುವ ಆಟಗಾರ ಅವರು. ಐಪಿಎಲ್ನಲ್ಲಿ ಪ್ರಸ್ತುತ ‘ಹೊಡಿ ಬಡಿ’ ಹೀರೊಗಳಾದ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ ಅವರೊಂದಿಗೂ ಪೈಪೋಟಿಗೆ ನಿಂತಿದ್ದಾರೆ.

ಮುಖ್ಯವಾಗಿ ಅವರಿಗೆ ಈಗ ದಾಖಲೆಗಳ ಮೇಲೆ ಚಿತ್ತವಿಲ್ಲ. ಏನಿದ್ದರೂ ತಮ್ಮ ಆಟವನ್ನು ಮತ್ತಷ್ಟು ಉತ್ಕೃಷ್ಟ ಗುಣಮಟ್ಟಕ್ಕೇರಿಸುವುದರತ್ತ ಮಾತ್ರ ಗಮನ. ಹೊಸ ಪೀಳಿಗೆಯ ಬ್ಯಾಟರ್ಗಳ ಆಕ್ರಮಣಶೀಲ ಆಟಕ್ಕೆ ತಕ್ಕನಾಗಿ ಬೌಲರ್ಗಳ ಕೌಶಲಗಳೂ ಬದಲಾಗುತ್ತಿವೆ. ಅದಕ್ಕೆ ತಕ್ಕಂತೆ ತಮ್ಮ ಆಟವನ್ನು ಒಗ್ಗಿಸಿಕೊಳ್ಳುವತ್ತ ನಿರಂತರ ಅಭ್ಯಾಸ ಮಾಡುತ್ತಿದ್ದಾರೆ. ತಾವು ಕಲಿತ ಕ್ರಿಕೆಟ್ ಮೂಲಪಾಠವನ್ನೂ ಅದರೊಂದಿಗೆ ಮೇಳೈಸಿ, ನೋಡುಗರಿಗೆ ರಸದೌತಣ ನೀಡುತ್ತಿದ್ದಾರೆ.

ಈ ಐಪಿಎಲ್ನಲ್ಲಿ ಅವರು ಇನಿಂಗ್ಸ್ಗೆ ಆರಂಭ ನೀಡುತ್ತಿದ್ದಾರೆ. ಬಹುತೇಕ ಇದುವರೆಗೆ ಆಗಿರುವ ಪಂದ್ಯಗಳಲ್ಲಿ ಅವರ ಆರಂಭಿಕ ಜೊತೆಗಾರ ಫಿಲ್ ಸಾಲ್ಟ್ ಹೆಚ್ಚು ಸಫಲರಾಗಲಿಲ್ಲ. ಸಾಲ್ಟ್ ಗಾಯಗೊಂಡ ನಂತರ ಸ್ಥಾನ ಪಡೆದಿರುವ ಜೇಕಬ್ ಬೆಥೆಲ್ ಕೂಡ ಲಯ ಕಂಡುಕೊಂಡಿಲ್ಲ. ಒಂದು ಬದಿಯಲ್ಲಿ ಬ್ಯಾಟರ್ ಬೇಗನೆ ಔಟಾದಾಗ ಇನ್ನೊಬ್ಬರ ಮೇಲೆ ಒತ್ತಡ ಬೀಳುತ್ತದೆ. ಆದರೆ ವಿರಾಟ್ ಬಹಳ ಚಾಣಾಕ್ಷತೆ ಮತ್ತು ತಮ್ಮ ಅನುಭವದ ಬಲದಿಂದ ಒತ್ತಡವನ್ನು ನಿಭಾಯಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬರುವ ದೇವದತ್ತ ಪಡಿಕ್ಕಲ್ ಅವರಿಗೆ ಬೀಸಾಟವಾಡುವ ಅವಕಾಶ ಕೊಟ್ಟು ಇನ್ನೊಂದು ಬದಿಯಲ್ಲಿ ತಾವು ಗಟ್ಟಿಯಾಗಿ ನಿಲ್ಲುತ್ತಾರೆ. ಒಂದೊಮ್ಮೆ ದೇವದತ್ತ ಕೂಡ ನಿರ್ಗಮಿಸಿದಾಗ ಮುಂದೆ ಬರುವ ಬ್ಯಾಟರ್ಗಳಿಗೂ ಜೊತೆಯಾಗಿ ಬೆಂಬಲ ನೀಡುತ್ತಾರೆ. ಇದರಿಂದಾಗಿ ಈ ಸಲ ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗವು ಬಲಾಢ್ಯ ಶಕ್ತಿಯಾಗಿ ಹೊರಹೊಮ್ಮಿದೆ.

ಇದರಿಂದಾಗಿ ವಿರಾಟ್ ಬ್ಯಾಟರ್ ಆಗಿ ಅಷ್ಟೇ ಅಲ್ಲ, ಮಾರ್ಗದರ್ಶಕರಾಗಿಯೂ ತಂಡವನ್ನು ಸಬಲಗೊಳಿಸುತ್ತಿದ್ದಾರೆ. ಹೊಸ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ.

‘ಪಂದ್ಯದಲ್ಲಿ ಗೆಲುವು ಕೈಬಿಟ್ಟು ಹೋಗುತ್ತಿದೆ ಎಂಬ ಸಂದರ್ಭದಲ್ಲಿ ವಿರಾಟ್ ಭಾಯ್ (ಅಣ್ಣ) ಪೆಪ್ ಟಾಕ್ ಮಾಡಿ ಹುರಿದುಂಬಿಸುವ ರೀತಿ ಅಮೋಘ. ನಾವಿನ್ನೂ ಗೇಮ್ನಲ್ಲಿದ್ದೇವೆ, ಸೋತಿಲ್ಲ. ನಮ್ಮ ಶ್ರೇಷ್ಠ ಸಾಮರ್ಥ್ಯವನ್ನು ತೋರಿಸುವ ಸಮಯ ಇದು, ಮುನ್ನುಗ್ಗಿ ಎಂದು ಅವರು ಹೇಳುತ್ತಾರೆ. ಅಲ್ಲದೇ ಫೀಲ್ಡ್ನಲ್ಲಿ ತಮ್ಮ ಹಾವಭಾವ, ಪಾದರಸದಂತಹ ಕ್ಷೇತ್ರರಕ್ಷಣೆ ಮೂಲಕ ಸಂಚಲನ ಮೂಡಿಸುತ್ತಾರೆ’ ಎಂದು ಆರ್ಸಿಬಿಯ ಯುವ ಆಟಗಾರ ಮಂಗೇಶ್ ಯಾದವ್ ಹೇಳುತ್ತಾರೆ.

ಮಹೇಂದ್ರಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಐಪಿಎಲ್ನಲ್ಲಿ ಇನ್ನು ಹೆಚ್ಚು ವರ್ಷ ಆಡಲಿಕ್ಕಿಲ್ಲ. ಆದರೆ ಇಲ್ಲಿಯವರೆಗೂ ಅವರು ದೀರ್ಘ ಬಾಳಿಕೆಯ ಆಟಗಾರನಾಗಿ ಬೆಳೆಯುವ ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ವಿರಾಟ್ ಅವರು ಕ್ರಿಕೆಟ್ ಆಟಗಾರರಿಗೆ ಫಿಟ್ನೆಸ್ ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡಿಸಿದ್ದಾರೆ. ಅವರು ಆಟದಲ್ಲಿ ಮಾಡಿದ ದಾಖಲೆಗಳದ್ದು ಒಂದು ತೂಕವಾದರೆ, ಫಿಟ್ನೆಸ್ ಸಾಧನೆಯದ್ದು ಮತ್ತೊಂದು ತೂಕ. 37 ವರ್ಷದ ವಿರಾಟ್ ವಿಕೆಟ್ ಮಧ್ಯೆ ಓಡುವ ವೇಗಕ್ಕೆ ಉಳಿದ ಬ್ಯಾಟರ್ಗಳು ಸರಿಸಮನಾಗಿ ನಿಲ್ಲಲು ಇನ್ನೂ ಹೆಚ್ಚು ಕಸರತ್ತು ಮಾಡಲೇಬೇಕಾದ ಅನಿವಾರ್ಯತೆ ಇದೆ.

ವಿರಾಟ್ ಐಪಿಎಲ್ನಲ್ಲಿ 9 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಏಕೈಕ ಆಟಗಾರ. ಅಲ್ಲದೆ 409 ಟಿ20 ಇನಿಂಗ್ಸ್ಗಳಿಂದ 14 ಸಾವಿರ ರನ್ ಪೇರಿಸಿದ್ದಾರೆ. ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ್ದಾರೆ. ತಮ್ಮ ಸಮಕಾಲೀನ ಆಟಗಾರರಲ್ಲದೆ, ನವಪ್ರತಿಭೆಗಳೊಂದಿಗಿನ ಸ್ಪರ್ಧೆಯಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಅವರೇ ಸಾಟಿಯಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.