ಸೋಮವಾರ, ಫೆಬ್ರವರಿ 24, 2020
19 °C

ಸಹ ಆಟಗಾರರಿಗಾಗಿ ಪಾನಿಪುರಿ ಮಾಡಿದ ಧೋನಿ: ರುಚಿ ಹೆಚ್ಚಾಯಿತು ಎಂದ ಅಭಿಮಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2019ರ ಏಕದಿನ ವಿಶ್ವಕಪ್‌ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಎಂ.ಎಸ್‌. ಧೋನಿ ಈಗ ಏನು ಮಾಡಿದರೂ ಸುದ್ದಿಯೇ. ತಮ್ಮ ನಿವೃತ್ತಿ ಕುರಿತು ಕ್ರಿಕೆಟ್‌ ಜಗತ್ತಿನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ ಅದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಧೋನಿ ತಮ್ಮ ಪಾಡಿಗೆ ರಜೆಯನ್ನು ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ಅವರು ಪಾನಿಪುರಿ ತಯಾರಿಸುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ.

45 ಸೆಕೆಂಡ್‌ ಇರುವ ಈ ವಿಡಿಯೊದಲ್ಲಿ, ಸಹ ಆಟಗಾರರಾದ ಆರ್‌.ಪಿ. ಸಿಂಗ್ ಹಾಗೂ ಪಿಯೂಷ್‌ ಚಾವ್ಲಾ ಅವರಿಗಾಗಿ ಪಾನಿಪುರಿ ತಯಾರಿಸುತ್ತಿರುವುದು ಸೆರೆಯಾಗಿದೆ. ಆದಾಗ್ಯೂ ಈ ವಿಡಿಯೊ ಎಲ್ಲಿಯದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ವಿಡಿಯೊವನ್ನು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಎಂಎಸ್‌ ಧೋನಿ ಫ್ಯಾನ್ಸ್‌ ಕ್ಲಬ್‌ ಮಾಲ್ಡೀವ್ಸ್‌ನಲ್ಲಿ ಧೋನಿ ಪಾನಿಪುರಿ ಮಾಡಿರುವುದಾಗಿ ಬರೆದುಕೊಂಡಿದೆ.

‘ನೇರವಾಗಿ ಮಾಲ್ಡೀವ್ಸ್‌ನಿಂದ. ನಮ್ಮ ರಾಕ್‌ಸ್ಟಾರ್‌ ಪಾನಿಪುರಿ ಮಾಡುತ್ತಿದ್ದಾರೆ. ನಮ್ಮ ನೆಚ್ಚಿನ ತಿನಿಸು ಈಗ ಮತ್ತಷ್ಟು ರುಚಿಕರವಾಗಿದೆ’ ಎಂದು ಉಲ್ಲೇಖಿಸಿದೆ. ಈ ಮೊದಲು ಧೋನಿ ಬೀಚ್‌ನಲ್ಲಿ ವಾಲಿಬಾಲ್‌ ಆಡುತ್ತಿರುವ ದೃಶ್ಯವೊಂದು ವೈರಲ್‌ ಆಗಿತ್ತು.

ಇದೇ ವರ್ಷ ಮಾರ್ಚ್‌ 29ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಇತ್ತೀಚೆಗೆ ಪ್ರಕಟವಾದ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಧೋನಿ ಹೆಸರನ್ನು ಬಿಸಿಸಿಐ ಕೈಬಿಟ್ಟಿತ್ತು. ಹೀಗಾಗಿ ಅವರ ಕ್ರಿಕೆಟ್‌ ಬದುಕಿನ ಕುರಿತು ಸಾಕಷ್ಟು ಗೊಂದಲ ಮೂಡಿವೆ.

ಭಾರತ ತಂಡ ಧೋನಿ ನಾಯಕತ್ವದಲ್ಲಿ 2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು